ಬಿಡದಿ (ರಾಮನಗರ): ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ. ಜೊತೆಗೆ ಯೋಜನಾ ಪ್ರದೇಶದ ರೈತರು ಸಹ ಪತ್ರ ಬರೆದು ಅಂಚೆ ಮೂಲಕ ಕಳಿಸಲಿದ್ದಾರೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
‘ಕೇಂದ್ರ ಸರ್ಕಾರದ ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆ ವಿರುದ್ಧ ‘ಗ್ರೀನ್ ಓವರ್ ಗ್ರೀಡ್’ (ಹಸಿರಿನ ಮೇಲೆ ದುರಾಸೆ) ಎಂದು ದನಿ ಎತ್ತಿರುವ ರಾಹುಲ್ ಅವರು, ಅರಣ್ಯ ಮತ್ತು ಪರಿಸರ ರಕ್ಷಣೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಅವರದ್ದೇ ಪಕ್ಷದ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಉಪನಗರಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿದೆ. ಆ ಬಗ್ಗೆಯೂ ತಮ್ಮ ಸರ್ಕಾರದ ಕಿವಿ ಹಿಂಡಿ ಯೋಜನೆ ಕೈ ಬಿಡುವಂತೆ ಪತ್ರದಲ್ಲಿ ಒತ್ತಾಯಿಸಲಾಗುವುದು’ ಎಂದು ಹೋಬಳಿಯ ಅರಳಾಳುಸಂದ್ರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.’ರಾಹುಲ್ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಹಾಗೂ ಪರಿಸರದ ಬಗ್ಗೆ ಕಾಳಜಿ ಇದ್ದರೆ, ಬಿಡದಿ ಉಪನಗರ ಯೋಜನೆ ಕೈ ಬಿಡುವಂತೆ ತಮ್ಮ ಖಾಸಾ ವ್ಯಕ್ತಿಯಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಿವಿಮಾತು ಹೇಳಬೇಕು. ಸಾಧ್ಯವಾದರೆ ಒಮ್ಮೆ ಬಿಡದಿಗೆ ಭೇಟಿ ನೀಡಿ, ಇಲ್ಲಿರುವುದು ಬರಡು ಭೂಮಿಯೊ ಅಥವಾ ಫಲವತ್ತಾದ ಭೂಮಿಯೊ ಎಂದು ಪರಿಶೀಲಿಸಬೇಕು’ ಎಂದರು.
‘ತಮ್ಮ ಕ್ಷೇತ್ರದ ಜನರಿಗೆ ಯಾರೂ ತಮ್ಮ ಜಮೀನು ಮಾರಾಟ ಮಾಡಬೇಡಿ, ನಿಮ್ಮ ಭೂಮಿಗೆ ಚಿನ್ನದ ಬೆಲೆ ತಂದು ಕೊಡುವೆ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಅವರು, ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕು ಜನರ ವಿಷಯದಲ್ಲಿ ಯಾಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇಲ್ಲಿರುವವರು ರೈತರಲ್ಲವೆ? ಅವರ ಕ್ಷೇತ್ರದವರು ಮಾತ್ರ ರೈತರೇ?’ ಎಂದು ಪ್ರಶ್ನಿಸಿದರು.
ರಿಯಲ್ ಎಸ್ಟೇಟ್ ದಂಧೆ:’ಸರ್ಕಾರ ಉಪನಗರದ ಹೆಸರಿನಲ್ಲಿ ರೈತರ ಜಮೀನು ಸ್ವಾಧೀನಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡಲು ಹೊರಟಿದೆ. ರೈತರಿಗೆ ಒಂದು ಎಕರೆಗೆ ₹2.5 ಕೋಟಿಪ ರಿಹಾರ ಕೊಡುವ ಸರ್ಕಾರ, ಮುಂದೆ ಅದನ್ನು ಚದರ ಅಡಿ ಲೆಕ್ಕದಲ್ಲಿ ಬಿಡಿಬಿಡಿಯಾಗಿ ಮಾರಾಟ ಮಾಡಿ ಎಕರೆಗೆ ₹25 ಕೋಟಿಯಷ್ಟು ಲಾಭ ಪಡೆಯಲಿದೆ. ಯೋಜನೆಯಿಂದ ಸುಮಾರು ₹33 ಸಾವಿರ ಕೋಟಿ ಲಾಭ ಗಳಿಸಲು ಸರ್ಕಾರ ಮುಂದಾಗಿದೆ’ ಎಂದು ನಿಖಿಲ್ ಆರೋಪಿಸಿದರು.“ಯೋಜನೆಯು ಸರ್ಕಾರಕ್ಕೆ ಹೊರೆಯಾಗಲಿದೆ ಎಂದು ಆರ್ಥಿಕ ಇಲಾಖೆ ಅಭಿಪ್ರಾಯಪಟ್ಟರೂ, ತರಾತುರಿಯಲ್ಲಿ ಸಚಿವ ಸಂಪುಟವು ಯೋಜನೆಗೆ ಒಪ್ಪಿಗೆ ಕೊಟ್ಟಿದೆ. ಅನುಷ್ಠಾನಕ್ಕಾಗಿ ಶೇ 87ರಷ್ಟು ಸಾಲವನ್ನು ಹುಡೋದಿಂದ ಪಡೆಯಲಾಗುತ್ತಿದೆ. ಅದಕ್ಕಾಗಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಸಾರ್ವಜನಿಕ ಆಸ್ತಿಗಳನ್ನು ಅಡಮಾನ ಇಡಲಾಗುತ್ತಿದೆ. ಇದು ಯಾವ ರೀತಿಯ ಅಭಿವೃದ್ಧಿ?’ ಎಂದು ವಾಗ್ದಾಳಿ ನಡೆಸಿದರು.











































