ದಾವಣಗೆರೆ: ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾವಣಗೆರೆಯಲ್ಲಿ ಮೂವರು ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.ಚಿತ್ರದುರ್ಗದ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ ಅವರ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಎರಡು ಮನೆ, ಹುಬ್ಬಳ್ಳಿಯ ಕೆಎಸ್ ಆರ್ ಟಿಸಿ ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ದಾವಣಗೆರೆ ಆಂಜನೇಯ ಬಡಾವಣೆಯಲ್ಲಿರುವ ಮನೆ, ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.ದಾವಣಗೆರೆಯ ಶಿವಕುಮಾರ್ ಬಡಾವಣೆಯಲ್ಲಿಯ ಮನೆ, ಹರಪನಹಳ್ಳಿ ಒಂದು ಮನೆ ಮೇಲೆ ದಾಳಿ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆದಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯನಗರ ದಾವಣಗೆರೆಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.ಮೂವರು ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಒಟ್ಟು 18 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳ ಮನೆಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಸ್ಥಿರ ಚರಾಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.ಹುಬ್ಬಳ್ಳಿ ಎನ್ ಡಬ್ಲ್ಯೂಕೆಎಸ್ ಆರ್ ಟಿಸಿ ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ಆಂಜನೇಯ ಬಡಾವಣೆಯಲ್ಲಿರುವ ಮನೆಯಲ್ಲಿ ಶೋಧ ಮಾಡುವ ಸಂದರ್ಭದಲ್ಲಿ 40 ಲಕ್ಷ ರೂ. ನಗದು ಹಣ ಸಿಕ್ಕಿದೆ ಎಂದು ಹೇಳಲಾಗಿದೆ.











































