ಗೃಹಲಕ್ಷ್ಮೀ ಯೋಜನೆಯ ₹5 ಸಾವಿರ ಕೋಟಿ ಏನಾಯ್ತು?: ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ

Picture of Savistara

Savistara

Bureau Report

ಮಂಡ್ಯ: ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೂ ಮೊದಲು ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ₹5 ಸಾವಿರ ಕೋಟಿ ಏನಾಯ್ತು ಎಂದು ಜನತೆ ಮುಂದೆ ಹೇಳಿ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕರೆಯಲಾಗಿದೆ. ಎರಡೂ ಯೋಜನೆಗಳಲ್ಲಿ ಲೋಪದೋಷಗಳಿವೆ ಎಂದು ಸರ್ಕಾರವೇ ಹೇಳಿದೆ. ಮರು ಅರ್ಜಿ ಸ್ವೀಕಾರ ಒಳ್ಳೆಯ ಉದ್ದೇಶವೇ ಇರಬಹುದು. ಅದರ ನೆಪದಲ್ಲಿ ನಿಜವಾದ ಫಲಾನುಭವಿಗಳಿಗೆ ತೊಂದರೆ ಆಗಬಾರದು’ ಎಂದರು.“ಕಚೇರಿಗೆ ಒಳಗೆ ಲಂಚ ತೆಗೆದುಕೊಳ್ಳಬೇಡಿ ಎಂದು ಸಿಎಂ ಹೇಳಿದ್ದಾರೆ. ಹಾಗಿದ್ದರೆ ಕಚೇರಿ ಒಳಗೆ ದುಡ್ಡು ತೆಗೆದುಕೊಳ್ಳಬೇಡಿ, ಹೊರಗಡೆ ತೆಗೆದುಕೊಳ್ಳಿ ಎಂದು ಅದರ ಅರ್ಥವೇ?. ಸಿಎಂ ಕಚೇರಿಯಿಂದಲೇ ಭ್ರಷ್ಟಾಚಾರ ಮುಕ್ತ ಆಡಳಿತ ಶುರುವಾಗಲಿ. ಅಲ್ಲಿ ಭ್ರಷ್ಟಾಚಾರ ನಡೆದರೆ ಯಾರು ನೋಡುತ್ತಾರೆ, ಅದಕ್ಕೆ ಯಾರು ಜವಾಬ್ದಾರಿ’ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ‘ಇದು ಆಶ್ಚರ್ಯಕರ ವಿಷಯ ಅಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿನಿತ್ಯ ದಂಧೆ ನಡೆಯುತ್ತಿದೆ. ಈ ಹಿಂದಿನ ಮುಖ್ಯಮಂತ್ರಿ (ಸಿದ್ದರಾಮಯ್ಯ) ತವರಲ್ಲೇ ಡ್ರಗ್ ತಯಾರಾಗುವ ವಿಚಾರ ಬೆಳಕಿಗೆ ಬಂದಿತ್ತು. ಬೇರೆ ರಾಜ್ಯ, ದೇಶಗಳಿಂದ ಬಂದು ಬೆಂಗಳೂರನ್ನ ಡ್ರಗ್ಸ್ ಸೆಂಟರ್ ಮಾಡಿಕೊಂಡಿದ್ದಾರೆ. ಇದರಿಂದ ಸಾಕಷ್ಟು ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗೃಹ ಸಚಿವರು ವಿರೋಧ ಪಕ್ಷಗಳನ್ನು ಟೀಕೆ ಮಾಡುವುದಕ್ಕೆ ಕೊಡುವ ಸಮಯವನ್ನು, ಡ್ರಗ್ಸ್ ದಂಧೆ ನಿಯಂತ್ರಿಸಲು ಕೊಡಲಿ’ ಎಂದು ಟೀಕಿಸಿದರು.

[t4b-ticker]
error: Content is protected !!