ಡಿಕೆಶಿ ಸಿಎಂ ಆಗುವ ಕನಸು ಮಾತ್ರ ಕಾಣಬೇಕು, ಯಾರು ಬಿಟ್ಟುಕೊಡ್ತಾರೆ : ಕೇಂದ್ರ ಸಚಿವ ಕುಮಾರಸ್ವಾಮಿ

Picture of Savistara

Savistara

Bureau Report

ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಡಿಕೆಶಿ ಸಿಎಂ ಆಗುವ ಬಗ್ಗೆ ಮಾತನಾಡಿದ್ದು, ಅದು ಬರೀ ಕನಸು ಎಂದು ವ್ಯಂಗ್ಯವಾಡಿದ್ದಾರೆ.

ಮಂಡ್ಯ : ಡಿಕೆಶಿ ಏನಿದ್ರು ಸಿಎಂ ಆಗುವ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡ್ತಾರೆ? ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.ಮಂಡ್ಯದಲ್ಲಿಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆಟೋ ಸ್ಟಾಂಡ್ ನಿರ್ಮಾಣದ ಗುದ್ದಲಿ ಪೂಜೆಯನ್ನು ಅವರು ಭಾನುವಾರ ನೆರವೇರಿಸಿದರು. ಹಲವು ವರ್ಷಗಳಿಂದ ಆಟೋ ಸ್ಟಾಂಡ್‌ಗೆ ಬೇಡಿಕೆ ಇತ್ತು. ಇಂದು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. CSR ಅನುದಾನದಲ್ಲಿ ಗುದ್ದಲಿ ಪೂಜೆ ಕಾಮಗಾರಿಗೆ ಚಾಲನೆ ನೀಡಿದರು.

ನಂತರ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿಕೆಶಿ ಸಿಎಂ‌ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕೈಯಲ್ಲಿ ಏನೂ ಇಲ್ಲ, ಎಲ್ಲಾ ಭಗವಂತನ ಕೈಯಲ್ಲಿ ಇರೋದು ಎಂದು ಹೇಳಿದ್ದಾರೆ.ಬಸ್ ನಿಲ್ದಾಣದ ಮುಂಭಾಗ ಆಟೋ ಸ್ಟ್ಯಾಂಡ್ಗೆ ಚಾಲನೆ ನೀಡಿದ್ದೇನೆ. ಚಾಲಕರಿಗೆ ನೀವೇ ಗುದ್ದಲಿ ಪೂಜೆ ಮಾಡಿ ಎಂದಿದ್ದೆ. ದೊಡ್ಡ ಯೋಜನೆಗೆ ಚಾಲನೆ ಕೊಟ್ಟಾಗಲೂ ನಾನು ಪ್ರಚಾರಕ್ಕೆ ಎಂದು ಕೈ ಹಾಕಲಿಲ್ಲ‌. ಅದು ನನ್ನ ಜಾಯಮಾನವೂ ಅಲ್ಲ. ಪ್ರತಿ ಪಂಚಾಯತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ ಮಾಡಬೇಕು ಎಂಬುದು ಕನಸಿದೆ ಎಂದರು.

ಮೊದಲ ಹಂತವಾಗಿ ₹8 ಕೋಟಿ ಯೋಜನೆಯಲ್ಲಿ ಶಾಲೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. 100 ಬಸ್ ಸೆಲ್ಟರ್ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದೇವೆ. ಜಿಲ್ಲೆಯ ವಿಕಲಚೇತನರಿಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಿದ್ದೇನೆ. ಕಾರ್ಖಾನೆಯನ್ನು ತರಬೇಕು ಎಂಬುದು ಮಂಡ್ಯ ಜಿಲ್ಲೆಯ ಜನರ ನಿರೀಕ್ಷೆಯಾಗಿದೆ. ರಾಜ್ಯ ಸರ್ಕಾರದ ಸಹಕಾರ ಕೊಟ್ಟು ಪ್ರೋತ್ಸಾಹ ಮಾಡಿದ್ರೆ ಅದನ್ನ ಮಾಡಬಹುದು. ಆದ್ರೂ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ನಾನು ಪ್ರಯತ್ನ ಮಾಡ್ತಿದ್ದೇನೆ. ಟೀಕೆಗಳಿಗಿಂತ ಹೆಚ್ಚಾಗಿ ನನ್ನ ಡ್ಯೂಟಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ರಾಜ್ಯ ಸರ್ಕಾರದ ಸಹಕಾರದ ಬಗ್ಗೆ ಈಗ ಚರ್ಚೆ ಮಾಡಲ್ಲ ಎಂದು ಹೇಳಿದರು.

ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು? ಎಂಬ ಕೈ ನಾಯಕರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಗೆ ಕಾಂಗ್ರೆಸ್ನವರ ಕೊಡುಗೆ ಏನು?. ಕೃಷಿ ವಿವಿಯನ್ನ ಎಷ್ಟು ವರ್ಷ ಇಟ್ಟುಕೊಳ್ತಾರೆ?. ಎಷ್ಟು ವರ್ಷ ನಡೆಸುತ್ತಾರೆ. ಬೀದರ್ ನಲ್ಲಿ ಪಶು ವೈದ್ಯಕೀಯ ವಿವಿಯನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಹಣ ಎಷ್ಟು ಕೊಟ್ಟಿದ್ದಾರೆ. ಎಷ್ಟು ವಿವಿಯನ್ನ ಇವರು ಮುಚ್ಚಿದ್ದಾರೆ. ಬರೀ ಪ್ರಚಾರಕ್ಕೆ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ಗೆ ಹೆಚ್ಡಿಕೆ ತಿರುಗೇಟು ಕೊಟ್ಟರು.ಹಣ ಕೊಟ್ಟವರಿಗೆ ಮನೆ ಎಂಬ ಆಳಂದ ಶಾಸಕ ಬಿ. ಆರ್. ಪಾಟೀಲ್ ಆಡಿಯೋ ವಿಚಾರದ ಕುರಿತು ಮಾತನಾಡಿ, ಆ ರೀತಿ ಮಾತಾಡಿರೋದ್ರಲ್ಲಿ ಯಾವ ಆಶ್ಚರ್ಯ ಇಲ್ಲ. ಇದು ಎಲ್ಲರಿಗೂ ಗೊತ್ತಿರೋದು. ಸರ್ಕಾರದ ಹಲವು ಇಲಾಖೆಯಲ್ಲಿ ದುಡ್ಡು ರಿಲೀಸ್ ಆಗಲು ಶಾಸಕರು ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್ ಕೊಡಿ‌ ಸರ್ ದುಡ್ಡು ತಗೊಂಡು ಬರ್ತೀವಿ ಅಂತಾರೆ. ಹೆಸರಿಗೆ ಶಾಸಕರ ಲೆಟರ್, ಮಧ್ಯವರ್ತಿಗಳು ದುಡ್ಡು ಕೊಟ್ಟು ಹಣ ತರುತ್ತಾರೆ ಎಂದಿದ್ದಾರೆ.

ಬಹಳಷ್ಟು ನನ್ನ ಬಳಿಯೂ ಮನೆ ತರಲು ಅಷ್ಟುಕೊಟ್ಟೆವು ಎಂದು ಚರ್ಚೆ ಮಾಡಿದ್ದಾರೆ. ಎಲ್ಲಾ ಇಲಾಖೆಯಲ್ಲೂ ಇದು ನಡೆಯುತ್ತಿದೆ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆ ಬರುವವರೆಗೆ ಕಾಯಬೇಕು.ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸಚಿವರುಗಳೇ ಎಲ್ಲಾ ಶುರು ಮಾಡಿಕೊಂಡಿದ್ದಾರೆ. ಎಷ್ಟು ಕೊಡಬೇಕು ಅಂತಾ ಆಯಾ ಇಲಾಖೆಗಳಲ್ಲಿ ಅವರೇ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ರೋಡ್ ಟನಲ್ ನಿರ್ಮಾಣ ವಿಚಾರವಾಗಿ ಮಾತನಾಡಿ, ರೋಡ್ ಟನಲ್‌ನ್ನು‌ ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಮಾಡಲಿ. ನೋಡೋಣ ಯಾವ ಟನಲ್‌ ಮಾಡ್ತಾರೆ ಅಂತ. ಅವರ ಮಾತುಗಳು ಯಾವುವು ಆಗಲ್ಲ. ಈಗ 2027ಕ್ಕೆ ಎತ್ತಿನ ಹೊಳೆ ನೀರನ್ನು ಕೋಲಾರಕ್ಕೆ ತರುತ್ತೇವೆ ಎಂದಿದ್ದಾರೆ. ಇನ್ನು ಕಾಡುಮನೆ ಎಸ್ಟೇಟ್‌ನಿಂದ ಮುಂದೆ ಎತ್ತಿನ ಹೊಳೆ‌ ಬಂದಿಲ್ಲ. ಈಗಾಗಲೇ 14, 15 ಸಾವಿರ ಕೋಟಿ ಲೂಟಿ‌ ಆಗಿದೆ. 2013ರಲ್ಲಿ ಇದೇ ಸರ್ಕಾರ ಗುದ್ದಲಿ ಪೂಜೆ ಮಾಡಿತ್ತು. ಎರಡೇ ವರ್ಷದಲ್ಲಿ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಕೊಡ್ತೀವಿ ಅಂದ್ರು ಆಗ. 2013 ರಿಂದ 2025ಕ್ಕೆ ಬಂದ್ರು ಇನ್ನೂ ನೀರಿಲ್ಲ. ಎತ್ತಿನಹೊಳೆ ನೀರು ಕೊಡ್ತೀವಿ ಅಂತ ಬೆಂಗಳೂರು ಕೊಳಚೆ ನೀರು ಬಿಟ್ಟಿದ್ದಾರೆ. ಈಗ ಅವರು ಬೆಳೆಯೋ‌ ತರಕಾರಿನೂ ಯಾರೂ ಕೊಳ್ಳಬಾರದು ಹಾಗೆ ಮಾಡಿದ್ದಾರೆ ಎಂದಿದ್ದಾರೆ.

ಮೈಶುಗರ್ ಸ್ಕೂಲ್‌ನ್ನು ಲೀಸ್‌ಗೆ ನೀಡುವ ವಿಚಾರವಾಗಿ ಮಾತನಾಡಿ, ಮೈಶುಗರ್ ಸ್ಕೂಲ್‌ನ್ನು ಮಾಡೆಲ್ ಶಾಲೆ ಮಾಡಲು ತಯಾರಿದ್ದೇನೆ. ಈ ಬಗ್ಗೆ ಶಾಲೆಯ ಟ್ರಸ್ಟಿಗಳಿಗೆ ಹೇಳಿದ್ದೇನೆ. ಅದನ್ನು ಉಪಯೋಗಿಸಿಕೊಳ್ಳುವುದು ಅವರಿಗೆ ಸೇರಿದ್ದು. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡೋದು ಅಂದ್ರೆ ಹೇಗೆ?. ಇದು ಹಗಲು ದರೋಡೆ ಆಗಿದೆ. ಮೈಶುಗರ್ ಶಾಲೆ ಅಭಿವೃದ್ಧಿಗೆ 25 ಕೋಟಿ ಬೇಕು ಅಂದ್ರು ಮಾಡಲು ತಯಾರಿದ್ದೇನೆ. ಮಂಡ್ಯ ಜಿಲ್ಲೆಗೆ ನಾನೇನು ಮಾಡಿಲ್ಲ ಅಂತಾರೆ. ಇವರೇನೋ ಕಿತ್ತು ಗುಡ್ಡೆ ಹಾಕಿದಾರಂತಲ್ಲ. ಕಾಂಗ್ರೆಸ್ ನಾಯಕರು ಇದೇ ಕಿತ್ತು ಗುಡ್ಡೆ ಹಾಕುತ್ತಿರೋದು ಎಂದು ಕಿಡಿಕಾರಿದ್ದಾರೆ. ಈ ವೇಳೆ ಡಿಸಿ ಡಾ. ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸೇರಿ ಮತ್ತಿತರರು ಉಪಸ್ಥಿತರಿದ್ದರು.

[t4b-ticker]
error: Content is protected !!