
ಸಂಘದ ಕಚೇರಿ ‘ಕೇಶವ ಕೃಪಾ’ದಲ್ಲಿ ಶುಕ್ರವಾರ ಮಧ್ಯಾಹ್ನ ಜಂಟಿ ಸಭೆ ನಡೆಯಲಿದೆ. ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನ, ಸಮನ್ವಯದ ಕುರಿತಾಗಿ ಚರ್ಚೆಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ನಡೆದ ಸಭೆಯ ಮುಂದುವರಿದ ಭಾಗವೆಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ರಚಿಸಿದ ಕೋಮುದ್ವೇಷ ಪ್ರಚೋದನೆ ನಿಗ್ರಹ ವಿಶೇಷ ಕಾರ್ಯಪಡೆ ಕಾರ್ಯವೈಖರಿ, ಕರಾವಳಿ ಪ್ರದೇಶದ ಸ್ಥಿತಿಗತಿ, ಹಿಂದು, ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾವೆಗಳು, ಪಕ್ಷದಿಂದ ಕಾನೂನು ನೆರವು ವಿಷಯ ಚರ್ಚೆಯಾಗಲಿದೆ ಎಂದು ತಿಳಿದಿದೆ.
ಕಾಂಗ್ರೆಸ್ ಸರ್ಕಾರದ ಮತಬ್ಯಾಂಕ್, ಓಲೈಕೆ ರಾಜಕಾರಣ, ಒಮ್ಮುಖದ ಕ್ರಮಗಳ ವಿರುದ್ಧ ಪಕ್ಷ ಹಾಗೂ ಹಿಂದುಪರ ಸಂಘಟನೆಗಳ ಮುಖಂಡರು ಸಮನ್ವಯ ಸಾಧಿಸಿ ಹೋರಾಟ ನಡೆಸುವ ಬಗ್ಗೆ ಪ್ರಸ್ತಾಪವಾಗಲಿದೆ ಎಂದು ಮೂಲಗಳು ಹೇಳಿವೆ.
ಗಣತಿ ಜಾಗೃತಿ ತಯಾರಿ ಪರಾಮರ್ಶೆ: ಕೇಂದ್ರ ಸರ್ಕಾರ ತೆಗೆದುಕೊಂಡ ಹಲವು ನಿರ್ಣಯಗಳ ವಿಚಾರ ವಿನಿಮಯವಾಗಲಿದೆ. ಈ ಪೈಕಿ ಜನಗಣತಿ ಜತೆಗೆ ಜಾತಿ ಗಣತಿ ಮುಖ್ಯಾಂಶವಾಗಿರಲಿದೆ. 1931ರ ನಂತರ ನಡೆಯುತ್ತಿರುವ ಅತ್ಯಂತ ಪ್ರಮುಖ ಗಣತಿ ಪ್ರಕ್ರಿಯೆಯಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಿ ಯಶಸ್ವಿಗೊಳಿಸಲು ಮಾಡಿಕೊಂಡ ಸಿದ್ಧತೆಗಳು ಪರಾಮರ್ಶೆಯಾಗಲಿವೆ. ಜಾತಿ ಗಣತಿಗೆ ಶೈಕ್ಷಣಿಕ, ಸಾಮಾಜಿಕ ಜತೆಗೆ ಸಾಂಸ್ಕೃತಿಕ ಅಂಶಗಳನ್ನು 32 ಮಾನದಂಡಗಳನ್ನು ಅನುಸರಿಸುವ ಸಂಭವವಿದೆ. ಕೇಂದ್ರ ಸರ್ಕಾರಕ್ಕೆ ಜಾತಿ ಗಣತಿ ನಡೆಸುವ ಸಂವಿಧಾನಾತ್ಮಕವಾದ ಅಧಿಕಾರವಿದೆ ಎಂಬುದನ್ನು ಜನರಿಗೆ ಮನಗಾಣಿಸುವ ಅಗತ್ಯವಿದೆ.ಯಾರೆಲ್ಲ ಭಾಗಿ?
ಸಂಘದ ಸಹಕಾರ್ಯವಾಹ ಸಿ.ಆರ್.ಮುಕುಂದ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಶಾಸಕರಾದ ವಿ.ಸುನಿಲ್ ಕುಮಾರ್, ಎನ್.ರವಿಕುಮಾರ್, ಸಿ.ಟಿ.ರವಿ ಸೇರಿ 15 ಜನ ನಾಯಕರನ್ನು ಆಹ್ವಾನಿಸಲಾಗಿದೆ ಎಂದು ತಿಳಿದಿದೆ.
ಬದಲಾವಣೆ ಚರ್ಚೆ ಕಾಲ್ಪನಿಕ
ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕರ ಬದಲಾವಣೆ, ರಾಜ್ಯಾಧ್ಯಕ್ಷರ ಬಗ್ಗೆ ಅಪಸ್ವರ ಎಂಬಿತ್ಯಾದಿ ಊಹಾಪೋಹಕ್ಕೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೆರೆ ಎಳೆದಿದ್ದು, ಗೊಂದಲ, ಬದಲಾವಣೆ ಚರ್ಚೆ ಕೇವಲ ಕಾಲ್ಪನಿಕ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಕೆಲಸ- ಸಂಘಟನಾ ಕಾರ್ಯ ಮಾಡಿದ್ದೇನೆ ಎಂಬ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು, ಮುಖಂಡರಲ್ಲೂ ಇದೆ. ಹಾಗಾಗಿ ಒಳ್ಳೆಯದಾಗಲಿದೆ ಎಂದು ನಗುತ್ತ ಉತ್ತರಿಸಿದರು. ರಾಜ್ಯದ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಗೊಂದಲಗಳಿದ್ದು ಮುಂದೂಡುತ್ತಿದ್ದಾರೆ ಎಂಬುದು ಸತ್ಯವಲ್ಲ. ಈಗ ದೇಶದ 14 ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿದೆ. ಅತಿ ಶೀಘ್ರದಲ್ಲೇ ಇನ್ನು ಆರೇಳು ರಾಜ್ಯಗಳ ಅಧ್ಯಕ್ಷರ ಘೋಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಅದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಲಿದೆ.













































