ವಿಧಾನ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲು

Picture of Savistara

Savistara

Bureau Report

ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ್ದ ಆರೋಪದಡಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯ ಸಚೇತಕ ಎನ್.ರವಿಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಇಂದು ಎಫ್ಐಆರ್ ದಾಖಲಾಗಿದೆ.ಜೆ.ಪಿ.ನಗರದ ನಂದಾದೀಪ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಎಂಬವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯಸಂಹಿತೆ (ಬಿಎನ್​ಎಸ್) ಸೆಕ್ಷನ್​ಗಳಾದ 351 (3) ಕ್ರಿಮಿನಲ್ ಬೆದರಿಕೆ, 75 (3) ಲೈಂಗಿಕ ಕಿರುಕುಳ ಹಾಗೂ 79 ಮಾನಹಾನಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

ದೂರಿನ ವಿವರ: ಜುಲೈ 1ರಂದು ಬಿಜೆಪಿ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಪ್ರತಿಭಟನೆಯಲ್ಲಿ ಸದಸ್ಯ ರವಿಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಸಂಸದೀಯ ಪದ ಬಳಸಿ ಮಾತನಾಡಿದ್ದಾರೆ. ಸರ್ಕಾರದ ಮುಖ್ಯ ಹುದ್ದೆಯಲ್ಲಿರುವ ಹಾಗೂ ಮಹಿಳಾ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಲೈಂಗಿಕ ಅರ್ಥ ಬರುವ ರೀತಿ ಮಾತಾಗಿದ್ದು, ಮಾನಹಾನಿಗೂ ಕಾರಣವಾಗಿದೆ. ಇದರಿಂದ ಮಹಿಳಾ ಹಾಗೂ ಸಮಾಜಕ್ಕೂ ಅಗೌರವ ಸೂಚಿಸಿದ್ಧಾರೆ ಎಂದು ದೂರಿನಲ್ಲಿ ನಾಗರತ್ನ ತಿಳಿಸಿದ್ಧಾರೆ.

ಅವಹೇಳನಕಾರಿಯಾಗಿ ಮಾತನಾಡಿಲ್ಲ-ರವಿಕುಮಾರ್: ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಮಾಧ್ಯಮ ಹೇಳಿಕೆ ನೀಡಿರುವ ರವಿಕುಮಾರ್, ಕಾರ್ಯದರ್ಶಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದೇನೆ ಎಂದು ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವುದು ನನಗೆ ಆಘಾತ ತರಿಸಿದೆ. ಮಹದೇವಪುರ ಕ್ಷೇತ್ರದ ಕಾಡುಗೋಡಿ ಬಳಿ ದಲಿತ ಕುಟುಂಬಗಳು ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುತ್ತಿರುವುದನ್ನು ಖಂಡಿಸಿ ಜೂನ್ 30ರಂದು ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆಯ ಮುಂದೆ ನಾವು ಪ್ರತಿಭಟನೆ ಕೈಗೊಂಡಿದ್ದೆವು. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ಸಿಎಂ ಸಹ ಭೇಟಿಗೆ ಸಿಗುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳೂ ಕೂಡ ಸಿಗುತ್ತಿಲ್ಲ. ಹೀಗಾಗಿ ಸಿಎಸ್ ಅವರು ಬ್ಯುಸಿ ಇರುತ್ತಾರೆ ಎಂಬುದನ್ನು ಬಿಟ್ಟು ಅವರ ವಿರುದ್ದ ಯಾವುದೇ ಒಂದು ಶಬ್ದವೂ ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಲಬುರಗಿ ಡಿಸಿ ಕುರಿತು ವಿವಾದಿತ ಹೇಳಿಕೆ ನೀಡಿದ್ದ ರವಿಕುಮಾರ್: ಕಳೆದ ಮೇ ತಿಂಗಳಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರುನಮ್ ಅವರು ಪಾಕಿಸ್ತಾನದಿಂದ ಬಂದಿದ್ಧಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

[t4b-ticker]
error: Content is protected !!