ತಂದೆ, ಸಹೋದರ ಹಠಾತ್ ಸಾವು, ಹಣದ ಸಮಸ್ಯೆ… ಕಷ್ಟಕ್ಕೆ ಸೆಡ್ಡು ಹೊಡೆದು ಆಕಾಶ್ ಜೀವನದಲ್ಲಿ ಗೆದ್ದಿದ್ದೇಗೆ? Akash Deep

Picture of Savistara

Savistara

Bureau Report

ಕ್ರಿಕೆಟ್ ಮೈದಾನದಲ್ಲಿ ದಾಖಲಾಗುವ ಪ್ರತಿ ಗೆಲುವಿನ ಹಿಂದೆ ಕೇವಲ ಬೌಂಡರಿ, ಸಿಕ್ಸರ್‌ಗಳ ಲೆಕ್ಕಾಚಾರವಿರುವುದಿಲ್ಲ. ಅಲ್ಲಿ ಬೆವರು, ಕಣ್ಣೀರು, ತ್ಯಾಗ ಮತ್ತು ಛಲದಿಂದ ಬರೆದ ಅದೆಷ್ಟೋ ಕಥೆಗಳಿರುತ್ತವೆ.ಇಂತಹದ್ದೇ ಒಂದು ಸಾಹಸಗಾಥೆ, ಬಿಹಾರದ ಸಸಾರಾಂ ಎಂಬ ಪುಟ್ಟ ಹಳ್ಳಿಯಿಂದ ಭಾರತದ ಬಿಳಿ ಜೆರ್ಸಿಯವರೆಗೆ ಸಾಗಿ ಬಂದಿರುವ ವೇಗದ.. …ಬೌಲರ್ ಆಕಾಶ್ ದೀಪ್ ಅವರದ್ದು.

ಕ್ರಿಕೆಟ್ ಮೈದಾನದಲ್ಲಿ ದಾಖಲಾಗುವ ಪ್ರತಿ ಗೆಲುವಿನ ಹಿಂದೆ ಕೇವಲ ಬೌಂಡರಿ, ಸಿಕ್ಸರ್‌ಗಳ ಲೆಕ್ಕಾಚಾರವಿರುವುದಿಲ್ಲ. ಅಲ್ಲಿ ಬೆವರು, ಕಣ್ಣೀರು, ತ್ಯಾಗ ಮತ್ತು ಛಲದಿಂದ ಬರೆದ ಅದೆಷ್ಟೋ ಕಥೆಗಳಿರುತ್ತವೆ. ಇಂತಹದ್ದೇ ಒಂದು ಸಾಹಸಗಾಥೆ, ಬಿಹಾರದ ಸಸಾರಾಂ ಎಂಬ ಪುಟ್ಟ ಹಳ್ಳಿಯಿಂದ ಭಾರತದ ಬಿಳಿ ಜೆರ್ಸಿಯವರೆಗೆ ಸಾಗಿ ಬಂದಿರುವ ವೇಗದ ಬೌಲರ್ ಆಕಾಶ್ ದೀಪ್ ಅವರದ್ದು. ಇದು ಬದುಕಿನ ಅಗ್ನಿಪರೀಕ್ಷೆಯಲ್ಲಿ ಬೆಂದು. ಎಡ್ಜ್‌ಬಾಸ್ಟನ್ ಅಂಗಳದಲ್ಲಿ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಗೆಲುವು ತಂದುಕೊಟ್ಟ ಯೋಧನೊಬ್ಬನ ಕಣ್ಣೀರ ಕಥೆ.

ತಂದೆಗೆ ಇಷ್ಟವಿಲ್ಲದ ಕ್ರಿಕೆಟ್, ಸಮಾಜದ ಟೀಕೆ

ಬಿಹಾರದ ಸಸಾರಾಂನ ಬಡ್ಡಿ ಎಂಬ ಹಳ್ಳಿಯ ಹುಡುಗ ಆಕಾಶ್‌ಗೆ ಬಾಲ್ಯದಿಂದಲೇ ಕ್ರಿಕೆಟ್ ಎಂದರೆ ಪ್ರಾಣ. ಆದರೆ, ಸರ್ಕಾರಿ ನೌಕರರಾಗಿದ್ದ ಅವರ ತಂದೆಗೆ ಮಗ ಕ್ರಿಕೆಟ್ ಆಡುವುದು ಎಳ್ಳಷ್ಟೂ ಇಷ್ಟವಿರಲಿಲ್ಲ. “ಕ್ರಿಕೆಟ್ ಆಡಿ ಯಾವ ಊರು ಉದ್ಧಾರ ಮಾಡುತ್ತೀಯ? ನೆಟ್ಟಗೆ ಒಂದು ಕೆಲಸ ಹುಡುಕಿಕೊಂಡು ಜೀವನ ನೋಡಿಕೋ.” ಎಂದು ಮಗನಿಗೆ ಪದೇ ಪದೇ ಬುದ್ಧಿ ಹೇಳುತ್ತಿದ್ದರು.ತಂದೆಯ ಒತ್ತಾಯಕ್ಕೆ ಮಣಿದು ಆಕಾಶ್ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ, ಅವರ ಮನಸ್ಸು ಮಾತ್ರ 22 ಗಜಗಳ ಪಿಚ್‌ನಲ್ಲೇ ನೆಟ್ಟಿತ್ತು.

ಅವರ ಊರಿನಲ್ಲಿ ಆಕಾಶ್ ಎಲ್ಲರಿಗೂ ಬೇಡವಾದ ಹುಡುಗನಾಗಿದ್ದ. ನನ್ನ ಸ್ನೇಹಿತರ ಪೋಷಕರು, ‘ಆಕಾಶ್ ಜೊತೆ ಸಹವಾಸ ಮಾಡಿದರೆ ಹಾಳಾಗುತ್ತೀಯ’ ಎಂದು ತಮ್ಮ ಮಕ್ಕಳಿಗೆ ಎಚ್ಚರಿಕೆ ನೀಡುತ್ತಿದ್ದರು,” ಎಂದು ಆಕಾಶ್ ಆ ದಿನಗಳನ್ನು ನೋವಿನಿಂದ ನೆನಪಿಸಿಕೊಳ್ಳುತ್ತಾರೆ. ಆದರೆ, ಈ ಟೀಕೆಗಳನ್ನೇ ಮೆಟ್ಟಿಲಾಗಿಸಿಕೊಂಡು ಅವರು ತಮ್ಮ ಕನಸಿನ ಹಾದಿಯಲ್ಲಿ ಮುನ್ನಡೆದರು.

2015: ಜೀವನದಲ್ಲಿ ಅಪ್ಪಳಿಸಿದ ಬರಸಿಡಿಲು

2015ರ ವರ್ಷ ಆಕಾಶ್ ದೀಪ್ ಜೀವನದ ಕರಾಳ ಅಧ್ಯಾಯವಾಗಿತ್ತು. ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು. ಕ್ರಿಕೆಟ್ ಅನ್ನು ಬದಿಗಿಟ್ಟು ತಂದೆಯ ಆರೈಕೆಯಲ್ಲಿ ತೊಡಗಿಕೊಂಡರು. ಆದರೆ ವಿಧಿ ಬೇರೆಯೇ ಆಟ ಆಡಿತು. ತಂದೆ ಇಹಲೋಕ ತ್ಯಜಿಸಿದರು. ಆ ದುಃಖ ಮಾಸುವ ಮುನ್ನವೇ, ಕೇವಲ ಎರಡೇ ತಿಂಗಳ ಅಂತರದಲ್ಲಿ ಅವರ ಅಣ್ಣನೂ ಕೂಡ ಸಾವನ್ನಪ್ಪಿದರು.

ಒಂದರ ಮೇಲೊಂದು ಬಿದ್ದ ಹೊಡೆತಗಳಿಂದ ಆಕಾಶ್‌ ತತ್ತರಿಸಿ ಹೋದರು. ಮನೆಯಲ್ಲಿ ಒಬ್ಬಂಟಿ ತಾಯಿ, ಆರ್ಥಿಕ ಸಂಕಷ್ಟ ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರ ಹೆಗಲೇರಿತು. ಕ್ರಿಕೆಟ್‌ನಿಂದ ಆದಾಯವಿಲ್ಲದ ಕಾರಣ, ತಮ್ಮ ಕನಸನ್ನು ಬಲಿ ಕೊಟ್ಟು ಮೂರು ವರ್ಷಗಳ ಕಾಲ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರ ಉಳಿಯಬೇಕಾದ ಅನಿವಾರ್ಯತೆ ಎದುರಾಯಿತು.

ಕನಸಿನ ಮರುಜನ್ಮ ಮತ್ತು ಬಂಗಾಳದ ಹಾದಿ

ಸೂತ್ರವಿಲ್ಲದ ಗಾಳಿಪಟದಂತಾಗಿದ್ದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ನಿಂತ ಆಕಾಶ್, ಸ್ನೇಹಿತನ ಸಹಾಯದಿಂದ ಬಂಗಾಳದ ದುರ್ಗಾಪುರಕ್ಕೆ ತೆರಳಿದರು. ಅಲ್ಲಿ ಸಣ್ಣ ಕೆಲಸ ಮಾಡಿಕೊಂಡು, ಟೆನಿಸ್‌ ಬಾಲ್‌ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿ ಜೀವನ ಸಾಗಿಸಿದರು. ಚಿಕ್ಕಪ್ಪನ ಸಲಹೆಯಂತೆ, ಮತ್ತೆ ಕ್ರಿಕೆಟ್‌ನತ್ತ ಗಮನ ಹರಿಸಿ ಕೋಲ್ಕತ್ತಾಗೆ ಬಂದಿಳಿದರು. ಉತ್ತರ ಪ್ರದೇಶದಿಂದ ಬಂದ ಮೊಹಮ್ಮದ್ ಶಮಿಯಂತೆ, ಆಕಾಶ್ ಕೂಡ ಬಿಹಾರದಿಂದ ಬಂಗಾಳದ ಪರ ಆಡಲು ನಿರ್ಧರಿಸಿದರು.

ಕೋಲ್ಕತ್ತಾದ ಬದುಕು ಮತ್ತಷ್ಟು ದುಸ್ತರವಾಗಿತ್ತು. ಗುರುತು ಪರಿಚಯವಿಲ್ಲದ ಊರು, ಕೈಯಲ್ಲಿ ಕಾಸಿಲ್ಲ. ಸಣ್ಣ ಕೋಣೆಯೊಂದರಲ್ಲಿ ವಾಸಿಸುತ್ತಾ. ಹಗಲಿರುಳು ಶ್ರಮಿಸಿದರು. ಅವರ ಪರಿಶ್ರಮಕ್ಕೆ ಫಲ ಸಿಕ್ಕಿತು. 2019ರಲ್ಲಿ ಬಂಗಾಳದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ತಮ್ಮ ವೇಗದ ಬೌಲಿಂಗ್‌ನಿಂದ ಎಲ್ಲರ ಗಮನ ಸೆಳೆದರು. ಆದರೆ, ಬೆನ್ನುಮೂಳೆಯ ಗಾಯ ಮತ್ತೊಮ್ಮೆ ಅವರ ವೃತ್ತಿಜೀವನಕ್ಕೆ ಅಡ್ಡಿಯಾಯಿತು. ಆದರೂ ಸೋಲೊಪ್ಪದ ಆಕಾಶ್, ನೋವನ್ನು ಮೆಟ್ಟಿನಿಂತು ಇನ್ನಷ್ಟು ಬಲಿಷ್ಠರಾಗಿ ಮೈದಾನಕ್ಕೆ ಮರಳಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ

ಕಠಿಣ ಪರಿಶ್ರಮ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಐಪಿಎಲ್‌ಗೆ ಕರೆತಂದರೆ, ದೇಶೀಯ ಕ್ರಿಕೆಟ್‌ನಲ್ಲಿನ ಸ್ಥಿರ ಪ್ರದರ್ಶನವು ಭಾರತ ತಂಡದ ಬಾಗಿಲು ತೆರೆಯಿತು. ರಾಂಚಿಯಲ್ಲಿ ತಾಯಿಯ ಎದುರು ಟೆಸ್ಟ್ ಪದಾರ್ಪಣೆ ಮಾಡಿದ ಆಕಾಶ್, ಇಂಗ್ಲೆಂಡ್ ವಿರುದ್ಧದ ಎಡ್‌ಬಾಸ್ಟನ್‌ ಟೆಸ್ಟ್‌ನಲ್ಲಿ ಹಸಿದ ಹೆಬ್ಬುಲಿಯಂತೆ ಘರ್ಜಿಸಿದರು. ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಕಬಳಿಸಿ, ಆ ಮೈದಾನದಲ್ಲಿ ಭಾರತಕ್ಕೆ ಮೊಟ್ಟಮೊದಲ ಟೆಸ್ಟ್ ಗೆಲುವು ತಂದುಕೊಡುವಲ್ಲಿ ಸಿಂಹಪಾಲು ವಹಿಸಿದರು.

ಗೆಲುವಿನ ಖುಷಿಯ ನಡುವೆ ಕಣ್ಣೀರು

ಈ ಐತಿಹಾಸಿಕ ಗೆಲುವಿನ ಖುಷಿಯ ನಡುವೆಯೂ ಆಕಾಶ್ ಭಾವುಕರಾದರು. ತಮ್ಮ ಈ ಸಾಧನೆಯನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹೋದರಿಗೆ ಅರ್ಪಿಸಿದರು. “ನನ್ನ ಅಕ್ಕ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾಳೆ. ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ಅವಳೇ ನೆನಪಾಗುತ್ತಾಳೆ. ಈ ಗೆಲುವು ಮತ್ತು ನನ್ನ ಆಟ ಅವಳಿಗಾಗಿ,” ಎಂದು ಗದ್ಗದಿತರಾಗಿ ನುಡಿದರು.ಆಕಾಶ್ ದೀಪ್ ಅವರ ಕಥೆ ಕೇವಲ ಕ್ರಿಕೆಟ್ ಮೈದಾನಕ್ಕೆ ಸೀಮಿತವಲ್ಲ: ಇದು ಬದುಕಿನ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದ ಯೋಧನೊಬ್ಬನ ಗಾಥೆ. ತಂದೆಯ ವಿರೋಧ, ಕುಟುಂಬದ ದುರಂತ. ಬಡತನ ಮತ್ತು ಸಮಾಜದ ಟೀಕೆಗಳೆಂಬ ಬೆಂಕಿಯ ಬಲೆಯಲ್ಲಿ ಸಿಲುಕಿಯೂ. ಫೀನಿಕ್ಸ್‌ನಂತೆ ಎದ್ದು ಬಂದು ಕನಸನ್ನು ನನಸು ಮಾಡಿಕೊಂಡಿರುವ ಅವರ ಈ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಸೆಲೆಯಾಗಿದೆ.

[t4b-ticker]
error: Content is protected !!