ಬಿ-ಖರಾಬು ಜಮೀನು ಮಂಜೂರಿಲ್ಲ, ಹೊಸ ತಾಲೂಕುಗಳ ರಚನೆ ಪ್ರಸ್ತಾಪವಿಲ್ಲ: ಸಚಿವ ಕೃಷ್ಣಬೈರೇಗೌಡ

Picture of Savistara

Savistara

Bureau Report

ಬಿ-ಖರಾಬು ಜಮೀನು ಮಂಜೂರು, ಹೊಸ ತಾಲೂಕುಗಳ ರಚನೆ ಕುರಿತು ಸಚಿವ ಕೃಷ್ಣಬೈರೇಗೌಡ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರು: ಜಂಗಲ್‌ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ಕೆಲವು ಪ್ರಕರಣಗಳು ಕಂಡುಬಂದಿದ್ದು, ಈ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು.ಇಂದು ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, “ಜಂಗಲ್‌ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ. ಆಗಿನ ಸರ್ಕಾರ ಸರಿಯಾದ ಹೆಜ್ಜೆ ಇಟ್ಟಿಲ್ಲ. ಆದರೆ, ಅದನ್ನು ನಾವು ಸರಿ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. ಈಗಾಗಲೇ ಬೆಂಗಳೂರು ವಿಭಾಗ ಪ್ರದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಇದರ ನೈಜತೆ ಪರಿಶೀಲನೆಯ ಜವಾಬ್ದಾರಿ ಕೊಟ್ಟಿದ್ದೇವೆ. ತನಿಖೆ ಆರಂಭವಾಗಿದೆ. ತನಿಖೆಯನ್ನು ಶೀಘ್ರದಲ್ಲಿ ಮುಗಿಸಲು ಸೂಚಿಸಿದ್ದೇನೆ” ಎಂದು ತಿಳಿಸಿದರು.

ಏತನ್ಮಧ್ಯೆ ಇಂತಹ ಜಮೀನುಗಳು ಪೋಡ್ ಆಗುವುದು ಅಥವಾ ಭೂ ವ್ಯವಹಾರ ನಿಲ್ಲಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದಾರೆ. ಈಗಾಗಲೇ ಮಂಜೂರುದಾರರಿಗೆ ಆ ಜಮೀನು ಗ್ರ್ಯಾಂಟ್ ಆಗಿರುವುದರಿಂದ ಅವರ ಹಕ್ಕನ್ನು ಸರ್ಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನಾತ್ಮಕ ಸೂಚನೆ ನೀಡಿದ್ದಾರೆ. ಅವರ ಪತ್ರ ಕಾನೂನಿಗೆ ಬದ್ಧವಾಗಿದೆ. ಈ ನಡುವೆ ಒಂದೇ ಕುಟುಂಬಕ್ಕೆ 119 ಏಕರೆ ಕೊಟ್ಟಿದ್ದಾರೆ. ಎರಡನೇಯದು ಹೀಗೆ ಮಂಜೂರಾದ ಜಮೀನು ಜಂಗಲ್ ಖರಾಬು. ಈ ಎರಡೂ ಪ್ರಶ್ನೆ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಶೀಘ್ರ ವಿಚಾರಣೆ ಮುಗಿದರೆ ಇದರ ರದ್ದತಿ ಬಗ್ಗೆ ತೀರ್ಮಾನ ಮಾಡಬಹುದು. ಹೀಗಾಗಿ, ಶೀಘ್ರ ವಿಚಾರಣೆಗೆ ಸೂಚಿಸಲಾಗಿದೆ. ಅಲ್ಲದೆ, ವಿಚಾರಣೆ ಮುಗಿಯುವವರೆಗೆ ಏನು ಮಾಡಬಹುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಬಳಿಯೂ ಸಲಹೆ ಕೇಳಲಾಗಿದೆ” ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಹೊಸ ತಾಲೂಕುಗಳ ರಚನೆ ಇಲ್ಲ:

ರಾಜ್ಯದಲ್ಲಿ ಹೊಸ ತಾಲೂಕುಗಳನ್ನು ರಚನೆ ಮಾಡುವುದಿಲ್ಲವಾ ಎಂದು ಕಾಂಗ್ರೆಸ್‌ ಶಾಸಕ ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದರು.ನಿವೃತ್ತ ಐಎಎಸ್​ ಅಧಿಕಾರಿ 2009 ರಲ್ಲಿ ಎಂ.ಬಿ. ಪ್ರಕಾಶ್ ಸಮಿತಿಯು ಹೊಸ ತಾಲೂಕುಗಳನ್ನು ರಚಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಲ್ಲಿ ಪರಶುರಾಮಪುರ ಹೋಬಳಿ ಕೇಂದ್ರವನ್ನು ತಾಲೂಕು ಮಾಡುವಂತೆ ಘೋಷಿಸಿತ್ತು. ಆ ನಂತರ ಕಳೆದ ಸರ್ಕಾರದಲ್ಲಿ 63 ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಅದರಲ್ಲಿ ಪರಶುರಾಮಪುರ ಇರಲಿಲ್ಲ. ಅಷ್ಟೇ ಅಲ್ಲ, ಎಂ.ಬಿ. ಪ್ರಕಾಶ್ ಸಮಿತಿಯ ಶಿಫಾರಸ್ಸಿನ ಅನ್ವಯವೂ ಹೊಸ ತಾಲೂಕುಗಳ ಘೋಷಣೆ ಆಗಲಿಲ್ಲ ಎಂದು ಹೇಳಿದರು.

ಈ ಹಿಂದೆ ಘೋಷಣೆಯಾಗಿದ್ದ ಹೊಸ ತಾಲೂಕುಗಳಲ್ಲಿ ಹೋಬಳಿ ಕೇಂದ್ರವೂ ಆಗಿರದ ಪ್ರದೇಶವನ್ನು ಹೊಸ ತಾಲೂಕಾಗಿ ಗ್ರಾಮ ಪಂಚಾಯ್ತಿ ಕೇಂದ್ರವನ್ನು ಹೊಸ ತಾಲೂಕಾಗಿ ಘೋಷಿಸಿರುವುದೂ ಇದೆ. ಹೀಗೆ ವೈಜ್ಞಾನಿಕವಾಗಿ ಸಾಧುವಲ್ಲದ ತಾಲೂಕುಗಳು ಘೋಷಣೆಯಾಗಿವೆ. ಹೋಬಳಿ ಇರದ ಕೇಂದ್ರವನ್ನು ತಾಲೂಕು ಮಾಡಿದ್ದರೂ ಅದನ್ನು 2 ತಾಲೂಗಳಾಗಿ ಘೋಷಣೆ ಮಾಡುವಂತೆಯೂ ಬೇಡಿಕೆ ಇದೆ ಎಂದರು.ಕಳೆದ ಸರ್ಕಾರದಲ್ಲಿ ಘೋಷಣೆಯಾದ 63 ತಾಲೂಕುಗಳಲ್ಲಿ 14 ತಾಲೂಕುಗಳಿಗೆ ಮಾತ್ರ ಆಡಳಿತಸೌಧ ಮಂಜೂರಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಉಳಿದ 49 ತಾಲೂಕುಗಳಲ್ಲೂ ಪ್ರಜಾಸೌಧ ನಿರ್ಮಾಣಕ್ಕೆ ಮಂಜೂರು ಮಾಡಿದ್ದೇವೆ. ತಾಲೂಕುಗಳ ಘೋಷಣೆ ಮುಖ್ಯವಲ್ಲ, ಅದನ್ನು ಕಾರ್ಯರೂಪಕ್ಕೆ ತರುವುದೂ ಅಷ್ಟೇ ಮುಖ್ಯ ಎಂದು ತಿಳಿಸಿದರು.

ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಘೋಷಣೆಯಾಗಿರುವ ತಾಲೂಕುಗಳು ಆಡಳಿತ ಸ್ಥಿರತೆ ಹೊಂದುವವರೆಗೂ ಸದ್ಯಕ್ಕೆ ಹೊಸ ತಾಲೂಕುಗಳ ಘೋಷಣೆ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಭೂಕುಸಿತ ತಡೆಗೆ ₹500 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆ:

ಮಲೆನಾಡು ಹಾಗೂ ಕರಾವಳಿಯ 7 ಜಿಲ್ಲೆಗಳಲ್ಲಿ ಭೂಕುಸಿತವನ್ನು ತಡೆಗಟ್ಟಲು 500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಶಾಸಕ ಡಾ.ಮಂಥರ್‌ ಗೌಡ ಅವರ ಪ್ರಶ್ನೆಗೆ ಸಚಿವ ಕೃಷ್ಣಬೈರೇಗೌಡ ಉತ್ತರಿಸಿದರು.ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ(ಜಿಎಸ್‌‍ಐ)ಯು ಸಮೀಕ್ಷೆ ನಡೆಸಿ ಗುರುತಿಸಿದ ಮಲೆನಾಡುಭಾಗದ 4, ಕರಾವಳಿಯ 2 ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಗುಡ್ಡ ಕುಸಿತ ತಡೆಗಟ್ಟುವ ಸಲುವಾಗಿ ದೂರಗಾಮಿ ಯೋಜನೆಗಳನ್ನು ಕೈಗೊಳ್ಳಲು ಒಟ್ಟು 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅದರಲ್ಲಿ ಕೊಡಗು ಜಿಲ್ಲೆಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಅಗತ್ಯಬಿದ್ದರೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.ಮುಂದಿನ 2 ತಿಂಗಳ ಒಳಗಾಗಿ ಗುಡ್ಡ ಕುಸಿತ ತಡೆಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಬಿಜೆಪಿ ಶಾಸಕ ಸುನೀಲ್‌ಕುಮಾರ್‌, ನೀರಿನ ಕೊರೆತದ ಜಾಗಗಳನ್ನು ಸರಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಬೇಕು. ಕೇವಲ ಗುಡ್ಡಕುಸಿತ ಪರಿಗಣಿಸಿದರೆ ಮಲೆನಾಡು ಭಾಗದ ಮೂಲ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಹೇಳಿದರು.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!