ಆನ್‌ಲೈನ್ ಮೂಲಕವೇ ಹೂಡಿಕೆ ಮಾಡಿಸಿಕೊಂಡು ಪಂಗನಾಮ | 4500 ಕೋ. ರೂ. ವಂಚನೆ : ಆರೋಪಿ ಸೆರೆ

Picture of Savistara

Savistara

Bureau Report

ಆನ್‌ಲೈನ್ ಮೂಲಕವೇ ಹೂಡಿಕೆ ಮಾಡಿಸಿಕೊಂಡು ಪಂಗನಾಮ ಹಾಕಿದ್ದ ಆರೋಪಿ

ಬೆಳಗಾವಿ : 4500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣದಲ್ಲಿ ಶಿವಂ ಅಸೋಸಿಯೇಟ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವ‌ರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿ ದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಶಿವಂ ಅಸೋಸಿಯೇಟ್ ಎಂಬ ಸಂಸ್ಥೆ ಜನರನ್ನು ಆಕರ್ಷಿಸಿತ್ತು.ಶುಕ್ರವಾರ ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದರು. ಕಚೇರಿಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆ ವಿವರಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಮಾಹಿತಿ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಬಳಿಕ ಶಿವಾನಂದ ನೀಲಣ್ಣನವ‌ರ್ ವಿರುದ್ಧ ಐಎಫ್‌ಐಆ‌ರ್ ದಾಖಲಿಸಿದ್ದು, ಇದೀಗ ಮಾಳಮಾರುತಿ ಠಾಣೆ ಪೊಲೀಸರು ಶಿವಾನಂದ ನೀಲಣ್ಣನವರ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಕೋಟ್ಯಂತರ ರೂ ಹಣ ದುರಪಯೋಗವಾಗಿರುವ ಗಂಭೀರ ಆರೋಪ ಶಿವಂ ಅಸೋಸಿಯೇಟ್ಸ್ ಮೇಲಿದೆ. ಸಂಸ್ಥೆಯ ಶಿವಾನಂದ ನೀಲಣ್ಣವ‌ರ್ ಯಾವುದೇ ನಿಯಮಗಳನ್ನು ಪಾಲಿಸದೆ, ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಮಾರು 45 ಸಾವಿರ ಜನರಿಂದ ಅಂದಾಜು 4,500 ಕೋಟಿ ರೂ ಹೂಡಿಕೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಶಿವಾನಂದ ನೀಲಣ್ಣವರ್ ಮನೆ ಸೇರಿದಂತೆ ಕಚೇರಿ ಕೂಡ ಸೀಜ್ ಮಾಡಲಾಗಿದ್ದು, ಡಿಸಿಗೆ ವರದಿ ಸಲ್ಲಿಕೆ ಮಾಡಲಾಗಿದೆ.ಪ್ರಕರಣದ ಗಾಂಭೀರ್ಯವನ್ನು ಅರಿತು ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ ತನಿಖೆಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಬೆಳಗಾವಿಯ ಶಿವಬಸವನಗರದಲ್ಲಿರುವ ಕಚೇರಿ, ಮನೆ ಹಾಗೂ ಅಪಾರ್ಟ್‌ಮೆಂಟ್‌ ಸೇರಿದಂತೆ ಹಲವು ಕಡೆಗಳಲ್ಲಿ ಎಸಿ ಶ್ರವಣ್ ಕುಮಾರ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಪೊಲೀಸರ ಬಿಗಿ ಬಂದೋಬಸ್ತನೊಂದಿಗೆ 24 ಗಂಟೆಗಳ ಕಾಲ ಸುದೀರ್ಘ ಜಾಲಾಡಿದ್ದು, ಸದ್ಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅತಿರೇಕದ ಭಾಷಣಗಳ ಮೂಲಕ ವೈರಲ್ ಆಗಿದ್ದ ಶಿವಾನಂದ ನೀಲಣ್ಣವರ್‌ ಹಿನ್ನೆಲೆಯನ್ನು ಕೆದಕಿದಾಗ ಈ ಬೃಹತ್ ಜಾಲ ಪತ್ತೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಹಾಗೂ ಹೂಡಿಕೆ ಮಾಡಿದ ಸಾರ್ವಜನಿಕರ ಹಣಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ನಿರ್ವಹಿಸಿಲ್ಲ ಎನ್ನಲಾಗಿದೆ. ಆನ್‌ಲೈನ್ ಮೂಲಕವೇ ಇಷ್ಟೊಂದು ಕೋಟ್ಯಂತರ ರೂ ವ್ಯವಹಾರ ನಡೆದಿದ್ದರೂ ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯದ ಗಮನಕ್ಕೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯ ವೇಳೆ ವ್ಯಕ್ತಿಯೊಬ್ಬರು ಯಾವುದೇ ದಾಖಲೆಯಿಲ್ಲದೆ 5 ಲಕ್ಷ ರೂ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.ದಾಳಿಯ ಬೆನ್ನಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಶಿವಂ ಅಸೋಸಿಯೇಟ್ಸ್‌ ಮಾಲೀಕ ಶಿವಾನಂದ ನೀಲಣ್ಣವರ್ ಆಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿ ‘ನನ್ನ ಮೊಬೈಲ್ ಬಂದ್ ಇದೆ, ಆದರೆ ನಾನು ಮನೆಯಲ್ಲೇ ಇದ್ದೇನೆ ಮತ್ತು ಸೆಕ್ಯೂರಿಟಿಯಲ್ಲಿದ್ದೇನೆ. ಇನ್ನು ಎರಡು ಮೂರು ದಿನಗಳಲ್ಲಿ ಎಂದಿನಂತೆ ಎಲ್ಲವೂ ಸರಿಯಾಗಲಿದೆ. ಹೂಡಿಕೆದಾರರು ಯಾರೂ ಹೆದರಬೇಡಿ, ವಿಶೇಷವಾಗಿ ಮಹಿಳೆಯರು ಧೈರ್ಯವಾಗಿರಿ’ ಎಂಬ ಸಂದೇಶ ನೀಡಿದ್ದ.

[t4b-ticker]
error: Content is protected !!