ಪ್ರತಿ ಲೀಟ‌ರ್ ಪೆಟ್ರೋಲ್ ಗೆ 14 – ಡೀಸೆಲ್ 42 ರೂ. ನಷ್ಟ..! ಭಾರಿ ಬೆಲೆ ಏರಿಕೆಯ ಮುನ್ಸೂಚನೆ ನೀಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಪುರಿ

Picture of Savistara

Savistara

Bureau Report

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ತೈಲ ಮಾರಾಟ ಕಂಪನಿಗಳು ಪ್ರತಿದಿನ 1,000 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ. ಈ ಹೊರೆಯನ್ನು ತೈಲ ಕಂಪನಿಗಳು ಎಷ್ಟು ದಿನ ಹೊರಲು ಸಾಧ್ಯ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಶ್ನಿಸುವ ಮೂಲಕ ಮುಂಬರುವ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರಿ ಏರಿಕೆ ಬಗ್ಗೆ ಸುಳಿವು ನೀಡಿದ್ದಾರೆಂದು ವರದಿಯಾಗಿದೆ.

“ಗ್ರಾಹಕರ ಅನುಕೂಲಕ್ಕಾಗಿ ತೈಲ ಮಾರಾಟ ಕಂಪನಿಗಳು ನಷ್ಟದ ಹೊಣೆಯನ್ನು ಹೊತ್ತುಕೊಂಡಿವೆ. ಆದರೆ ಕೆಲವು ಹಂತದಲ್ಲಿ ಕೇಂದ್ರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಾರ್ಷಿಕ ವಿತ್ತ ಶೃಂಗದಲ್ಲಿ ತಿಳಿಸಿರುವ ಪುರಿ ಅವರು, ನಿರೀಕ್ಷಿತ ಬೆಲೆ ಏರಿಕೆ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ” ಎಂದು ವರದಿ ವಿವರಿಸಿದೆ.

“ಎಷ್ಟು ದಿನಗಳವರೆಗೆ ತೈಲ ಕಂಪನಿಗಳು ನಷ್ಟದ ಹೊರೆ ಹೊರಲು ಸಾಧ್ಯ? ನಿಜಕ್ಕೂ ಈ ವಿಚಾರ ನನಗೆ ಚಿಂತೆಗೀಡು ಮಾಡುವಂತೆ ಮಾಡಿದೆ ಎಂದು ಪುರಿ ಹೇಳಿದ್ದಾರೆ. ತೈಲ ಕಂಪನಿಗಳು ಪ್ರತಿದಿನ ಅಂದಾಜು 1,000 ಕೋಟಿ ನಷ್ಟ ಅನುಭವಿಸುತ್ತಿವೆ. ಒಟ್ಟಾರೆ ಅಂಡರ್ ರಿಕವರಿ ಮೊತ್ತವು 1.98 ಲಕ್ಷ ಕೋಟಿ ರೂಪಾಯಿ ಸಮೀಪಿಸಿರುವುದಾಗಿ ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ತೆರೆಯದಿದ್ದರೂ ಕೂಡಾ ಕೇಂದ್ರ ಸರ್ಕಾರ ಕಠಿನ ನಿರ್ಧಾರ ತೆಗೆದುಕೊಳ್ಳದೇ ಪರಿಸ್ಥಿತಿಯನ್ನು ನಿಭಾಯಿಸಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟವನ್ನು ಭರಿಸಲು ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಸಚಿವ ಪುರಿ ಹೇಳಿದರು.

ಪ್ರತೀ ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14 ರೂ. ಡೀಸೆಲ್ 42 ರೂ. ನಷ್ಟ..!

ಇಸ್ರೇಲ್, ಇರಾನ್, ಅಮೆರಿಕ ನಡುವೆ ಫೆ.28ರಿಂದ ಯುದ್ಧ ಆರಂಭಗೊಂಡ ನಂತರ ಕಚ್ಛಾ ತೈಲ ಬೆಲೆ ಸುಮಾರು ಶೇ.50ರಷ್ಟು ಏರಿಕೆಯಾಗಿದೆ. ಏತನ್ಮಧ್ಯೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಮುಂದೂಡಲಾಗಿತ್ತು ಎಂಬ ಆರೋಪವನ್ನು ಸಚಿವ ಪುರಿ ಅಲ್ಲಗಳೆದಿದ್ದಾರೆ.2022ರಿಂದ ಈವರೆಗೆ ಹಲವಾರು ಚುನಾವಣೆಗಳು ನಡೆದಿದೆ. ಆದರೆ ನಾವು ಕೊನೆಯದಾಗಿ ತೈಲ ಬೆಲೆ ಏರಿಕೆ ಮಾಡಿದ್ದು ಯಾವಾಗ.? ಕಳೆದ ನಾಲ್ಕು ವರ್ಷಗಳಿಂದ ತೈಲ ಬೆಲೆ ಏರಿಕೆ ಮಾಡದ ಏಕೈಕ ದೇಶ ಭಾರತ ಎಂದು ಪುರಿ ತಿರುಗೇಟು ನೀಡಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟ‌ರ್ ಬೆಲೆ 94.77 ರೂಪಾಯಿ. ಪ್ರತೀ ಲೀಟರ್ ಡೀಸೆಲ್ ಬೆಲೆ 87.67 ರೂಪಾಯಿ. ತೈಲ ಮಾರುಕಟ್ಟೆ ಕಂಪನಿಗಳ ಅಂದಾಜಿನ ಪ್ರಕಾರ, ಪ್ರತೀ ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14 ರೂ. ನಷ್ಟವಾಗುತ್ತಿದೆ. ಪ್ರತಿ ಲೀಟ‌ರ್ ಡೀಸೆಲ್ ಬೆಲೆಯಲ್ಲಿ 42 ರೂಪಾಯಿ ನಷ್ಟವಾಗುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 647 ರೂಪಾಯಿ ನಷ್ಟವಾಗುತ್ತಿದೆ. ಇದರಿಂದ ಒಟ್ಟಾರೆಯಾಗಿ ಅಂಡ‌ರ್ ರಿಕವರಿ ಮೊತ್ತವು ಪ್ರತಿದಿನ 1,600ರಿಂದ 1,700 ಕೋಟಿ ರೂಪಾಯಿ ಸಮೀಪಿಸುತ್ತಿದೆ ಎಂದು ಸಚಿವ ಪುರಿ ಮಾಹಿತಿ ನೀಡಿದ್ದಾರೆ.

[t4b-ticker]
error: Content is protected !!