ರಾಮೋಹಳ್ಳಿ ರೈಲ್ವೆ ಕೆಳಸೇತುವೆ: ಜೂನ್ 30ಕ್ಕೆ ಮುಕ್ತ

Picture of Savistara

Savistara

Bureau Report

ಬೆಂಗಳೂರು: ರಾಮೋಹಳ್ಳಿ ರೈಲ್ವೆ ಗೇಟ್ ಲೆವೆಲ್ ಕ್ರಾಸಿಂಗ್ ತೆರವುಗೊಳಿಸಲು ನಿರ್ಮಿಸುತ್ತಿರುವ ರೈಲ್ವೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿ ಶೀಘ್ರ ಮುಕ್ತಾಯವಾಗಲಿದ್ದು, ಜೂನ್ 30ಕ್ಕೆ ಉದ್ಘಾಟಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ರೈಲ್ವೆ, ಜಿಬಿಎ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಲಕ್ಷಾಂತರ ಜನರು ಸಂಚರಿಸುವ ಈ ಮಾರ್ಗದಲ್ಲಿ ಲೆವೆಲ್ ಕ್ರಾಸಿಂಗ್‌ ಅನ್ನು ತೆರವುಗೊಳಿಸಲು ಕೆಳಸೇತುವೆ (ಆರ್‌ಯುಬಿ) ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಆರೇಳು ತಿಂಗಳಿನಿಂದ ಸಂಚಾರಕ್ಕೆ ತೊಡಕಾಗಿತ್ತು. ಈಗ ಅಂತಿಮ ಹಂತಕ್ಕೆ ಬಂದಿದೆ. ಮುಂದಿನ ತಿಂಗಳು ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.ಗುಬ್ಬಿ ಬಳಿಕ ಬಿಳಿಪಾಳ್ಯ ಗೇಟ್, ಭೀಮಸಂದ್ರ ರೈಲ್ವೆ ಕೆಳಸೇತುವೆ, ಬಂಡಿಹಳ್ಳಿ ಸಂಪರ್ಕರಸ್ತೆ ಕಾಮಗಾರಿಗಳು ಕೂಡ ಎರಡು ಮೂರು ತಿಂಗಳ ಒಳಗೆ ಪೂರ್ಣಗೊಳ್ಳಲಿವೆ. ಸಹಕಾರನಗರದ ಸಬ್‌ವೇ ಈ ವರ್ಷ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ವಿವರ ನೀಡಿದರು.

‘ಬೆಂಗಳೂರಿನಿಂದ ನೂರು ಕಿ.ಮೀ. ವ್ಯಾಪ್ತಿಯಲ್ಲಿರುವ 100 ಲೆವೆಲ್ ಕ್ರಾಸಿಂಗ್ (ಎಲ್‌ಸಿ) ತೆರವುಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. 46 ಕಡೆಗಳಿಗೆ ರೈಲ್ವೆ ಮೇಲ್ವೇತುವೆ/ಕೆಳಸೇತುವೆ (ಆರ್‌ಒಬಿ/ಆರ್‌ಯುಬಿ) ಮಂಜೂರಾಗಿದೆ. ಎಂಟು ಅಂತಿಮ ಪಟ್ಟಿಯಲ್ಲಿದ್ದು, 24 ಎಲ್‌ಸಿಗಳಿಗೆ ವಿಸ್ಕೃತ ಯೋಜನಾ ವರದಿ ತಯಾರಿಸಲಾಗುತ್ತಿದೆ. ಜಮೀನು ಸಮಸ್ಯೆಯಿಂದಾಗಿ ಎರಡು ಎಲ್‌ಸಿಗಳನ್ನು ತೆರವುಗೊಳಿಸುವುದು ಕಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ, ಸರ್ಕಾರಿ ಜಮೀನುಗಳನ್ನು ಪಡೆದು ಎಲ್‌ಸಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ಈಗಾಗಲೇ 707 ಎಲ್‌ಸಿ ತೆರವು ಮಾಡಲಾಗಿದೆ’ ಎಂದು ತಿಳಿಸಿದರು.’ನಗರದ ಕೆಲವು ಕಡೆಗಳಲ್ಲಿ ಜಿಬಿಎ ಸಹಕಾರ ಬೇಕಾಗುತ್ತದೆ. ಇದೇ ರೀತಿ ಯಾವ ಯಾವ ಇಲಾಖೆಯ ಸಹಕಾರ ಬೇಕು ಎಂದು ನೋಡಿ ಪ್ರತಿ ಮೂರು ತಿಂಗಳಿಗೊಮ್ಮೆ ಆ ಇಲಾಖೆಗಳ ಅಧಿಕಾರಿಗಳು ಮತ್ತು ರೈಲ್ವೆ ಅಧಿಕಾರಿಗಳ ಸಭೆ ನಡೆಸಿ ಸಮನ್ವಯದೊಂದಿಗೆ ಕೆಲಸ ಮಾಡಲಾಗುವುದು’ ಎಂದರು.

‘ವಿವಿಧ ಅಡೆತಡೆಗಳಿಂದಾಗಿ ರೈಲುಗಳ ವೇಗ ಗಂಟೆಗೆ ಸರಾಸರಿ 110 ಕಿ.ಮೀ. ಇತ್ತು. ಅದನ್ನು 130ಕ್ಕೆ ಏರಿಸಲಾಗಿದೆ. ತುಮಕೂರು-ಬೆಂಗಳೂರು ನಡುವೆ ನಾಲ್ಕು ಪಥ ನಿರ್ಮಿಸಲಾಗುವುದು. ತುಮಕೂರು-ಕೋಲಾರಕ್ಕೆ ನೇರ ಮಾರ್ಗವಿಲ್ಲ. ಸುತ್ತು ಹಾಕಿಕೊಂಡು ಹೋಗಲಾಗುತ್ತಿದೆ. ನೇರ ಮಾರ್ಗ ಮಾಡಲು ಚಿಂತನೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.ಬೆಂಗಳೂರು ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದು ಹೇಳಿದರು.ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾ‌ರ್ ಸಿಂಗ್, ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಉಪಸ್ಥಿತರಿದ್ದರು.

‘ಕನ್ನಡಕ್ಕೆ ಅವಕಾಶ ನೀಡಲು ಹೋರಾಟ’

‘ರೈಲ್ವೆ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ಬರೆಯಲು ಕನ್ನಡಕ್ಕೂ ಅವಕಾಶ ನೀಡಲಾಗಿದೆ. ಆದರೆ ಬಡ್ತಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಅವಕಾಶವಿದೆ. ಕನ್ನಡ ಮಾತ್ರವಲ್ಲ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಅವಕಾಶ ನೀಡಿಲ್ಲ. ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇನೆ’ ಎಂದು ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದರು.

ಯಲಹಂಕದಲ್ಲಿ ಮೆಗಾ ಕೋಚಿಂಗ್

ಟರ್ಮಿನಲ್‌ ಯಲಹಂಕದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಿಸಲು ಅಂತಿಮ ಸ್ಥಳ ಸಮೀಕ್ಷೆ ನಡೆಸಲಾಗಿದೆ. ಇಲ್ಲಿ 16 ಪ್ಲಾಟ್‌ಫಾರ್ಮ್ 18 ಸ್ಥಿರ ಮಾರ್ಗ (ಸ್ಟೆಲ್ಡಿಂಗ್ ಲೈನ್ಸ್) 14 ಪಿಟ್ ಲೈನ್ಸ್ 5 ದುರಸ್ತಿ ಮಾರ್ಗ (ಸಿಕ್ ಲೈನ್ಸ್) ನಿರ್ಮಿಸಲಾಗುವುದು ಎಂದು ವಿ. ಸೋಮಣ್ಣ ತಿಳಿಸಿದರು. ಈ ಟರ್ಮಿನಲ್‌ಗೆ ಸುಗಮ ಸಂಪರ್ಕ ರಸ್ತೆ ಸಂಪರ್ಕ ಮತ್ತು ನೀರಿನ ಸಂಪರ್ಕವನ್ನು ರಾಜ್ಯ ಸರ್ಕಾರ ಒದಗಿಸಬೇಕಾಗುತ್ತದೆ ಎಂದು ಹೇಳಿದರು.

[t4b-ticker]
error: Content is protected !!