‘ಇಂಧನ ಉಳಿತಾಯಕ್ಕೆ ಪ್ರಧಾನಿ ಒತ್ತು’ : SPG ಬೆಂಗಾವಲು ಪಡೆಯನ್ನು ಶೇ. 50ರಷ್ಟು ಕಡಿತಗೊಳಿಸಲು ಮೋದಿ ಸೂಚನೆ

Picture of Savistara

Savistara

Bureau Report

ಹೊಸದಿಲ್ಲಿ: ಮಿತವ್ಯಯ ಮತ್ತು ಇಂಧನ ಉಳಿತಾಯಕ್ಕೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭದ್ರತೆಗೆ ನಿಯೋಜಿಸಲಾದ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಬೆಂಗಾವಲು ಪಡೆಯಲ್ಲಿನ ವಾಹನಗಳ ಸಂಖ್ಯೆಯನ್ನು ಶೇ 50ರಷ್ಟು ಕಡಿತಗೊಳಿಸುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ‘ಬ್ಲೂ ಬುಕ್’ ಮಾರ್ಗಸೂಚಿಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಈ ಕ್ರಮ ಜಾರಿಗೆ ತರಲಾಗುತ್ತಿದೆ. ಹೊಸ ವಾಹನಗಳನ್ನು ಖರೀದಿಸುವುದನ್ನು ತಪ್ಪಿಸಿ, ಈಗಾಗಲೇ ಇರುವ ವಾಹನ ಕಾನ್ವೆಗೆ ವಿದ್ಯುತ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಪ್ರಧಾನಿ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಧಾನಿಯವರ ಇತ್ತೀಚಿನ ದಿಲ್ಲಿ ಹೊರಗಿನ ಪ್ರವಾಸಗಳ ಸಂದರ್ಭದಲ್ಲೇ ಬೆಂಗಾವಲು ಪಡೆಯ ಗಾತ್ರವನ್ನು ಕಡಿಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ. ಭದ್ರತಾ ವ್ಯವಸ್ಥೆಯ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಲೇ ಎಸ್‌ಪಿಜಿ ಈ ಕ್ರಮ ಕೈಗೊಂಡಿದೆ.ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಇಂಧನ ಮತ್ತು ಚಿನ್ನದ ಬಳಕೆಯನ್ನು ಕಡಿಮೆ ಮಾಡುವಂತೆ ಜನರಿಗೆ ಕರೆ ನೀಡಿದ್ದರು. ಇದೇ ಸಂದೇಶವನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳಲ್ಲೂ ವೆಚ್ಚ ಕಡಿತ ಹಾಗೂ ಇಂಧನ ಉಳಿತಾಯಕ್ಕೆ ಸಂಬಂಧಿಸಿದ ಚರ್ಚೆಗಳು ಆರಂಭವಾಗಿವೆ. ಮೆಟ್ರೋ ರೈಲು ಬಳಕೆಗೆ ಉತ್ತೇಜನ ನೀಡುವುದು, ಕಾರ್‌ಪೂಲಿಂಗ್‌ ಅನುಸರಿಸುವುದು ಮತ್ತು ದೊಡ್ಡ ಔತಣಕೂಟಗಳನ್ನು ತಪ್ಪಿಸುವ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡುವ ಸಾಧ್ಯತೆ ಇದೆ.“ಇಂಧನ ಬಳಕೆಯನ್ನು ಕಡಿಮೆ ಮಾಡುವ ಎಲ್ಲ ಸಾಧ್ಯತೆಗಳ ಬಗ್ಗೆ ಇಲಾಖಾ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಪ್ರಧಾನಿಯವರ ಸಂದೇಶ ಎಲ್ಲ ಸರ್ಕಾರಿ ವಿಭಾಗಗಳಿಗೂ ಅನ್ವಯಿಸುತ್ತದೆ. ಸಿಬ್ಬಂದಿ ಇಲಾಖೆಯಿಂದ ಬರುವ ಮಾರ್ಗಸೂಚಿಯ ನಿರೀಕ್ಷೆಯಲ್ಲಿದ್ದೇವೆ. ಆದರೆ ಪ್ರತಿಯೊಂದು ಇಲಾಖೆಯೂ ತಮ್ಮದೇ ಆದ ಯೋಜನೆ ರೂಪಿಸಬೇಕಾಗುತ್ತದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಅನೌಪಚಾರಿಕ ಸಚಿವರ ಗುಂಪಿನ ಸಭೆಯಲ್ಲೂ ಅನಗತ್ಯ ಪ್ರಯಾಣ ಕಡಿಮೆ ಮಾಡುವ ಮೂಲಕ ಇಂಧನ ಬಳಕೆಯನ್ನು ತಗ್ಗಿಸುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!