ಮೋದಿ ಸರ್ಕಾರಕ್ಕೆ ದೂರದೃಷ್ಟಿಯಿಲ್ಲ, ಮುಚ್ಚಿಟ್ಟಿದ್ದ ಬೆಲೆ ಏರಿಕೆ ಈಗ ಜಾರಿ: ಖರ್ಗೆ

Picture of Savistara

Savistara

Bureau Report

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೂರದೃಷ್ಟಿಯ ಕೊರತೆಯಿದೆ ಮತ್ತು ವಿಧಾನಸಭಾ ಚುನಾವಣೆಗಳು ಮುಗಿಯುವವರೆಗೆ ದೇಶದ ಆರ್ಥಿಕತೆಯ ಅಸಲಿ ಸ್ಥಿತಿಯನ್ನು ಜನರ ಮುಂದೆ ಮುಚ್ಚಿಟ್ಟಿತ್ತು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಭಾನುವಾರ ಕೇಂದ್ರ ಸರ್ಕಾರ ಸಿಎನ್‌ಜಿ (CNG) ದರವನ್ನು ಮತ್ತೊಮ್ಮೆ ಏರಿಕೆ ಮಾಡಿದ ಬೆನ್ನಲ್ಲೇ ಖರ್ಗೆ ಅವರು ಈ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಒಂದು ವಾರದಲ್ಲೇ ಸಿಎನ್‌ಜಿ ದರ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದರೊಂದಿಗೆ, ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾದ ಕಾರಣ ಕಳೆದ ಶುಕ್ರವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲಾಗಿತ್ತು.

ಚುನಾವಣೆ ಮುಗಿಯುತ್ತಿದ್ದಂತೆ ಜನರಿಗೆ ಬರೆ!

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ವಿರುದ್ಧ ನೇರ ಪ್ರಹಾರ ನಡೆಸಿದ್ದಾರೆ. “ಚುನಾವಣೆಗೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ್ದರೆ, ಚುನಾವಣೆಯಲ್ಲಿ ಅವರಿಗೆ ಭಾರಿ ನಷ್ಟವಾಗುತ್ತಿತ್ತು. ಹಾಗಾಗಿಯೇ, ಮೋದಿ ಸರ್ಕಾರ ಚುನಾವಣೆ ಮುಗಿಯುವವರೆಗೆ ಎಲ್ಲವನ್ನೂ ದೇಶದ ಜನರಿಂದ ಮುಚ್ಚಿಟ್ಟಿತ್ತು. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಪ್ರತಿಯೊಂದರ ಬೆಲೆಯನ್ನೂ ಏರಿಕೆ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ಬಿಜೆಪಿಗೆ ದೂರದೃಷ್ಟಿಯಿಲ್ಲ

ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಗೆ ದೂರದೃಷ್ಟಿಯ ಕೊರತೆಯಿದೆ. ಅದಕ್ಕಾಗಿಯೇ ದೇಶಕ್ಕೆ ಇಂತಹ ಭೀಕರ ಬೆಲೆ ಏರಿಕೆ ಎದುರಾಗಲಿದೆ ಎಂಬುದನ್ನು ಮುಂಚಿತವಾಗಿ ಊಹಿಸಲು ಅವರಿಂದ ಸಾಧ್ಯವಾಗಲಿಲ್ಲ” ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಹೋರಾಟದ ಎಚ್ಚರಿಕೆ:

“ಬಿಜೆಪಿ ಸರ್ಕಾರದ ಜನವಿರೋಧಿನೀತಿಗಳಿಂದಾಗಿ ದೇಶದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆ ನಿರಂತರವಾಗಿ ಹೆಚ್ಚುತ್ತಿದೆ. ದೇಶದ ಬಡ ಜನರಿಗೆ ಕನಿಷ್ಠ ಅಗತ್ಯ ವಸ್ತುಗಳೂ ಸಿಗದಂತಾಗಿದೆ. ಈ ದ್ವಂದ್ವ ನೀತಿಯ ವಿರುದ್ಧ ಕಾಂಗ್ರೆಸ್ ಪಕ್ಷವು ಸಂಸತ್ತಿನ ಒಳಗೆ ಮತ್ತು ಹೊರಗೆ ಧ್ವನಿ ಎತ್ತಲಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ.

[t4b-ticker]
error: Content is protected !!