ಅಡಕೆ ಬೆಳೆಯುವ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಿಂದ ಕೊಳೆರೋಗ ವ್ಯಾಪಕವಾಗಿ ಹರಡಿದ್ದು ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 11,139 ಹೆಕ್ಟೇರ್ ಅಡಕೆ ತೋಟ ಬೆಳೆ ನಷ್ಟಕ್ಕೀಡಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಮಂಗಳವಾರ ವಿಧಾನಸಭೆಯಲ್ಲಿಸರಕಾರದ ಗಮನ ಸೆಳೆದರು.ಕೊಳೆರೋಗ ಪರಿಹಾರಕ್ಕೆ ಜಿಲ್ಲೆಗೆ 24 ಕೋಟಿ ರೂ. ಬೇಕಾಗಬಹುದು ಎಂದು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.
ಇದರಿಂದಾಗಿ ಸುಳ್ಯ ತಾಲೂಕಿನಲ್ಲಿ 1910 ಹೆಕ್ಟೇರ್ ಅಡಕೆ ಕೊಳೆರೋಗಕ್ಕೆ ತುತ್ತಾಗಿದೆ. ಪುತ್ತೂರಿನಲ್ಲಿ 2100 ಹೆಕ್ಟೇರ್, ಬೆಳ್ತಂಗಡಿಯಲ್ಲಿ 1980, ಬಂಟ್ವಾಳದಲ್ಲಿ 1715, ಕಡಬದಲ್ಲಿ 2150 ಹೆಕ್ಟೇರ್ ರೋಗಪೀಡಿತವಾಗಿದೆ. ಜಿಲ್ಲೆಯಲ್ಲಿ ಸುಮಾರು 11,139 ಹೆಕ್ಟೇರ್ ಅಡಕೆ ತೋಟ ರೋಗಕ್ಕೆ ತುತ್ತಾಗಿ ಜರ್ಜರಿತಗೊಂಡಿದೆ.ಇದರೊಂದಿಗೆ ಬಿರುಗಾಳಿಗೆ ಸಿಲುಕಿ ಅಪಾರ ಪ್ರಮಾಣದ ಅಡಕೆ ಮರಗಳು ಮುರಿದು ಬಿದ್ದಿವೆ. ಒಂದು
ಅಡಕೆ ಸಸಿಯನ್ನು ಬೆಳೆಸಲು 6 ವರ್ಷ ಬೇಕು. ಅಡಕೆ ಮರ ನಾಶವಾದರೆ ಹೆಕ್ಟೇರ್‌ಗೆ 22,500 ರೂ. ಪರಿಹಾರ ನಿಗದಿ ಮಾಡಲಾಗಿದೆ. ಇದು ಏನೇನೂ ಸಾಲದು. ಒಂದು ಹೆಕ್ಟೇರ್ ತೋಟದಲ್ಲಿ 1370 ಅಡಕೆ ಮರ ತುಂಬುತ್ತಿದ್ದು, ತಲಾ ಮರಕ್ಕೆ 16 ರೂ. ಪರಿಹಾರ ನಿಗದಿ ಮಾಡಿದ್ದು ತೀರಾ ಕಡಿಮೆಯಾಗಿದೆ. ಕೇರಳದಲ್ಲಿ 2500 ರೂ. ಕೊಡುತ್ತಿದ್ದು, ಅದೇ ಮಾದರಿ ರಾಜ್ಯದಲ್ಲೂ ಅಳವಡಿಸಬೇಕು. ಸರಕಾರ ಆದಷ್ಟು ಬೇಗ ಕೊಳೆರೋಗ ಪರಿಹಾರ ಬಿಡುಗಡೆ ಮಾಡಬೇಕು ಎಂದವರು ಆಗ್ರಹಿಸಿದರು.ಹಳದಿ ರೋಗದ ಭೀಕರತೆಯನ್ನು ವಿವರಿಸಿದ ಶಾಸಕರು, ಸುಳ್ಯ ತಾಲೂಕಿನ 10 ಗ್ರಾಮಗಳಲ್ಲಿ ಅಡಕೆ ತೋಟ ಹಳದಿ ರೋಗದಿಂದ ನಾಶವಾಗಿದೆ ಎಂದರು.














































