ದ.ಕ .ಜಿಲ್ಲೆಯಲ್ಲಿ ಕೆಂಪುಕಲ್ಲು, ಮರಳು ಸಮಸ್ಯೆ ಪರಿಹರಿಸುವಂತೆ ಶಾಸಕರ ಒತ್ತಾಯ

Picture of Savistara

Savistara

Bureau Report

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲಿನ ದುಬಾರಿ ದರ, ಮರಳು ಕೊರತೆ ಮತ್ತು ಕೆಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ಬಗ್ಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕರು ಈ ವಿಷಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮಂಗಳೂರು, ನ. II: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲಿನ ದುಬಾರಿ ದರ, ಮರಳು ಕೊರತೆ ಮತ್ತು ಕೆಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ಬಗ್ಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕರು ಈ ವಿಷಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕೆಂಪುಕಲ್ಲು ಮತ್ತು ಮರಳು ಸಮಸ್ಯೆ: ಶಾಸಕರ ಆಕ್ಷೇಪ

ಕೆಂಪುಕಲ್ಲಿನ ಗಣಿಗಾರಿಕೆ ಮೇಲಿನ ರಾಜಧನ ಇಳಿಕೆಯಾಗಿದ್ದರೂ ದರ ದುಬಾರಿಯಾಗಿರುವುದು ಬಡವರ ಮನೆ ನಿರ್ಮಾಣಕ್ಕೆ ತೊಡಕಾಗಿದೆ ಎಂದು ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ. ಭರತ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, “ರಾಜಧನ ಇಳಿಕೆಯಾಗುವ ಮೊದಲು 30 ರೂ. ಇದ್ದ ಕೆಂಪುಕಲ್ಲಿನ ದರ ಈಗ 55 ರೂ. ಆಗಿದೆ. ಇದರಿಂದ ಬಡವರಿಗೆ ಮನೆ ನಿರ್ಮಿಸುವುದು ಅಸಾಧ್ಯವಾಗಿದೆ” ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, “ಕೆಂಪುಕಲ್ಲು ದುಬಾರಿ ಬೆಲೆ ಮತ್ತು ಮರಳಿನ ಸಮಸ್ಯೆಯಿಂದಾಗಿ ಬಡವರು ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಸಂಕಷ್ಟ ಪಡುತ್ತಿದ್ದಾರೆ” ಎಂದು ತಿಳಿಸಿದರು.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಪ್ರತಿಕ್ರಿಯಿಸಿ, “ರಾಜಧನವನ್ನು ಟನ್‌ಗೆ 295 ರೂ.ಗಳಿಂದ 100 ರೂ.ಗಳಿಗೆ ಇಳಿಸಿದ್ದರೂ ದರ ಇಳಿಕೆಗೆ ಮುಂದಾಗದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೆಂಪುಕಲ್ಲು ಗಣಿಗಾರಿಕೆ ಸಂಘದ ಜೊತೆ ಮಾತನಾಡಲಾಗಿದ್ದು, ದರ ನಿಯಂತ್ರಿಸದಿದ್ದರೆ ಜಿಲ್ಲಾಡಳಿತದಿಂದ ಯಾವುದೇ ಸಹಕಾರ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಮರಳಿನ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ.“ಸಿಆರ್‌ಝಡ್ತೀತರ ವಲಯದಲ್ಲಿ 16 ಬ್ಲಾಕ್‌ಗಳಿಗೆ ಟೆಂಡ‌ರ್ ಕರೆಯಲಾಗಿದೆ, 4 ಕಡೆ ಲೈವ್ ಬಿಡ್ಡಿಂಗ್ ಆಗಿದೆ ಮತ್ತು 18 ಕಡೆ ಎಸಿ ಹಂತದಲ್ಲಿದೆ. ಒಟ್ಟು 38 ಹೊಸ ಬ್ಲಾಕ್‌ಗಳಲ್ಲಿ ಟೆಂಡ‌ರ್ ಪ್ರಕ್ರಿಯೆ ನಡೆಯುತ್ತಿದ್ದು, ಬಿಡ್ಡುದಾರರು ಇಲ್ಲದಿದ್ದಲ್ಲಿ ಮರು ಟೆಂಡ‌ರ್ ಕರೆಯಲಾಗುವುದು. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಇನ್ನೂ ಅನುಮತಿ ದೊರಕಿಲ್ಲ” ಎಂದರು.

ಇಎಸ್‌ಐನಡಿ ಸಾಮಾನ್ಯ ಚಿಕಿತ್ಸೆಗೆ ತೊಂದರೆ

ಇಎಸ್‌ಐ ಕಾರ್ಡ್ ಹೊಂದಿರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿಲ್ಲ. ರಾಜ್ಯ ಸರ್ಕಾರದಿಂದ ನವೀಕರಣ ವ್ಯವಸ್ಥೆ ಆಗದ ಕಾರಣ ಕಾರ್ಡ್ ಹೊಂದಿದವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಸಭೆಯಲ್ಲಿ ತಿಳಿಸಿದರು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಈ ಬಗ್ಗೆ ರಾಜ್ಯ ವೈದ್ಯಕೀಯ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಕೂಳೂರು ಸೇತುವೆಗೆ ಮತ್ತೊಂದು ಡೆಡ್‌ಲೈನ್‌!

ಕೂಳೂರು ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ಕಾಮಗಾರಿ ಆರಂಭಗೊಂಡಿದ್ದು, ಅಡಿಪಾಯದ ಪ್ರಾಥಮಿಕ ಕೆಲಸಗಳು ಪೂರ್ಣಗೊಂಡಿವೆ. ಪೈಲ್ ಕ್ಯಾಪ್ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿಯೊಳಗೆ ಮುಗಿದು ಸರ್ವಿಸ್ ರಸ್ತೆ ಕಾಮಗಾರಿಯ ಬಳಿಕ ಮಾರ್ಚ್‌ನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಕಾಮಗಾರಿಗೆ ಹಣದ ಕೊರತೆ ಇಲ್ಲ” ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಜಾವೇದ್ ಅಜ್ಜಿ ಮಾಹಿತಿ ನೀಡಿದರು. ಮಾರ್ಚ್‌ನಲ್ಲಿ ಮುಗಿಯಬೇಕಿದ್ದರೆ ಮೂರು ಪಾಳಿಯಲ್ಲಿ ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪೆರಿಯ ಶಾಂತಿಯಿಂದ ಬಿ.ಸಿ. ರೋಡ್ ವರೆಗಿನ 48.485 ಕಿ.ಮೀ ಹೆದ್ದಾರಿಯಲ್ಲಿ 43.1 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ 2026ರ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು. ನೀರಕಟ್ಟೆಯಲ್ಲಿ ಬಂಡೆ ಒಡೆಯುವ ಕೆಲಸಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಸಂಸದರು ಪುತ್ತೂರು ಎಸಿ ಮಧ್ಯ ಪ್ರವೇಶಿಸುವಂತೆ ಸಲಹೆ ನೀಡಿದರು.

ಮಹಾಕಾಳಿಪಡ್ಡು ಕೆಳಸೇತುವೆ ಡಿಸೆಂಬರ್‌ಗೆ ಪೂರ್ಣ

ಮಹಾಕಾಳಿಪಡ್ಡು ರೈಲ್ವೆ ಕೆಳಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದಾಗ, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್‌ ಪ್ರಭ, “ಕಾಮಗಾರಿ ಡಿಸೆಂಬರ್ 20ರೊಳಗೆ ಪೂರ್ಣಗೊಳ್ಳಲಿದೆ” ಎಂದು ಉತ್ತರಿಸಿದರು. ಈ ಕಾಮಗಾರಿ ಪೂರ್ಣಗೊಳ್ಳದ ಕಾರಣ 2022ರಲ್ಲಿ ಕರಾವಳಿ ವೃತ್ತದಿಂದ ಮಹಾವೀರ ವೃತ್ತದ (ಪಂಪ್‌ವೆಲ್‌) ವರೆಗಿನ ರಸ್ತೆ ಕಾಮಗಾರಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಆಕ್ಷೇಪಿಸಿದರು.

ರೈಲ್ವೆ ಇಲಾಖೆಯ ಡಿಆರ್‌ಎಂ ದರ್ಜೆಯ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆಸಲು ರೈಲ್ವೆ ಸಚಿವರೇ ಸೂಚಿಸಿದ್ದರೂ ಸಭೆ ನಡೆಯುತ್ತಿಲ್ಲ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಎಚ್ಚರಿಸಿದರು.

ಹೊಸ ಸರ್ವಿಸ್ ರಸ್ತೆ. ಪಾದಾಚಾರಿ ಸೇತುವೆ ಪ್ರಸ್ತಾವನೆ

ದಕ ಜಿಲ್ಲೆಯ ಮುಲ್ಕಿಯಲ್ಲಿ 500 ಮೀಟರ್, ಪಡು ಪಣಂಬೂರು ಬಳಿ 310 ಮೀಟರ್, ಹಳೆಯಂಡಿಯಲ್ಲಿ 550 ಮೀಟರ್ ಹಾಗೂ ಬೀರಿಯಲ್ಲಿ 700 ಮೀಟರ್ ಉದ್ದದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರಸ್ತಾವಿಸಲಾಗಿದೆ. ಇದೇ ವೇಳೆ ಮುಲ್ಕಿ ಬಪ್ಪನಾಡು ದೇವಸ್ಥಾನದ ಬಳಿ, ಮುಕ್ತ ಶ್ರೀನಿವಾಸ ಕಾಲೇಜು ಬಳಿ ಹಾಗೂ ಗೋರಿಗುಡ್ಡಗಳಲ್ಲಿ ಪಾದಾಚಾರಿ ಸೇತುವೆಗಳನ್ನು ನಿರ್ಮಿಸಲು ಪ್ರಸ್ತಾವಿಸಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.ಸುರತ್ಕಲ್ ಮಂಗಳೂರು ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿಯು ಪ್ರಸ್ತುತ ನವಮಂಗಳೂರು ಬಂದರು ರಸ್ತೆ ಕಂಪನಿ ಅಧೀನದಲ್ಲಿದೆ. ಇದರ ನಿರ್ವಹಣೆಗೆ ಎನ್‌ಎಚ್‌ಎಐ ಅನುದಾನ ಒದಗಿಸುತ್ತಿಲ್ಲ. ಈ ಹೆದ್ದಾರಿ ಶೀಘ್ರವೇ ಎನ್‌ಎಚ್‌ಎಐಗೆ ಹಸ್ತಾಂತರವಾಗಲಿದ್ದು. ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ಡಿಪಿಆ‌ರ್ ತಯಾರಿಸುವ ಏಜೆನ್ಸಿ ಗೊತ್ತುಪಡಿಸಲು ಟೆಂಡ‌ರ್ ಕರೆಯಲಾಗಿದೆ. ಇದರ ಅಭಿವೃದ್ಧಿಗೆ ಎಲ್ಲ ಪಾಲುದಾರರ ಜೊತೆ ಚರ್ಚಿಸಿ ಯೋಜನೆ ರೂಪಿಸಲಾಗುತ್ತದೆ ಎಂದರು.

ಸಭೆಯಲ್ಲಿ ಜಿ.ಪಂ ಸಿಇಒ ವಿನಾಯಕ ನರ್ವಾಡೆ ಕರ್ಬಾರಿ. ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಆಯಂಟನಿ ಮರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!