ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸಿದ್ದರಾಮಯ್ಯ, ಜಾರಕಿಹೊಳಿ ಗೈರು: ಚರ್ಚೆಗೆ ಗ್ರಾಸ

Picture of Savistara

Savistara

Bureau Report

ಬೆಂಗಳೂರು: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆಮಾಜಿ ಮುಖ್ಯಮಂತ್ರಿ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಗೈರಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನೂತನ ಸಚಿವರಿಗೆ ಅಧಿಕಾರ ಹಾಗೂ ಗೌಪ್ಯತಾ ಪ್ರಮಾಣವಚನ ಬೋಧಿಸಿದರು.ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ, ಪುಟ್ಟರಂಗಶೆಟ್ಟಿ, ಡಾ. ಅಜಯ್ ಸಿಂಗ್ ಸೇರಿದಂತೆ 19 ಮಂದಿ ಸೋಮವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ಸಚಿವ ಸಂಪುಟ ಸೇರ್ಪಡೆ ಸಂಬಂಧ ಬೆಳಗಾವಿ ಕಾಂಗ್ರೆಸ್ ನಾಯಕರ ನಡುವಿನ ಬಿಕ್ಕಟ್ಟು ಡಿ.ಕೆ. ಶಿವಕುಮಾ‌ರ್ ಅವರ ತಲೆನೋವಿಗೆ ಕಾರಣವಾಗಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಬೆಳಗಾವಿಯಿಂದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಸಚಿವರಾಗಿದ್ದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ ನಾಯಕರು ಸಮಾಧಾನಿಸಿದ್ದರು. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸತೀಶ ಜಾರಕಿಹೊಳಿ ಸಚಿವರಾಗಿದ್ದಾರೆ. ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನಿರೀಕ್ಷೆ ಇತ್ತು. ಈ ಸ್ಥಾನಕ್ಕಾಗಿ ಲಕ್ಷ್ಮಣ ಸವದಿ ಹಾಗೂ ಲಕ್ಷ್ಮಿ ನಡುವ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸವದಿಗೆ ಸಚಿವ ಸ್ಥಾನ ನೀಡುವುದಕ್ಕೆ ಜಾರಕಿಹೊಳಿ ಹಾಗೂ ಲಕ್ಷ್ಮಿ ಅವರ ವಿರೋಧವಿತ್ತು.ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಜಾರಕಿಹೊಳಿ, ಸವದಿ ಹಾಗೂ ಲಕ್ಷ್ಮಿ ಅವರನ್ನು ಪ್ರತ್ಯೇಕವಾಗಿ ಕರೆಸಿ ಈಚೆಗೆ ಮಾತುಕತೆ ನಡೆಸಿದ್ದರು. ಲಕ್ಷ್ಮಿ ಅವರನ್ನು ಸಚಿವರನ್ನಾಗಿ ಮಾಡುವುದಕ್ಕೆ ಹೆಚ್ಚೇನೂ ವಿರೋಧ ವ್ಯಕ್ತವಾಗಿಲ್ಲ. ಸವದಿ ಸೇರ್ಪಡೆಗೆ ಉಳಿದ ಇಬ್ಬರು ನಾಯಕರು ವಿರೋಧಿಸಿದ್ದರು. ಮೂರು ವರ್ಷಗಳ ಹಿಂದೆಯಷ್ಟೇ ಸವದಿ ಪಕ್ಷಕ್ಕೆ ಸೇರಿದ್ದಾರೆ. ಅವರನ್ನು ಈ ಸಲ ಪರಿಗಣಿಸುವುದು ಬೇಡ ಎಂಬುದು ಉಳಿದವರ ವಾದ. ಪಕ್ಷ ಸೇರ್ಪಡೆ ಸಂದರ್ಭದಲ್ಲೇ ಸಚಿವ ಸ್ಥಾನದ ವಾಗ್ದಾನ ನೀಡಲಾಗಿತ್ತು. ಮೂರು ವರ್ಷಗಳಿಂದ ತಾಳ್ಮೆಯಿಂದ ಕಾದಿದ್ದೇನೆ. ವಚನ ಭ್ರಷ್ಟರಾಗಬೇಡಿ ಎಂದು ಸವದಿ ಹೇಳಿದ್ದರು ಎಂದು ಮೂಲಗಳು ತಿಳಿಸಿದ್ದವು.

[t4b-ticker]
error: Content is protected !!