ಚೆನ್ನೈ: ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿವಾದದ ಹಿನ್ನೆಲೆ:ಮೇಕೆದಾಟು ಯೋಜನೆ ವಿರೋಧಿಸಿ ಹಾಗೂ ಡೆಲ್ಟಾ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲು ಒತ್ತಾಯಿಸಿ ತಂಜಾವೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಗವಹಿಸಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ಅವರ ಹೆಸರು ಬಳಸಿ ನೀಡಿದ್ದಾರೆ ಎನ್ನಲಾದ ‘ಡಬಲ್ ಮೀನಿಂಗ್’ (ದ್ವಂದ್ವಾರ್ಥ) ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಹೇಳಿಕೆಯನ್ನು ಸಚಿವರು ಹಾಗೂ ರಾಜಕೀಯ ಮುಖಂಡರು ತೀವ್ರವಾಗಿ ಖಂಡಿಸಿದ್ದರು.
ಮನೆಯಲ್ಲೇ ಬಂಧಿಸಿದ ಪೊಲೀಸರು:ಈ ಸಂಬಂಧ ತಂಜಾವೂರಿನ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಂದು ಬೆಳಿಗ್ಗೆ ನೀಲಂಕರೈನಲ್ಲಿರುವ ಉದಯನಿಧಿ ಸ್ಟಾಲಿನ್ ಅವರ ನಿವಾಸಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ.
“ಇದಕ್ಕೆಲ್ಲ ನಾನು ಹೆದರುವುದಿಲ್ಲ”:ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದಯನಿಧಿ ಸ್ಟಾಲಿನ್, “ಸರ್ಕಾರವು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ.ಕಾನೂನುಬದ್ಧವಾಗಿ ಎಲ್ಲವನ್ನೂ ಎದುರಿಸಲು ನಾನು ಸಿದ್ಧನಿದ್ದೇನೆ.” ಎಂದು ಸವಾಲು ಹಾಕಿದ್ದಾರೆ.
ವೈರಲ್ ವೀಡಿಯೋದಲ್ಲೇನಿದೆ?“ಕಾವೇರಿ ನೀರಿನ ಒಂದು ಹನಿಯೂ ಸಿಗುತ್ತಿಲ್ಲ. ಆದರೆ ಮುಖ್ಯಮಂತ್ರಿಗಳು ಇದರ ಬಗ್ಗೆ ಮೌನವಾಗಿದ್ದಾರೆ. ನೀರು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಬೇಕು” ಎಂದು ನಗುತ್ತಾ ದ್ವಂದ್ವಾರ್ಥದಲ್ಲಿ ಮಾತನಾಡಿದ್ದ ವೀಡಿಯೋ ಟೀಕೆಗೆ ಗುರಿಯಾಗಿದೆ. ಇದನ್ನು ಕೇವಲ ರಾಜಕೀಯ ಟೀಕೆಯಾಗಿ ನೋಡದೆ, ವೈಯಕ್ತಿಕ ನಿಂದನೆ ಎಂದು ಪರಿಗಣಿಸಲಾಗಿದೆ.
ಹೈಕೋರ್ಟ್‌ನಲ್ಲಿ ತುರ್ತು ವಿಚಾರಣೆ:ಇನ್ನೊಂದೆಡೆ, ಉದಯನಿಧಿ ಸ್ಟಾಲಿನ್ ಅವರ ಬಂಧನವನ್ನು ವಿರೋಧಿಸಿ ಡಿಎಂಕೆ ಪರವಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ತುರ್ತು ಮೇಲ್ಮನವಿ ಸಲ್ಲಿಸಲಾಗಿದೆ. ಇಂದು ಮಧ್ಯಾಹ್ನವೇ ಇದರ ವಿಚಾರಣೆ ನಡೆಯಲಿದ್ದು, ಮಧ್ಯಾಹ್ನದವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ.
















































