ಬ್ರಾಹ್ಮಣ ಕೋಟಾದಡಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ದಿನೇಶ್ ಗುಂಡೂರಾವ್ ದಂಪತಿ ಅಸಮಾಧಾನ: ‘ಎಕ್ಸ್‌’ನಲ್ಲಿ ಬಹಿರಂಗ ಆಕ್ರೋಶ..!

Picture of Savistara

Savistara

Bureau Report

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಹಿರಿಯ ಶಾಸಕ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸ್ವತಃ ದಿನೇಶ್ ಗುಂಡೂರಾವ್ ಹಾಗೂ ಅವರ ಪತ್ನಿ ತಬು ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ನಿಷ್ಠೆಗೆ ಬೆಲೆ ಇಲ್ಲವೇ? – ದಿನೇಶ್ ಗುಂಡೂರಾವ್ ಪ್ರಶ್ನೆ:ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದಿನೇಶ್ ಗುಂಡೂರಾವ್ ಅವರು ಎಕ್ಸ್ (ಟ್ವಿಟರ್) ಮೂಲಕ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. “ಪಕ್ಷದ ಸಂಕಷ್ಟದ ಕಾಲದಲ್ಲಿ ಯೂತ್‌ ಕಾಂಗ್ರೆಸ್‌ನಿಂದ ಹಿಡಿದು ಎಐಸಿಸಿವರೆಗೆ ವಿವಿಧ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿದ್ದೇನೆ. ಆರು ಬಾರಿ ಶಾಸಕನಾಗಿ ಜನರ ಸೇವೆ ಮಾಡಿರುವ ತೃಪ್ತಿ ನನಗಿದೆ. ಆದರೆ, ಈ ಬಾರಿ ಯಾವುದೇ ಕಾರಣ ನೀಡದೆ ನನ್ನನ್ನು ಸಂಪುಟದಿಂದ ಹೊರಗಿಟ್ಟಿರುವುದು ತೀವ್ರ ಬೇಸರ ತಂದಿದೆ,” ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ, ಸಚಿವ ಸ್ಥಾನ ಸಿಗದಿದ್ದರೂ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.

ತಬು ರಾವ್ ಆಕ್ರೋಶ: “ಜಾತಿಯೇ ಪ್ರಮುಖವಾಯಿತೇ?”ಇನ್ನೊಂದೆಡೆ ದಿನೇಶ್ ಗುಂಡೂರಾವ್ ಅವರ ಪತ್ನಿ ತಬು ರಾವ್ ಅವರು ನೇರವಾಗಿಯೇ ಹೈಕಮಾಂಡ್ ನಿರ್ಧಾರವನ್ನು ಟೀಕಿಸಿದ್ದಾರೆ. “ಆರೋಗ್ಯ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತಂದ ಹಾಗೂ ಪಕ್ಷಕ್ಕಾಗಿ ಸದಾ ಶ್ರಮಿಸಿದ ನಾಯಕನನ್ನು ಏಕೆ ಕೈಬಿಡಲಾಯಿತು?ಶ್ರಮಪಟ್ಟು ಕೆಲಸ ಮಾಡುವವರಿಗಿಂತ ಜಾತಿ ಸಮೀಕರಣವೇ ಇಲ್ಲಿ ಪ್ರಮುಖವಾಯಿತೇ?” ಎಂದು ಅವರು ಪ್ರಶ್ನಿಸಿದ್ದಾರೆ. ನಿಷ್ಠಾವಂತ ವ್ಯಕ್ತಿಗಳನ್ನು ಕ್ಷಣಾರ್ಧದಲ್ಲಿ ಬಲಿಕೊಡಲಾಗುತ್ತಿದೆ ಎಂದು ಅವರು ಕಿಡಿಕಾಡಿದ್ದಾರೆ.

ಬ್ರಾಹ್ಮಣ ಕೋಟಾದಡಿ ಅಸಮಾಧಾನ:ಸಂಪುಟ ವಿಸ್ತರಣೆಯಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟಿರುವುದು ಮಾತ್ರವಲ್ಲದೆ, ಇಡೀ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ. ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರಿಗೆ ಮನ್ನಣೆ ಸಿಕ್ಕಿಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

[t4b-ticker]
error: Content is protected !!