ಬೆಂಗಳೂರು: ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಸಂಬಂಧ20 ಮಂದಿ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿತ್ತಾದರೂ 19 ಮಂದಿ ಮಾತ್ರ ಸಚಿವರಾಗಿ ಇಂದು (ಸೋಮವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ.
ನೂತನ ಸಚಿವರ ಪಟ್ಟಿಯಲ್ಲಿದ್ದವರ ಪೈಕಿ ಗಾಯತ್ರಿ ಶಾಂತೇಗೌಡ ಅವರು ಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿಲ್ಲ. ಕೊನೇ ಕ್ಷಣದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮಹಿಳಾ ಶಾಸಕಿಯರ ನಡುವಿನ ತೀವ್ರ ಪೈಪೋಟಿಯೇ ಇದಕ್ಕೆ ಕಾರಣ ಎಂದು ವರದಿಯಾಗಿದೆ.20 ಮಂದಿ ನೂತನ ಸಚಿವರ ಪಟ್ಟಿಯಲ್ಲಿ ಗಾಯತ್ರಿ ಅವರ ಹೆಸರಿತ್ತು. ಆದರೆ, ಪರಿಷತ್ ಸದಸ್ಯೆಯಾಗಿ ಗಾಯತ್ರಿ ಇನ್ನೂ ಪ್ರಮಾಣ ಸ್ವೀಕರಿಸದ ಕಾರಣ ಪಕ್ಷದಲ್ಲಿ ಈ ಬಗ್ಗೆ ಅಸಮಾಧಾನ ಭುಗಿಲೆದಿತ್ತು.ಮಹಿಳಾ ಸಚಿವ ಸ್ಥಾನಕ್ಕೆ ಗಾಯತ್ರಿ ಅವರ ಹೆಸರು ಘೋಷಣೆ ನಡುವೆಯೂ ಲಕ್ಷ್ಮಿ ಹೆಬ್ಬಾಳ್ಳರ್, ಉಮಾಶ್ರೀ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಕೊನೆ ಕ್ಷಣದಲ್ಲಿ ಗಾಯತ್ರಿ ಹೆಸರು ಬಿಡಲೇಬೇಕು ಎಂಬ ರಾಜ್ಯ ನಾಯಕರ ಒತ್ತಡಕ್ಕೆ ಕಾಂಗ್ರೆಸ್ ವರಿಷ್ಠರು ಮಣಿದಿದ್ದಾರೆ.








































