ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಸಿದ್ದ ಮೂಲಮೃತ್ತಿಕಾ ಪ್ರಸಾದ ವಿತರಣೆ

Picture of Savistara

Savistara

Bureau Report

ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ (ಹುತ್ತದ ಮಣ್ಣು)ಯನ್ನು ತೆಗೆಯಲಾಗಿದ್ದು, ಭಕ್ತರಿಗೆ ವಿತರಣೆ ಮಾಡಲಾಯಿತು.

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುದ್ಧ ಏಕಾದಶಿಯ ಇಂದು (ಶನಿವಾರ) ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ (ಹುತ್ತದ ಮಣ್ಣು)ಯನ್ನು ತೆಗೆಯಲಾಯಿತು. ಶ್ರೀ ದೇವಳದ ಗರ್ಭಗುಡಿಯಿಂದ ಪ್ರಧಾನ ಅರ್ಚಕರು ವಿವಿಧ ವೈದಿಕ ವಿಧಿ-ವಿಧಾನಗಳೊಂದಿಗೆ ಮುಂಜಾನೆಯ ಶುಭಮುಹೂರ್ತದಲ್ಲಿ ಮೂಲಪ್ರಸಾದ ಮೃತ್ತಿಕೆ ತೆಗೆದು ಭಕ್ತಾಧಿಗಳಿಗೆ ವಿತರಿಸಿದರು.ಇದು ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಮಹಾಪ್ರಸಾದವಾಗಿದೆ. ಯಾವುದೇ ದೇವಳದಲ್ಲಿ ಕೂಡ ಇಂತಹ ಪ್ರಸಾದ ಸಿಗುವುದಿಲ್ಲ. ಇದು ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಭಕ್ತರಿಗೆ ದೊರಕುವುದು ವಿಶೇಷವಾಗಿದೆ.

ಮೂಲಮೃತ್ತಿಕಾ ಪ್ರಸಾದವನ್ನು ವರ್ಷದಲ್ಲಿ ಒಂದೇ ಬಾರಿ ತೆಗೆಯಲಾಗುವುದು. ಈ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮರೋಗಗಳ ಪರಿಹಾರಕ್ಕೆ ದಿವ್ಯ ಔಷಧವಾಗಿದ್ದು, ಭಕ್ತರು ಶುಭ ಕಾರ್ಯಗಳ ಒಳಿತಿಗೂ, ವ್ಯಾದಿಗಳ ನಿವಾರಣೆಗೂ ಕೊಂಡೊಯ್ಯುತ್ತಾರೆ. ಇದನ್ನು ಶರೀರಕ್ಕೆ, ಮನೆಗಳಿಗೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾದಿಗಳು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಆದರೆ ಇದನ್ನು ಶರೀರದಲ್ಲಿ ಇರಿಸಿಕೊಂಡರೂ ಅಪವಿತ್ರವಾಗದಂತೆ ತಡೆಯುವುದು ಅತ್ಯಂತ ಪ್ರಮುಖವಾದ ಅಂಶವಾಗಿದೆ.

ಮೂಲಮೃತಿಕಾ ಎಂದರೆ ಏನು? ಮೂಲಮೃತಿಕಾಪ್ರಸಾದವೆಂಬುದು ಸಾಮಾನ್ಯ ಮಣ್ಣಲ್ಲ. ನಾಗಸ್ವಾಮಿ ಸುಬ್ರಹ್ಮಣ್ಯನ ದೈವಿಕ ತಪೋಭೂಮಿ ಮತ್ತು ಪುರಾತನ ಸನ್ನಿಧಿಯ ಪವಿತ್ರ ತಳದಲ್ಲಿ ಸಂಗ್ರಹಿಸಲ್ಪಟ್ಟ ಮಣ್ಣು ಎಂದು ನಂಬಲಾಗುತ್ತದೆ. ಈ ಮಣ್ಣನ್ನು ನೇರವಾಗಿ ನಾಗಸ್ವಾಮಿಯ ಪವಿತ್ರ ಪೀಠದಿಂದ ಬಿಲದರ್ಶನ ಪ್ರದೇಶದ ಸಮೀಪದಿಂದ ದೇವಳದ ಅಧಿಕೃತ ಅನುಮತಿಯಲ್ಲಿ ಮಾತ್ರ ಸಂಗ್ರಹಿಸಲಾಗುತ್ತದೆ.

ಪೌರಾಣಿಕ ಹಿನ್ನೆಲೆ:

ಕುಕ್ಕೆ ಸುಬ್ರಹ್ಮಣ್ಯ ಪ್ರದೇಶವು ವಾಸುಕಿ ನಾಗರಾಜ ಮತ್ತು ಸುಬ್ರಹ್ಮಣ್ಯನ ತಪಸ್ಸು ಮತ್ತು ರಕ್ಷಣೆಗಳ ಪುರಾಣ ಭೂಮಿ. ಪುರಾಣಗಳ ಪ್ರಕಾರ, ತಾರಕಾಸುರನ ಸಂಹಾರದ ನಂತರ ಸುಬ್ರಹ್ಮಣ್ಯನು ಈ ನಾಡಿನಲ್ಲಿ ತಪಸ್ಸು ನಡೆಸುತ್ತಿದ್ದ. ಈ ಸಂದರ್ಭದಲ್ಲಿ ವಾಸುಕಿ ನಾಗರಾಜನು ಈ ಸ್ಥಳದಲ್ಲಿ ಆಶ್ರಯ ಪಡೆದನು. ಆ ಕಾಲದಿಂದಲೂ ಈ ಪ್ರದೇಶದ ಮಣ್ಣು ನಾಗದೋಷ ಪರಿಹಾರ, ಶಾಂತಿ, ಆರೋಗ್ಯ ಮತ್ತು ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯಿದೆ.ವಿಶೇಷವಾಗಿ ಸರ್ಪಶಾಪ ದೋಷಗಳ ನಿವಾರಣೆಗೆ ಈ ಮಣ್ಣು ಪವಿತ್ರವೆಂದು ಪರಿಗಣನೆ ಮಾಡಲಾಗಿದೆ. ಭಕ್ತರ ನಂಬಿಕೆಯ ಪ್ರಕಾರ ಮೂಲಮೃತಿಕಾ ಪ್ರಸಾದವು ನಾಗದೋಷ, ಕಾಲಸರ್ಪದೋಷ ಮುಂತಾದ ಸರ್ಪಸಂಬಂಧಿತ ದೋಷಗಳಿಂದ ರಕ್ಷಣೆಯಾಗಿದೆ. ಆರೋಗ್ಯವೃದ್ದಿ ಮತ್ತು ಶಾಂತಿಗಾಗಿ, ಮನೆಯಲ್ಲಿ ನಕಾರಾತ್ಮಕ ಮತ್ತು ದುಷ್ಟ ಶಕ್ತಿಗಳ ನಿವಾರಣೆಗಾಗಿ, ನವಜಾತ ಶಿಶುಗಳು, ಗರ್ಭಿಣಿಯರು ಮತ್ತು ಕೌಟುಂಬಿಕ ಸುಖಶಾಂತಿಗಾಗಿ ವಿಶೇಷವಾಗಿ ಬಳಸಲಾಗುತ್ತದೆ. ಮನೆಯ ದೇವರಸ್ಥಾನದಲ್ಲಿ ಶುದ್ಧಿ ಮತ್ತು ಪವಿತ್ರತೆಯನ್ನು ಹೆಚ್ಚಿಸುವುದು. ವಾಸ್ತುದೋಷ ಸೇರಿದಂತೇ ಇತರ ದೋಷಗಳಿಗೂ ಪರಿಹಾರವೆಂದು ನಂಬಿಕೆ.

ದೇವಾಲಯದ ಪ್ರಸಾದ ಕೌಂಟರ್‌ನಲ್ಲಿ ಮಾತ್ರವೇ ಇದು ದೊರೆಯುತ್ತದೆ. ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಇದನ್ನು ಧಾರ್ಮಿಕ ವಿಧಾನಗಳನ್ನು ಪಾಲಿಸಿ ಕಟ್ಟುನಿಟ್ಟಾಗಿ ವಿತರಣೆ ಮಾಡುತ್ತದೆ. ಅಕ್ರಮವಾಗಿ ಮಣ್ಣು ಸಂಗ್ರಹಿಸುವುದಕ್ಕೆ ಕಟ್ಟುನಿಟ್ಟಾಗಿ ನಿಷೇಧವಿದೆ.ಮೂಲಮೃತಿಕಾ ಬಳಸುವ ವಿಧಾನದಲ್ಲೂ ಶ್ರದ್ದೆ ಅಗತ್ಯವಿದೆ. ಮನೆಯ ಪವಿತ್ರತೆಗಾಗಿ ಮನೆಯ ದೇವರಸ್ಥಾನದಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ಇದನ್ನು ಇಡಬಹುದು. ಅಥವಾ ಹಬ್ಬ ಮತ್ತು ಪೂಜೆಯ ಸಮಯದಲ್ಲಿ ಬಾಗಿಲಿನ ಬಳಿ ಸ್ವಲ್ಪ ಎರಚಬಹುದು. ಆರೋಗ್ಯ ಹಾಗೂ ರಕ್ಷಣೆಗಾಗಿ ಕೆಲವು ಭಕ್ತರು ಇದನ್ನು ತಲೆಯ ಮೇಲೆ ಸಣ್ಣ ಪ್ರಮಾಣದಲ್ಲಿ ಸ್ಪರ್ಶಿಸುತ್ತಾರೆ. ರಕ್ಷೆಯ ತರಹ ಧರಿಸುವ ವಾಡಿಕೆಯೂ ಇದೆ. ಪೂಜಾ ಸಮಯದ ಪುಣ್ಯಸ್ನಾನದ ಸಮಯದಲ್ಲಿ ನೀರಿಗೆ ಮಿಶ್ರಣ ಮಾಡಿ ಬಳಸಲಾಗುತ್ತದೆ (ಬಾಲ್ಯ ಮತ್ತು ವಯಸ್ಕರಿಗೆ ಮಾತ್ರ). ನಾಗದೋಷ ಪರಿಹಾರಕ್ಕೆ ನಾಗಪ್ರತಿಷ್ಠೆಯ ದಿನ, ಶ್ರಾವಣ, ನಾಗಪಂಚಮಿ ಸಂದರ್ಭದಲ್ಲಿ ಮನೆ ದೇವರ ಬಳಿ ಇಟ್ಟು ಪ್ರಾರ್ಥನೆ ಮಾಡಲಾಗುತ್ತದೆ. ಕೃಷಿ ಜಮೀನಿನ ಪುಣ್ಯಕ್ಕಾಗಿ ಅಭಿವೃದ್ಧಿಗಾಗಿ ಕೆಲವು ರೈತರು ಜಮೀನಿನ ನಾಲ್ಕು ಮೂಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಎರಚುವ ನಂಬಿಕೆಯೂ ಇದೆ. ಮೂಲಮೃತಿಕೆಯೂ ಔಷಧಿ ಅಲ್ಲ, ಇದು ಪವಿತ್ರ ಪ್ರಸಾದ ಮಾತ್ರವಾಗಿದೆ.

ಸೇವನೆಯ (ತಿನ್ನುವ) ಉದ್ದೇಶಕ್ಕೆ ಬಳಸುವುದಕ್ಕೆ ದೇಗುಲದ ಅನುಮತಿಯಿಲ್ಲ, ಮತ್ತು ಹಾಗೆ ಮಾಡುವಂತೆಯೂ ಇಲ್ಲ. ಕುಕ್ಕೆ ದೇವಾಲಯದ ನಿಯಮಗಳನ್ನು ಮೀರಿ ಮಣ್ಣನ್ನು ತೆಗೆದುಕೊಂಡರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮೂಲಮೃತಿಕಾ ಅಥವಾ ನಾಗಸ್ವಾಮಿಯ ಸನ್ನಿಧಿಯಲ್ಲಿ ಆಶ್ರಯ ಪಡೆದ ಮಣ್ಣಿನ ತುಣುಕು, ನಮ್ಮ ಜೀವನದಲ್ಲಿ ರಕ್ಷಣೆ ಮತ್ತು ಶಾಂತಿಗೆ ಸಂಕೇತ. ಇದು ಭಕ್ತನಿಗೆ ದೈವಿಕ ಕಾವಲು, ಪವಿತ್ರ ನೆಲದ ಸಂಪರ್ಕ, ಮಾನಸಿಕ ಶಾಂತಿ, ಹಿಂದಿನ ಪೀಳಿಗೆಯಿಂದ ಬಂದ ಪರಂಪರೆಯ ನಂಟು ಮತ್ತು ಧಾರ್ಮಿಕತೆಯ ಸಂಕೇತವಾಗಿದೆ.ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಂಸ್ಥೆ ಸಾರ್ವಜನಿಕ ಪ್ರಕಟಣೆ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಮತ್ತು ಪೊಲೀಸ್ ಇಲಾಖೆಯ ಸಹಕಾರ ಹಾಗೂ ಸಹ ಭಾಗಿತ್ವದೊಂದಿಗೆ, ಯಾರೂ ಕೂಡ ತಮ್ಮ ಸಾಕು ಪ್ರಾಣಿಗಳಾದ ದನ, ಕರು, ಎತ್ತು, ಎಮ್ಮೆ, ಕೋಣ, ಬೆಕ್ಕು ಮತ್ತು ಬೆಕ್ಕಿನ ಮರಿಗಳು ಮತ್ತು ನಾಯಿ ಮತ್ತು ನಾಯಿ ಮರಿಗಳು ಮುಂತಾದ ಜಾನುವಾರುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಮತ್ತು ರಥ ಬೀದಿಗಳಿಗೆ ಬಿಡಬಾರದು. ದೇವಸ್ಥಾನದ ಸುತ್ತಮುತ್ತಲಿನ ಪರಿಸರಗಳ ಶುಚಿತ್ವವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಅಲ್ಲದೆ, ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ ಮಳಿಗೆಗಳಲ್ಲಿ ಯಾರೂ ಕೂಡ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ಪದಾರ್ಥಗಳ ಮಾರಾಟ, ಸೇವನೆ, ಸೇದುವಿಕೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೂ ಪ್ಲಾಸ್ಟಿಕ್ ಬ್ಯಾಗುಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ರಸ್ತೆಗಳಲ್ಲಿ, ರಥ ಬೀದಿಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು, ಸಿಕ್ಕ ಸಿಕ್ಕಲ್ಲಿ ತ್ಯಾಜ್ಯಗಳನ್ನು, ಕಸಗಳನ್ನು ಎಸೆಯುವುದು ದ್ರವ ತ್ಯಾಜ್ಯ ಗಲೀಜು ನೀರು ಬಿಡುವುದು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಂಡು ದಂಡನೆಯನ್ನು ವಿಧಿಸಲಾಗುವುದು ಎಂದು ಗ್ರಾಪಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!