ರಾತ್ರಿ ವೇಳೆ ಕಂಬಳ ಯಕ್ಷಗಾನ ಜಾತ್ರೆ ಆಚರಣೆಗೆ ಯಾವುದೇ ಅಡ್ಡಿ ಇಲ್ಲ – ಜಿಲ್ಲಾಡಳಿತ ಭರವಸೆ

Picture of Savistara

Savistara

Bureau Report

ಮಂಗಳೂರು ನವೆಂಬರ್ 16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳ, ಜಾತ್ರೆ ಯಕ್ಷಗಾನ ಹಾಗೂ ಇನ್ನಿತರ ಧಾರ್ಮಿಕ ಆಚರಣೆಗಳಿಗೆ ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಆದರೆ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿಯಾಗದಂತೆ ಎಚ್ಚರ ವಹಿಸಬೇಕು ಎಂದೂ ಜಿಲ್ಲಾಡಳಿತ ಸೂಚಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಧ್ವನಿವರ್ಧಕ ಬಳಕೆಯ ನೆಪ ಹೇಳಿ ರಾತ್ರಿ ವೇಳೆ ಕಂಬಳಕ್ಕೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಒತ್ತಾಯಿಸಿದರು. ರಾತ್ರಿ ವೇಳೆ ನಡೆಯುವ ಜಾತ್ರೆಗಳಿಗೂ ಅಡ್ಡಿಪಡಿಸಬಾರದು ಎಂದು ಶಾಸಕಿ ಭಾಗಿರಥಿ ಮುರುಳ್ಯ ಒತ್ತಾಯಿಸಿದರು. ಯಕ್ಷಗಾನಕ್ಕೆ ಅಡ್ಡಿಪಡಿಸಿ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟುಮಾಡಬೇಡಿ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಕೋರಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ ಜಿಲ್ಲಾಡಳಿತವು ಇಂತಹ ಯಾವುದೇ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು. ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಕಂಬಳ, ಯಕ್ಷಗಾನ ಆಯೋಜಿಸಿದರೆ, ಅನುಮತಿ ನೀಡಲು ಅಡ್ಡಿ ಇಲ್ಲ. ಸ್ಥಳೀಯರಿಂದ ದೂರು ಬಂದಾಗ ಮಾತ್ರ ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ. ತಿಳಿಸಿದರು.

[t4b-ticker]
error: Content is protected !!