ಪುತ್ತೂರು: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸಭಾಭವನವೇ ಮಹಾಲಿಂಗೇಶ್ವರನಿಗೆ ಬೇಡವಾಗಿದೆಯಾ? ದೇವರಿಗೆ ಆದಾಯ ತರಬೇಕಿದ್ದ ಕಟ್ಟಡವೇ ಈಗ ವಿಷವಾಗಿ ಪರಿಣಮಿಸಿದೆಯಾ? ಹೌದು, ಇಂತಹದ್ದೊಂದು ಸ್ಫೋಟಕ ದೈವವಾಣಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಹೊರಬಿದ್ದಿದೆ. ಸಭಾಭವನವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಆ ಜಾಗದಲ್ಲಿ ಮತ್ತೆ ಗದ್ದೆ ನಿರ್ಮಿಸಲೇಬೇಕು ಎಂದು ದೇವರ ಚಿತ್ತ ಸ್ಪಷ್ಟವಾಗಿ ವ್ಯಕ್ತವಾಗಿದೆ.
ದಶಕಗಳಿಂದ ಚರ್ಚೆಯಲ್ಲಿದ್ದ ಸಭಾಭವನ ತೆರವು ವಿವಾದಕ್ಕೆ ಮಂಗಳವಾರ ನಡೆದ ತಾಂಬೂಲ ಪ್ರಶ್ನಾ ಚಿಂತನೆ ಅಂತಿಮ ತೆರೆ ಎಳೆದಿದೆ. ದೈವಜ್ಞರಾದ ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಆರೋಢ ರಾಶಿ ‘ವೃಶ್ಚಿಕ’ ಹಾಗೂ ತಾಂಬೂಲ ಸಂಖ್ಯೆ 6 ಬಂದಿದ್ದು ಚಿಂತಿಸುವಾಗ ಷಡಾರೂಢಗಳಲ್ಲಿ 4 ಅನುಕೂಲ ಎರಡು ಪ್ರತಿಕೂಲ ಬಂದಿರುವುದಾಗಿ ದೈವಜ್ಞರು ತಿಳಿಸಿದರು.
ವೃಶ್ಚಿಕವು ಆರೂಢವಾಗಿ ಬಂದಿರುವುದರಿಂದ ಚೇಳಿನ ಸ್ವಭಾವ ಕಂಡು ಬರುತ್ತಿದ್ದು. ಸಭಾಭವನ ನಿರ್ಮಿಸಿದ ಉದ್ದೇಶ ಸಂಪೂರ್ಣವಾಗಿ ಫಲಿಸಿಲ್ಲ. ಅಲ್ಲದೇ ಸರ್ಪ ದೋಷ ಸಹಿತ ಹಲವು ದೋಷಗಳನ್ನು ಹೊಂದಿರುವ ಭೂಮಿಯಾಗಿದೆ. “ಸಭಾಭವನ ನಿರ್ಮಿಸಿದವರ ಉದ್ದೇಶ ಶುದ್ಧವಾಗಿತ್ತು. ಆದರೆ ದೇವರಿಗೆ ಅದು ಒಪ್ಪಿಗೆಯಾಗಿಲ್ಲ.
ಈ ಜಾಗಕ್ಕೂ ಈಶ್ವರನಿಗೂ ಅವಿನಾಭಾವ ಸಂಬಂಧವಿದೆ. ಅನಾದಿಯಲ್ಲಿ ಇದು ದೇವರಿಗೆ ಸಂಬಂಧಪಟ್ಟ ಭೂಮಿಯಾಗಿದ್ದು ದೇವಸ್ಥಾನಕ್ಕೆ ಸಂಬಂಧಪಟ್ಟಟ ಯಾವುದೋ ಒಂದು ಕ್ರಿಯೆ ನಡೆಯುತ್ತಿದ್ದದ್ದು ಗೋಚರವಾಗಿದೆ ಎಂದರು. ಹಿಂದೆ ಇಲ್ಲಿ ದೇವರ ಕದಿರು ಕಟ್ಟಲು ಬೇಕಾದ ತೆನೆ ಬೆಳೆಯುವ ಗದ್ದೆಯಿತ್ತು. ಆನೆಯ ಹೆಸರನ್ನು ನೆನಪಿಸುವ ಹೆಸರೂ ಈ ಭೂಮಿಗಿತ್ತು. ದೇವರಿಗೆ ಸಭಾಭವನ ಇಟ್ಟುಕೊಳ್ಳುವ ಮನಸ್ಸೇ ಇಲ್ಲ.” ಎಂದು ದೈವಜ್ಞರು ಸ್ಪಷ್ಟಪಡಿಸಿದರು.
“ಸಭಾಭವನದಿಂದ ದೇವರಿಗೆ ಬರುತ್ತಿರುವ ಸಂಪತ್ತು ವಿಷಾರ್ಜಿತವಾಗಿದೆ. ಇದರಿಂದ ಆಪತ್ತುಗಳು ಎದುರಾಗುತ್ತಿವೆ. ಇಲ್ಲಿ ಸಭಾಭವನವನ್ನು ನಿರ್ಮಾಣ ಮಾಡಿರುವುದರಿಂದ ದೇವ ಕೋಪ ಬಂದಿದೆ ” ಎಂಬ ಆಘಾತಕಾರಿ ಸತ್ಯವನ್ನು ದೈವಜ್ಞರು ಮುಂದಿಟ್ಟರು.
ಸ್ಮಶಾನದ ಜಿಜ್ಞಾಸೆಗೆ ಉತ್ತರ!
“ದೇಗುಲದ ಮುಂಭಾಗದಲ್ಲಿರುವ ಸ್ಮಶಾನವು ದೇವರ ದೃಷ್ಟಿಗೆ ಅಡ್ಡ ಬರುತ್ತದೆ ಎಂಬ ಕಾರಣಕ್ಕೆ ಇದನ್ನು ತೆಗೆಯಬೇಕೆಂಬ ಅಭಿಪ್ರಾಯ ಭಕ್ತರಲ್ಲಿ ಮೂಡಿದೆ. ಆದರೆ ದೇವರಿಗೆ ಅಡ್ಡ ಎನ್ನುವುದು ಯಾವುದಾದರೂ ಇದೆಯೇ? ಹಾಗೊಂದು ವೇಳೆ ಅಡ್ಡಿ ಆಗುವುದಿದ್ದರೆ, ದೇಗುಲದ ಎದುರಿಗಿರುವ ರಾಜ ಗೋಪುರವೇ ದೇವರ ದೃಷ್ಟಿಗೆ ಅಡ್ಡಿಯಲ್ಲವೇ? ಅಲ್ಲದೇ ಇಲ್ಲಿ ದೇವರ ದೃಷ್ಟಿ ರಥಬೀದಿಗಿದ್ದು, ಸ್ಮಶಾನ ಈಶಾನ್ಯ ಭಾಗದಲ್ಲಿದೆ. ಹೀಗಾಗಿ ಅದು ದೇವರ ದೃಷ್ಟಿಗೆ ಅಡ್ಡ ಎನ್ನುವುದು ತಪ್ಪು. ಕಾಶಿಯಲ್ಲೂ ಸ್ಮಶಾನ ಹಾಗೂ ದೇವರ ಮಧ್ಯೆ ಹಲವು ಕಟ್ಟಡಗಳಿವೆ; ಅದೇ ನಿಯಮ ಇಲ್ಲೂ ಅನ್ವಯಿಸಬೇಕು ಅಲ್ಲವೇ? ದೇಗುಲದ ಎದುರಿನಲ್ಲಿ ಸಾರ್ವಜನಿಕ ರಸ್ತೆ ಹಾಗೂ ನೀರಿನ ಹರಿವು ಇದ್ದಲ್ಲಿ ಅಲ್ಲಿಗೆ ದೇವಸ್ಥಾನದ ಪರಿಧಿ ಅಂತ್ಯವಾಗುತ್ತದೆ. ಹೀಗಾಗಿ ಇಲ್ಲಿ ಸಭಾಭವನ ದೇಗುಲದ ಪರಿಧಿಯಲ್ಲಿ ಬರುವುದಿಲ್ಲ.” ಎಂದು ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್.ಕೆ.ಜಗನ್ನಿವಾಸ್ ರಾವ್ ತಮ್ಮ ಜಿಜ್ಞಾಸೆಯನ್ನು ಮುಂದಿಟ್ಟರು.
ಇದಕ್ಕೆ ಉತ್ತರಿಸಿದ ದೈವಜ್ಞರು, “ದೇವಸ್ಥಾನದ ಪರಿಧಿ ಬೇರೆ, ದೇವರ ಪರಿಧಿ ಬೇರೆ. ದೇವರಿಗೆ ಪರಿಧಿಯಿಲ್ಲ! ಕಾಶಿಯ ನಿಯಮ ಇಲ್ಲಿಗೆ ಅನ್ವಯವಾಗದು. ಸಭಾಭವನ ದೇವರ ದೃಷ್ಟಿಗೆ ಅಡ್ಡಿ ಎನ್ನುವುದಕ್ಕಿಂತ, ಅದರಿಂದ ಬರುತ್ತಿರುವ ಆದಾಯವೇ ವಿಷವಾಗಿದೆ.” ಎಂದು ಸ್ಪಷ್ಟಪಡಿಸಿದರು.ಈ ವೇಳೆ ಮಾತನಾಡಿದ ಶಾಸಕ ಅಶೋಕ್ ರೈ ಅವರು, “ಸಭಾಭವನವನ್ನು ತೆಗೆಯಲೇಬೇಕೆಂಬ ಹಠ ನಮಗಿಲ್ಲ. ದೇವರಿಗೆ ಯಾವುದು ಹಿತವೋ ಅದನ್ನಷ್ಟೇ ನಾವು ಬಯಸುತ್ತೇವೆ. ಈ ಕುರಿತು ಈಗಾಗಲೇ ಹಲವು ಬಾರಿ ಪ್ರಶ್ನಾ ಚಿಂತನೆ ನಡೆದಿದೆ. ಹೀಗಾಗಿ ಈ ಬಾರಿ ಅಂತಿಮವಾಗಿ ಚಿಂತನೆ ನಡೆಸಲಾಗುತ್ತಿದೆ.ಸಭಾಭವನವನ್ನು ಹೀಗೆ ಉಳಿಸಿಕೊಳ್ಳಬೇಕೇ ಅಥವಾ ತೆಗೆಯಬೇಕೇ? ಇದರಲ್ಲಿ ದೇವರಿಗೆ ಯಾವುದು ಒಪ್ಪಿಗೆ ಎನ್ನುವ ಏಕೈಕ ಪ್ರಶ್ನೆ ನಮ್ಮ ಮುಂದಿದ್ದು, ಈ ಕುರಿತು ಸ್ಪಷ್ಟವಾಗಿ ತಿಳಿಸಬೇಕು,” ಎಂದರು. ಇವರ ಮಾತಿಗೆ ದನಿಗೂಡಿಸಿದ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆಯವರು, “ಅದರ ಜೊತೆಗೆ ಸಭಾಭವನವನ್ನು ತೆರವುಗೊಳಿಸಿದರೆ, ಮುಂದೆ ಏನಾದರೂ ಸಮಸ್ಯೆಯಾಗುತ್ತದೆಯೇ ಎಂದು ಪರಾಮರ್ಶಿಸಿ ತಿಳಿಸಬೇಕು.” ಎಂದು ವಿನಂತಿಸಿದರು.
‘ಕಾಂಪ್ರಮೈಸ್’ಗೆ ಒಪ್ಪದ ದೇವರು!
ಸಭಾಭವನವನ್ನು ತೆಗೆದು ಅಲ್ಲಿ ಗದ್ದೆ ಮಾಡಬೇಕು ಎಂದು ದೈವಜ್ಞರು ತಿಳಿಸಿದಾಗ, ಶಾಸಕ ಅಶೋಕ್ ರೈಯವರು, “ಮಾಸ್ಟರ್ ಪ್ಲಾನ್‌ನಲ್ಲಿ ದೇವರಮಾರು ಗದ್ದೆಯ ಕೊನೆಯಲ್ಲಿ ಗದ್ದೆಗೆ ಸ್ವಲ್ಪ ಜಾಗ ಇಟ್ಟಿದ್ದು. ಅಲ್ಲಿ ಗದ್ದೆ ಮಾಡುತ್ತೇವೆ. ಎಂದರು. ಇದಕ್ಕೆ ದೈವಜ್ಞರು ಅಸಮ್ಮತಿ ಸೂಚಿಸಿದರು. ಬಳಿಕ ಸಭಾಭವನದ ಒಂದು ಭಾಗದಲ್ಲಿ ಗದ್ದೆ ಮಾಡಿ. ಉಳಿದ ಜಾಗವನ್ನು ಅಭಿವೃದ್ಧಿಪಡಿಸಬಹುದೇ?” ಎಂದು ಮರುಪ್ರಶ್ನಿಸಿದರು. ಆದರೆ, ಈ ಪ್ರಸ್ತಾಪಕ್ಕೆ ನಿವೃತ್ತಿ ರಾಶಿ ಬರಲಿಲ್ಲ (ಒಪ್ಪಿಗೆ ಸಿಗಲಿಲ್ಲ).ಕೊನೆಗೆ, “ಸಭಾಭವನದ ಸಂಪೂರ್ಣ ಜಾಗವನ್ನು ಗದ್ದೆಯನ್ನಾಗಿ ಮಾಡುತ್ತೇವೆ” ಎಂದು ಸಂಕಲ್ಪ ಮಾಡಿದಾಗ ‘ಮೇಷ ರಾಶಿ’ ಬಂದಿದ್ದು. ಇದಕ್ಕೆ ದೇವರ ಪೂರ್ಣ ಒಪ್ಪಿಗೆ ಇದೆ ಎಂಬುದು ಖಚಿತವಾಯಿತು. “ಈ ಜಾಗದಲ್ಲಿ ತೆನೆ ಬೆಳೆದರೆ, ಅದು ಈಶ್ವರ ದೇವರಿಗೆ ಚಿನ್ನಕ್ಕೆ ಸಮಾನ. ಹೀಗಾಗಿ ಇಲ್ಲಿ ಗದ್ದೆ ನಿರ್ಮಿಸಿ ಹೊಸ ತೆನೆಯನ್ನು ದೇವರಿಗೆ ಅರ್ಪಿಸಬೇಕು,” ಎಂಬ ದೈವವಾಣಿ ಭಕ್ತರಲ್ಲಿ ರೋಮಾಂಚನ ಮೂಡಿಸಿತು.
ಆರೂಢದ ಚತುರ್ಥದಲ್ಲಿ ರಾಹು ಮತ್ತು ಮಾಂದಿ ಇರುವುದರಿಂದ ನಾಗನ ಸನ್ನಿದಾನಕ್ಕೆ ಬಹಳ ಮೈಲಿಗೆಯಾಗಿದ್ದು, ಅದು ಅಲ್ಲಿ ಇರುವುದು ದೋಷಪ್ರದವಾಗಿದೆ ಎಂದು ದೈವಜ್ಞರು ತಿಳಿಸಿದರು.. ನಾಗನ ಗುಡಿಯನ್ನು ಮೂಲ ನಾಗನ ಸನ್ನಿಧಿಯಲ್ಲಿ. ಅಯ್ಯಪ್ಪನ ಗುಡಿಯನ್ನು ಉದ್ದೇಶಿತ ಜಾಗದಲ್ಲಿ ಹಾಗೂ ನವಗ್ರಹ ಗುಡಿಯನ್ನು ದೇಗುಲದ ಒಳಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ದೇವಸ್ಥಾನಕ್ಕೆ ಸೇರಿದ್ದ 1.5 ಎಕರೆ ಖಾಸಗಿ ಜಾಗವನ್ನು ಮರಳಿ ಖರೀದಿಸಲು ಕೂಡ ದೇವರ ಅಪ್ಪಣೆ ಸಿಕ್ಕಿದೆ.ಒಟ್ಟಿನಲ್ಲಿ. ಹಲವು ವರ್ಷಗಳ ಜಿಜ್ಞಾಸೆ, ಚರ್ಚೆಗಳಿಗೆ ತಾಂಬೂಲ ಪ್ರಶ್ನೆಯ ಮೂಲಕ ತೆರೆ ಬಿದ್ದಿದೆ. ಭಕ್ತರ ನಂಬಿಕೆ ಮತ್ತು ದೈವದ ಇಚ್ಛೆಯಂತೆ, ಭವ್ಯ ಸಭಾಭವನ ತೆರವಾಗಿ, ಅದರ ಜಾಗದಲ್ಲಿ ಹಸಿರು ತೆನೆ ಬೆಳೆಯುವ ದಿನಗಳು ದೂರವಿಲ್ಲ ಎಂಬ ಅಭಿಪ್ರಾಯವನ್ನು ಭಕ್ತರು ವ್ಯಕ್ತಪಡಿಸಿದರು . ಸರ್ಕಾರದ ಅನುಮತಿ ಪಡೆದು ಈ ಬೃಹತ್ ಕಾರ್ಯಕ್ಕೆ ಆಡಳಿತ ಮಂಡಳಿ ಸಜ್ಜಾಗಬೇಕಿದೆ.
ಅರ್ಚಕ ವಸಂತ ಕೆದಿಲಾಯ. ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಕುಮಾರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ. ದಿನೇಶ್ ಪಿ.ವಿ. ಕುಲಾಲ್, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ. ಎನ್. ಕೆ. ಜಗನ್ನಿವಾಸ ರಾವ್, ಕೇಶವ ಪ್ರಸಾದ್ ಮುಳಿಯ ಮತ್ತಿತರರು ಉಪಸ್ಥಿತರಿದ್ದರು.











































