ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಬೆನ್ನಲ್ಲೇ ರಾಜ್ಯ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸ್ಥಾಪಿಸಲಾಗುತ್ತಿರುವ ‘ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್’ಗೆ ನವೆಂಬರ್ 28ರಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ತಿಳಿಸಿದ್ದಾರೆ.
ತುಮಕೂರು ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಬೆನ್ನಲ್ಲೇ ರಾಜ್ಯ ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸ್ಥಾಪಿಸಲಾಗುತ್ತಿರುವ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್’ಗೆ ನವೆಂಬರ್ 28ರಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಹಿಂದೆ ಎಸ್.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಸ್ತ್ರೀ ಶಕ್ತಿ ಸಂಘಗಳು ಮಹಿಳೆಯರಿಗೆ ಶಕ್ತಿ ತುಂಬಿದ್ದವು. ಇದೀಗ ಮಹಿಳೆಯರು ಕೇವಲ ಗೃಹಿಣಿಯರಾಗಿ ಉಳಿಯದೆ ಉದ್ಯಮಿಗಳಾಗುತ್ತಿದ್ದಾರೆ. ಖಾಸಗಿ ಫೈನಾನ್ಸ್ ಕಂಪನಿಗಳ ಬಡ್ಡಿ ಕಾಟ ತಪ್ಪಿಸಲು ಮತ್ತು ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ.” ಎಂದು ಹೇಳಿದರು.
ಸಾಲ ಪಡೆಯಲು ನಿಯಮಗಳೇನು?
ಗೃಹಲಕ್ಷ್ಮಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆಯಲು ಇಲಾಖೆಯು ಕೆಲವೊಂದು ಮಾನದಂಡಗಳನ್ನುನಿಗದಿಪಡಿಸಿದೆ:
*ಸದಸ್ಯತ್ವ: ಬ್ಯಾಂಕ್‌ಗೆ ಸೇರಬಯಸುವ ಮಹಿಳೆಯರು 1,000 ರೂ. ಪಾವತಿಸಿ ಷೇರುದಾರರಾಗಬೇಕು (Shareholders).
* ಮಾಸಿಕ ಉಳಿತಾಯ: ಷೇರುದಾರರಾದ ಬಳಿಕ ಪ್ರತಿ ತಿಂಗಳು ಕನಿಷ್ಠ 200 ರೂ. ಪಾವತಿಸಬೇಕು.
* ಸಾಲದ ಅರ್ಹತೆ: ಸದಸ್ಯತ್ವ ಪಡೆದು 6 ತಿಂಗಳು ಪೂರೈಸಿದ ನಂತರ ಸಾಲ ಪಡೆಯಲು ಅರ್ಹರಾಗುತ್ತಾರೆ.
*ಸಾಲದ ಮೊತ್ತ: ಕನಿಷ್ಠ 30 ಸಾವಿರದಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದೆ.
*ವೈಯಕ್ತಿಕ ಸಾಲ: ಇಲ್ಲಿ ಸಂಘ ಅಥವಾ ಗುಂಪುಗಳಿಗೆ ಸಾಲ ನೀಡುವುದಿಲ್ಲ. ಬದಲಾಗಿ ವೈಯಕ್ತಿಕ ಸಾಲವನ್ನು ಮಾತ್ರ ನೀಡಲಾಗುತ್ತದೆ.
*ಬಡ್ಡಿದರ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಬಡ್ಡಿದರವೇ ಇಲ್ಲಿಯೂ ಅನ್ವಯವಾಗಲಿದೆ. ವ್ಯವಹಾರ ಸಂಪೂರ್ಣ ನಗದು ರಹಿತವಾಗಿರುತ್ತದೆ (Cashless).
ಸರ್ಕಾರ ಬದಲಾದರೂ ಬ್ಯಾಂಕ್ ಶಾಶ್ವತ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, “ಮುಂದೆ ಯಾವುದೇ ಸರ್ಕಾರ ಬಂದರೂ ಗೃಹಲಕ್ಷ್ಮಿ ಬ್ಯಾಂಕ್ ಮುಚ್ಚುವುದಿಲ್ಲ. ಇದು ನಿರಂತರ ಪ್ರಕ್ರಿಯೆ. ಕೃಷಿ, ಹೈನುಗಾರಿಕೆ, ವಾಹನ ಖರೀದಿ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಅಗತ್ಯಗಳಿಗೆ ಮಹಿಳೆಯರು ಇಲ್ಲಿ ಸಾಲ ಪಡೆಯಬಹುದು,” ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ
ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ಶುಭಸುದ್ದಿ ನೀಡಿದ ಸಚಿವರು, “ಈಗಾಗಲೇ ಗೌರವ ಧನ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 1,000 ರೂ. ಗೌರವ ಧನ ಹೆಚ್ಚಳ ಮಾಡಲಾಗುವುದು,” ಎಂದರು.
ನ.28ಕ್ಕೆ ಐಸಿಡಿಎಸ್ ಸುವರ್ಣ ಮಹೋತ್ಸವ
ಬೆಂಗಳೂರಿನಲ್ಲಿ ನವೆಂಬರ್ 28ರಂದು ಐಸಿಡಿಎಸ್ ಸುವರ್ಣ ಮಹೋತ್ಸವ, ‘ಅಕ್ಕ ಪಡೆ’ ಲೋಕಾರ್ಪಣೆ ಹಾಗೂ ‘ಗೃಹಲಕ್ಷ್ಮಿ ಬ್ಯಾಂಕ್’ ಉದ್ಘಾಟನೆ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.











































