ಜಾಲಿ, ನ.14: ಸ್ವಾಮಿ ವಿವೇಕಾನಂದ ಜನಸ್ಪಂದನ ಸಭೆ ಜಾಲಿ ಇವರ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಎರಡನೇ ವರ್ಷದ ಆಟೋಟ ಸ್ಪರ್ಧೆಗಳ ಕಾರ್ಯಕ್ರಮ ‘ಸ್ಪರ್ಧಾ ಸಂಭ್ರಮ’ ಭಾನುವಾರ ಭವ್ಯವಾಗಿ ಏರ್ಪಡಿಸಲಾಯಿತು.ಕಾರ್ಯಕ್ರಮವನ್ನು ಜಾಲಿ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀ ನಾಗರಾಜ್ ಎಂ. ನಾಯ್ಕ್ ಉದ್ಘಾಟಿಸಿದರು.
ಅವರು ಮಾತನಾಡಿ, “ಸ್ವಾಮಿ ವಿವೇಕಾನಂದ ಫೌಂಡೇಶನ್ ಸ್ಥಾಪನೆಯಾದೊಂದೇ ವರ್ಷದಲ್ಲಿ ಗ್ರಾಮ ಇತಿಹಾಸದಲ್ಲಿ ಯಾರೂ ಮಾಡದ ಉತ್ತಮ ಸಾಮಾಜಿಕ ಸೇವೆಗಳನ್ನು ಮಾಡಿದೆ. ಬಡವ ಮತ್ತು ಹಿಂದುಳಿದ ಕುಟುಂಬಗಳ ಸಮಸ್ಯೆಗೆ ಸ್ಪಂದಿಸುವ ಕಾರ್ಯದಲ್ಲಿ ನಾವು ಸದಾ ಫೌಂಡೇಶನ್ ಜೊತೆ ನಿಲ್ಲುತ್ತೇವೆ,” ಎಂದು ತಿಳಿಸಿದ್ದಾರೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಕ್ಷಕಿ ಶ್ರೀಮತಿ ಮಹಾಲಕ್ಷ್ಮಿ ಡಿ. ಗೊಂಡ ಉಪಸ್ಥಿತರಿದ್ದು, “ಜನಸ್ಪಂದನ ಫೌಂಡೇಶನ್ ಗ್ರಾಮದಲ್ಲಿ ಒಳ್ಳೆಯ ಸಾಧನೆ ಮಾಡಿದವರನ್ನು ಗುರುತಿಸಿ ವೇದಿಕೆಗೆ ತರುವ ಮಹತ್ತರ ಕೆಲಸ ಮಾಡುತ್ತಿದೆ.
ಜನರ ಕಷ್ಟಕ್ಕೆ ನೆರವಾಗಿ, ಸಮಾಜಮುಖಿ ಚಟುವಟಿಕೆ ನಡೆಸುತ್ತಿದೆ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕ್ರೀಡಾಂಗಣದ ಉದ್ಘಾಟನೆಯನ್ನು ದೈಹಿಕ ಶಿಕ್ಷಕರಾದ ಶ್ರೀ ಪುರಂದರ ಖಾರ್ವಿ ನೆರವೇರಿಸಿದರು. ಶ್ರೀ ಸಂಕೇತ್ ಆಚಾರ್ಯರು ಸಹ ಅತಿಥಿಗಳಾಗಿ ಭಾಗವಹಿಸಿದರು.ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಶ್ರೀ ವಸಂತ್ ನಾಯ್ಕ್ ಮಾತನಾಡಿ ಮಕ್ಕಳಲ್ಲಿ ಕ್ರೀಡಾತ್ಮಕ ಮನೋಭಾವ ಬೆಳೆಸುವುದೇ ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು.ಮಾದೇವ ಗೊಂಡ, ಸೋಮಕುಮಾರ್ ನಾಯ್ಕ್, ಅರುಣ್ ನಾಯ್ಕ್ ಮುಂತಾದ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ಮಾರುತಿ ನಾಯ್ಕ್ ಜಾಲಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಮಕ್ಕಳಿಗೆ ಅವರ ಪರಿಸರ ಸೇವೆಯ ಕೊಡುಗೆಯನ್ನು ಪರಿಚಯಿಸಲಾಯಿತು.ಕಾರ್ಯಕ್ರಮದಲ್ಲಿ ಕಪ್ಪೆ ಊಟ, ಸಂಗೀತ ಕುರ್ಚಿ, ಸಂಗೀತ ಬಾಲ್, ಭಾಷಣ, ನಿಬಂಧ ಮೊದಲಾದ ವಿವಿಧ ಆಟೋಟ ಸ್ಪರ್ಧೆಗಳು ನಡೆದಿದ್ದು, ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.











































