ಕಂಬಳ ನಿರ್ಬಂಧಕ್ಕೆ ಹೈಕೋರ್ಟ್ ನಕಾರ

Picture of Savistara

Savistara

Bureau Report

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಕಂಬಳವನ್ನು ಸೀಮಿತಗೊಳಿಸಿ ರಾಜ್ಯದ ಇತರ ಸ್ಥಳಗಳಲ್ಲಿ ನಿರ್ಬಂಧಿಸಬೇಕು ಎಂದು ಕೋರಿ ಪೆಟಾ ಸಲ್ಲಿಸಿದ್ದ ಮನವಿ ಪುರಸ್ಕರಿಸಲು ಹೈಕೋರ್ಟ್ ನಿರಾಕರಿಸಿದೆ. ಪೆಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರವು ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತಂದು ಕಂಬಳ ಮತ್ತು ಎತ್ತಿನಬಂಡಿ ಓಟಕ್ಕೆ ವಿನಾಯಿತಿ ನೀಡಿರುವುದರಿಂದ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಕಂಬಳ ಮತ್ತು ಎತ್ತಿನ ಬಂಡಿ ಓಟದ ಸಾಂಪ್ರದಾಯಿಕ ಮಹತ್ವವನ್ನು ಪರಿಗಣಿಸಿ ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆಗೆ ಎರಡನೇ ತಿದ್ದುಪಡಿ ತರಲಾಗಿದೆ. ರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿ ಸಂರಕ್ಷಿಸಿ ಉತ್ತೇಜಿಸುವ ಉದ್ದೇಶದಿಂದ ಕಂಬಳ ಆಯೋಜನೆಗೆ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಪಿಲಿಕುಳ ಮಾಸ್ಟರ್‌ಪ್ಲಾನ್ ಸಲ್ಲಿಸಿ: ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಂಬಳಆಯೋಜಿಸುವುದರಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಮತ್ತು ಅದು ವನ್ಯಜೀವಿ ರಕ್ಷಣೆ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದೂ ಪೆಟಾ ಅರ್ಜಿಯಲ್ಲಿ ವಾದಿಸಿತ್ತು. ಪಿಲಿಕುಳ ಜೈವಿಕ ಉದ್ಯಾನ 80 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಕಂಬಳ ಆಯೋಜಿಸುವ ಸ್ಥಳವು ಆ 80 ಹೆಕ್ಟೇರ್ ವ್ಯಾಪ್ತಿಯಲ್ಲಿದೆಯೇ ಎಂಬುದು ವಿವಾದವಾಗಿದೆ. ನಿಯಮಗಳ ಪ್ರಕಾರ ಮೃಗಾಲಯಗಳು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಮಾಸ್ಟ‌ರ್ ಪ್ಲಾನ್ ಹೊಂದಿರಬೇಕು. ಆದ್ದರಿಂದ ಪಿಲಿಕುಳದ ಮಾಸ್ಟ‌ರ್ ಪ್ಲಾನ್ ಕೇಂದ್ರ ಮೃಗಾಲಯ ಪ್ರಾಧಿಕಾರದಲ್ಲಿ ಲಭ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟ ಪೀಠ, ಮಾಸ್ಟರ್‌ಪ್ಲಾನ್ ಅನುಮೋದಿಸಿರುವ ಪ್ರಮಾಣಪತ್ರ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಡಿ.17ಕ್ಕೆ ನಿಗದಿಯಾಗಿದೆ.

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!