ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಹಿಂದೂ ವಿರೋಧಿ ನೀತಿ ಮತ್ತೆ ಮುಂದುವರಿದಿದೆ. ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಮೂಲಕ ಸರ್ಕಾರ ತುಘಲಕ್ ಶಾಹಿ ಆಡಳಿತವೆಂಬುದನ್ನು ಸಾಬೀತುಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಕೇವು ಉಳ್ಳಾಲ್ತಿ ಕ್ಷೇತ್ರದಲ್ಲಿ 300 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೋಳಿ ಅಂಕದಲ್ಲಿ ಜೂಜು, ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಲ್ಲಿ ಪೊಲೀಸರು ದಾಳಿ ನಡೆಸಿ ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡಿದ್ದಾರೆ. ಆದರೆ ಇಲ್ಲಿ ಸಂಪ್ರದಾಯ ಪ್ರಕಾರವಾಗಿ ಕೋಳಿ ಅಂಕ ನಡೆಯುತ್ತಾ ಬಂದಿದೆ. ಜೂಜಾಟವಲ್ಲ. ಸರ್ಕಾರ ಜನಪದ ಸಂಸ್ಕೃತಿಯ ಭಾಗವಾಗಿರುವ ಕೋಳಿ ಅಂಕವನ್ನು ನಿಲ್ಲಿಸುವ ಪ್ರಯತ್ನ ಮಾಡಿರುವುದು ಖಂಡನೀಯ. ಇದರ ವಿರುದ್ಧ ಕಾನೂನಾತ್ಮಕವಾಗಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಉಸ್ತುವಾರಿ ಸಚಿವರ ಹೇಳಿಕೆಗೆ ಬೆಲೆ ಇಲ್ಲವೇ?
ಧಾರ್ಮಿಕ ನಂಬಿಕೆಗಳಿಗೆ ತೊಂದರೆಯಾಗುವ ಯಾವುದೇ ಕೃತ್ಯ ನಡೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಹೇಳಿಕೆ ನೀಡಿದ ಹೊರತಾಗಿಯೂ ಇಂತಹ ಕೃತ್ಯಗಳು ನಡೆಯುತ್ತಿವೆ. ಇನ್ನಾದರೂ ಇಂತಹ ದಮನ ಪ್ರಕ್ರಿಯೆಗಳ ಬಗ್ಗೆ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿ ಗಣಿಸಬೇಕು. ಇನ್ನು ಅಲ್ಲಲ್ಲಿ ಜಾತ್ರಾಮಹೋತ್ಸವ, ಕೋಲ, ನೇಮಕ ನಡೆಯಲಿದ್ದು, ಇಂತಹ ಕುಂಟು ನೆಪವೊಡ್ಡಿ ಹಿಂದೂ ನಂಬಿಕೆಗೆ ಘಾಸಿಗೊಳಿಸಿದರೆ, ಸುಮ್ಮನಿರುವುದಿಲ್ಲ. ಕೋಳಿ ಅಂಕ ಪ್ರಕರಣದ ಕುರಿತಂತೆಯೂ ಕಾನೂನಿನ ಮೂಲಕ ಸಂಬಂಧ ಪಟ್ಟವರ ಗಮನಕ್ಕೆ ತರಲಾಗುವುದು ಎಂದರು.
ಕುರಿ, ಕೋಳಿ ಬಲಿ ತಡೆಯಲಿ
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಕೇವು ಕ್ಷೇತ್ರದಲ್ಲಿ ಜೂಜಿನ ವ್ಯವಸ್ಥೆ ಇಲ್ಲ. ಇಷ್ಟು ವರ್ಷಗಳಿಂದ ಅಲ್ಲಿ ನಡೆಯುತ್ತಿದ್ದ ಕೋಳಿ ಅಂಕವನ್ನು ಈ ವರ್ಷ ಹಠಾತ್ತಾಗಿ ತಡೆಯಲು ಪ್ರಯತ್ನಿಸಿರುವುದಲ್ಲದೆ, ಪಕ್ಷದ ಜಿಲ್ಲಾಧ್ಯಕ್ಷರ ಮೇಲೂ ಪ್ರಾಣಿ ಹಿಂಸೆ ಪ್ರಕರಣ ದಾಖಲಾಗಿದೆ ಎಂದರು.
ಧಾರ್ಮಿಕ ಭಾವನೆಗಳಿಗೆ ಹೊದೆತ
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಾವೂ ಈ ಹಿಂದೆ ಮೂರು ವರ್ಷ ಸರಕಾರ ನಡೆಸಿದ್ದೇವೆ. ನಮ್ಮ ಅವಧಿಯಲ್ಲಿ ಒಂದೇ ಒಂದು ಇಂತಹ ಘಟನೆ ನಡೆದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಿಗಳನ್ನು ಸೇರಿಸಿ ಇಂತಹ ತಪ್ಪುಗಳನ್ನು ಸಂಪಡಿಸಲು ಆಗುವುದಿಲ್ಲ ಎಂದಾದರೆ ಇದು ಕೇವಲ ನಮ್ಮಧಾರ್ಮಿಕ ಭಾವನೆಗಳಿಗೆ ಹೊಡೆತ ನೀಡುವ ವಿಚಾರ. ಕೋಳಿ ಅಂಕಕ್ಕೆ ಸಾವಿರಾರು ಜನ ಹೋಗುತ್ತಾರೆ. ಅವೆರಲ್ಲರ ಮೇಲೆ ಪ್ರಕರಣ ದಾಖಲಿ ಸುತ್ತಾರೆಯೇ ಅವರು ಎಂದು ಪ್ರಶ್ನಿಸಿದರು.ಮಂಗಳೂರಿನಲ್ಲಿ 50ಕ್ಕೂ ಅಧಿಕ ಪ್ರಾಣಿ ವಧಾ ಕೇಂದ್ರಗಳಿವೆ. ಅಲ್ಲಿ ಯಾವ ಎಫ್‌ಐಆರ್ ಯಾಕೆ ದಾಖಲಿಸುವುದಿಲ್ಲ ಎಂದು ಅವರು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ ಶೇಟ್, ಯತೀಶ್ ಆರ್ವರ್, ಜಗದೀಶ್ ಆಕ್ಷಉಪಸ್ಥಿತರಿದ್ದರು.













































