ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಅನೇಕ ಯುವಕರು ಕೆಲಸ ಸಿಗುತ್ತಿಲ್ಲ ಎಂದು ಗೋಳಾಡುತ್ತಾರೆ. ಇತರರನ್ನು ದೂರುತ್ತಾರೆ. ಕೆಲವರು ಸೋಮಾರಿಯಾಗಿ ಪೋಷಕರ ನೆರವಿನಿಂದಲೇ ಬದುಕು ಕಟ್ಟಿಕೊಳ್ಳುತ್ತಾರೆ. ಆದರೆ, ದೇಹದ ಅರ್ಧಭಾಗ ಅಂಗವೈಕಲ್ಯದಿಂದ ಕೂಡಿದ್ದರೂ, ಸ್ವಂತ ಉದ್ಯಮ ಕಟ್ಟಿ ಭಾರತೀಯರ ಮನಗೆದ್ದ ಬಡ ಹುಡುಗನ ಕಥೆ ನಿಜಕ್ಕೂ ರೋಚಕವಾಗಿದೆ.
ಕೋಲ್ಕತ್ತದ ಕುಟುಂಬವೊಂದರಲ್ಲಿ ರಾಮ್ ಚಂದ್ರ ಅಗರ್ವಾಲ್ ಅವರು 1965 ರಲ್ಲಿ ಜನಿಸುತ್ತಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು 4ನೇ ವಯಸ್ಸಿನಲ್ಲಿದ್ದಾಗ ಪೊಲಿಯೊಗೆ ಗುರಿಯಾಗಿ ಸೊಂಟದ ಕೆಳಗಿನ ಭಾಗ ಅಂಗವೈಕಲ್ಯಕ್ಕೆ ತುತ್ತಾಯಿತು. ದೈಹಿಕವಾಗಿ ಅಂಗವೈಕಲ್ಯತೆ ಇದ್ದರೂ ರಾಮ್ ಮಾನಸಿಕವಾಗಿ ಸದೃಢವಾಗಿದ್ದರು. ಇವರ ಈ ಆತ್ಮಸ್ಥರ್ಯದಿಂದಲೇ ಹುಟ್ಟಿಕೊಂಡಿದ್ದು ‘ವಿಶಾಲ್ ಮೆಗಾ ಮಾರ್ಟ್’.
ಯಾರ ಹೆಗಲಿಗೂ ನಾನು ಭಾರವಾಗಬಾರದು ಎಂದು ನಿರ್ಧರಿಸಿದ್ದ ಅವರು, ಕುಟುಂಬದ ಬೆಂಬಲದೊಂದಿಗೆ, ಉನ್ನತ ಶಿಕ್ಷಣ ಪಡೆದುಕೊಂಡರು. ಬಳಿಕ ಪೋಷಕರ ಸಹಾಯದಿಂದ ಸಣ್ಣದೊಂದು ಜೆರಾಕ್ಸ್ ಅಂಗಡಿ ಇಟ್ಟುಕೊಂಡು ಸ್ವಾವಲಂಬಿಯಾಗಿ ದುಡಿಯಲು ಆರಂಭಿಸಿದರು.
ಜೆರಾಕ್ಸ್ ಅಂಗಡಿಯಿಂದ ಉಡುಪು ವ್ಯವಹಾರದವರೆಗೆ….
ಅಲ್ಪ ಮೊತ್ತದ ಹೂಡಿಕೆಯೊಂದಿಗೆ ಆರಂಭವಾದ ಜೆರಾಕ್ಸ್ ಅಂಗಡಿಯಿಂದ ಪುಡಿಗಾಸು ಮಾತ್ರ ಸಿಗುತ್ತಿತ್ತು. ಕೆಲದಿನಗಳಲ್ಲಿಯೇ ಜೆರಾಕ್ಸ್ ಅಂಗಡಿಯ ಬದಲು ಬೇರೆ ಏನಾದರೂ ಮಾಡಬೇಕೆಂದು ಯೋಚಿಸಿದ ರಾಮ್‌ಗೆ ಸ್ವಂತ ಉದ್ಯಮ ಕಟ್ಟುವುದೇ ಸರಿ ಎನಿಸಿತು.ತಡ ಮಾಡದ ರಾಮ್ ಶೀಘ್ರವೇ ಕೋಲ್ಕತ್ತದಲ್ಲಿ ಸಣ್ಣ ಬಟ್ಟೆಯ ಅಂಗಡಿಯೊಂದನ್ನು ತೆರೆದರು. ಕಠಿಣ ಪರಿಶ್ರಮದಿಂದ ನಿರಂತರವಾಗಿ ಕೆಲಸ ಮಾಡುತ್ತ ತಾವಾಗಿಯೇ ಹೊಸ ಆಲೋಚನೆಗಳನ್ನು ಮಾಡ ತೊಡಗಿದರು. ಭಾರತೀಯರ ಫ್ಯಾಷನ್ ಅಭಿರುಚಿಯನ್ನು ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಉಡುಪುಗಳನ್ನು ತಯಾರಿಸಲು ಯೋಚಿಸಿದರು.
ವಿಶಾಲ್ ಮೆಗಾ ಮಾರ್ಟ್‌ನ ಜನನ
ಭಾರತೀಯರ ಫ್ಯಾಷನ್ ಮತ್ತು ಗ್ರಾಹಕರ ಮನಸ್ಥಿತಿಯನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡ ರಾಮ್ ತಡ ಮಾಡದೆ 2000ನೇ ಇಸವಿಯಲ್ಲಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಗೊಂಡರು. ಕೋಲ್ಕತ್ತದಲ್ಲಿ ದೇಶದ ಮೊದಲ ವಿಶಾಲ್ ಮೆಗಾ ಮಾರ್ಟ್ ಅಂಗಡಿಯನ್ನು ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ ಮಧ್ಯಮ ವರ್ಗದ ಜನರನ್ನು ಯಶಸ್ವಿಯಾಗಿ ಆಕರ್ಷಿಸಿದರು.ಗ್ರಾಹಕರಿಗೆ ಬೇಕಾದಂತಹ ರೀತಿಯಲ್ಲಿ ಬೆಲೆ ಮತ್ತು ಗುಣಮಟ್ಟವನ್ನು ನೀಡಿದರು. ಇದರ ಪರಿಣಾಮ ಶೀಘ್ರದಲ್ಲೇ ಮಧ್ಯಮ ವರ್ಗದ ಕುಟುಂಬಗಳು ಅಗತ್ಯ ವಸ್ತುಗಳು, ಉಡುಪುಗಳು ಮತ್ತು ದಿನಸಿ ವಸ್ತುಗಳನ್ನು ಗ್ರಾಹಕ ಸ್ನೇಹಿ ದರದಲ್ಲಿ ಕೊಂಡುಕೊಳ್ಳುವ ಸ್ಥಳವಾಗಿ ವಿಶಾಲ್ ಮೆಗಾ ಮಾರ್ಟ್ ಗುರುತಿಸಿಕೊಂಡಿತು. ಹೀಗೆ ಆರಂಭವಾದ ವಿಶಾಲ್ ಮಾರ್ಟ್ ನೋಡ ನೋಡುತ್ತಿದ್ದಂತೆ, ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ತನ್ನ ಮಾರ್ಟ್‌ಗಳನ್ನು ತೆರೆಯಿತು.
ಈ ಉದ್ಯಮವನ್ನು ಇನ್ನಷ್ಟು ಪ್ರವರ್ಧಮಾನಕ್ಕೆ ತರುವ ಉದ್ದೇಶದಿಂದ ರಾಮ್ ಸಾಲ ಪಡೆದರು. ಆದರೆ ದುರದೃಷ್ಟವಶಾತ್, 2008-09 ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಇದರ ಪರಿಣಾಮ ಆದಾಯಕ್ಕಿಂತ ನಷ್ಟವೇ ಹೆಚ್ಚಾಗುತ್ತಾ ಹೋಯಿತು. ಇದೆಲ್ಲದರ ನಡುವೆ ಕಠಿಣ ನಿರ್ಧಾರ ತೆಗೆದುಕೊಂಡ ರಾಮ್, 2011ರಲ್ಲಿ ಎರಡು ಸಾವಿರ ಕೋಟಿ ಮೌಲ್ಯ ವಿಶಾಲ್ ಮೆಗಾ ಮಾರ್ಟ್ ಉದ್ಯಮವನ್ನು ಶ್ರೀರಾಮ್ ಗ್ರೂಪ್ ಮತ್ತು ಖಾಸಗಿ ಇಕ್ವಿಟಿ ಕಂಪನಿಗಳಿಗೆ ₹70 ಕೋಟಿಗೆ ಮಾರಾಟ ಮಾಡಿದರು.
ಮತ್ತೆ ಹೊಸ ಉದ್ಯಮ ಆರಂಭಿಸಿದ ರಾಮ್
ವಿಶಾಲ್ ಮೆಗಾ ಮಾರ್ಟ್ ಅನ್ನು ಮಾರಾಟ ಮಾಡಿದ ಬಳಿಕ ಮತ್ತೊಂದು ಹೊಸ ಉದ್ಯಮದತ್ತ ಯೋಚಿಸಿದರು. ಶೀರ್ಘದಲ್ಲಿಯೇ ವಿ2 ರಿಟೇಲ್ ಲಿಮಿಟೆಡ್ ಎಂಬ ಹೊಸ ಉದ್ಯಮವನ್ನು ಆರಂಭಿಸಿದರು. ಈ ಉದ್ಯಮ ಕೂಡ ನೋಡ ನೋಡುತ್ತಿದ್ದಂತೆ ಗ್ರಾಹಕರಿಗೆ ಅಚ್ಚುಮೆಚ್ಚಿನ ದಿನಬಳಕೆ ವಸ್ತುಗಳನ್ನು ಕೊಂಡುಕೊಳ್ಳುವ ಅಂಗಡಿಯಾಯಿತು.47ಭಾರತದಲ್ಲಿ 150ಕ್ಕೂ ಹೆಚ್ಚು ಅಂಗಡಿಗಳನ್ನು ಸ್ಥಾಪಿಸಲಾಯಿತು. ಕೆಲವೇ ವರ್ಷಗಳಲ್ಲಿ ಉದ್ಯಮದ ವಹಿವಾಟು ₹100 ಕೋಟಿ ದಾಟಿತು. ಇಂದು ಅವರ ವಹಿವಾಟು ₹6,500 ಕೋಟಿಗೂ ಹೆಚ್ಚಿದೆ ಎಂದು ವರದಿಯಾಗಿದೆ. ಈ ಎಲ್ಲದರ ನಡುವೆ ವಿವಾಹವೂ ಆದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಊರುಗೋಲಿನಿಂದ ದೊಡ್ಡ ಉದ್ಯಮದ ವರೆಗೆ ರಾಮ್ ಚಂದ್ರ ಅಗರ್ವಾಲ್ ಅವರ ಪ್ರಯಣ ಉದ್ಯಮಿಗಳಿಗೆ ಸ್ಪೂರ್ತಿದಾಯಕವಾಗಿದೆ.











































