ವಿವೇಕಾನಂದ ವಿದ್ಯಾವರ್ಧಕ ಸಂಘ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕಡಬ

Picture of Savistara

Savistara

Bureau Report

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಶೈಕ್ಷಣಿಕ ಸಂಘಟನೆಗಳಲ್ಲಿ ಒಂದಾದ ವಿವೇಕಾನಂದ ವಿದ್ಯಾವರ್ಧಕ ಸಂಘ (VVS)ದ ಹಾಲಿ ಆಡಳಿತ ಮಂಡಳಿಯ ಅವಧಿ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಕಳೆದ ಹತ್ತು ವರ್ಷಗಳಿಂದ ಈ ಪ್ರತಿಷ್ಠಿತ ಹುದ್ದೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಲಂಕರಿಸಿದ್ದರು. ಕೃಷ್ಣ ಶೆಟ್ಟಿ ಕಡಬರವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರು ತಮ್ಮ ಫೇಸ್ ಬುಕ್‌ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದಾರೆ.

ವಿವೇಕಾನಂದ ವಿದ್ಯಾವರ್ಧಕ ಸಂಘವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೈದ್ಧಾಂತಿಕ ಪ್ರೇರಣೆ ಹಾಗೂ ಮಾರ್ಗದರ್ಶನದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಇದೆ. ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ವಿದ್ಯಾಭಾರತಿಯ ಶೈಕ್ಷಣಿಕ ಧೈಯಗಳು ಹಾಗೂ ವಿಚಾರಧಾರೆಗಳಿಗೆ ಪೂರಕವಾಗಿ ಸಂಘ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದೆ.

ಮೂಲಗಳ ಮಾಹಿತಿ ಪ್ರಕಾರ, ಸಂಘದ ಉಪಾಧ್ಯಕ್ಷರಾಗಿ ರೂಪಲೇಖ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ನಾರಾಯಣ ಹಾಗೂ ಕೋಶಾಧಿಕಾರಿಯಾಗಿ ಸಂತೋಷ್ ಬೋನಂತಾಯ, ಜತೆ ಕಾರ್ಯದರ್ಶಿಗಳಾಗಿ ಭರತ್ ಪೈ ಯವರು ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ, ಈ ಕುರಿತು ಸಂಘದಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇಹೊರಬೀಳಬೇಕಿದೆ.

ಹಳೆಯ ಸಮಿತಿಯಲ್ಲಿದ್ದ ಮೂವರನ್ನಷ್ಟೇ ಉಳಿಸಿಕೊಂಡು 8 ಮಂದಿ ಹೊಸಬರಿಗೆ ನೂತನ ಆಡಳಿತ ಮಂಡಳಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ಕರುಣಾಕರ ಸುವರ್ಣ, ಮಹಾಲಕ್ಷ್ಮೀ, ರಮೇಶ್ಚಂದ್ರ, ವಸಂತ ಮಾಧವ ಶ್ರೀಪತಿ ಕಲ್ಲೂರಾಯ ಹಾಗೂ” ದಕ್ಷ “ರವೀಂದ್ರ ರವರು ಹೊಸ ಸಮಿತಿಯಲ್ಲಿ ಸದಸ್ಯರಾಗಿರಲ್ಲಿದ್ದಾರೆ ಎನ್ನಲಾಗಿದೆ.

ಪ್ರತಿ 5 ವರ್ಷಕ್ಕೊಮ್ಮೆ ಸಂಘದ ಅಡಳಿತ ಮಂಡಳಿಯ ಪುನಾರಚನೆ ನಡೆಯುತ್ತದೆ. ಓರ್ವ ಅಧ್ಯಕ್ಷರಿಗೆ ಗರಿಷ್ಟ 10 ವರ್ಷ ಮಾತ್ರ ಅಡಳಿತ ನಡೆಸುವ ಅವಕಾಶವಿರುತ್ತದೆ. ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು 2016ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಮ್ಮ ಹತ್ತು ವರ್ಷದ ಕಾಲಾವಧಿಯನ್ನು ಅವರು ಪೂರ್ಣಗೊಳಿಸಿದ್ದಾರೆ1915ರಲ್ಲಿ ಪುತ್ತೂರು ಎಜುಕೇಷನ್‌ ಸೊಸೈಟಿ ಎಂಬ ಹೆಸರಿನಲ್ಲಿ ಆರಂಭಗೊಂಡ ಈ ಸಂಸ್ಥೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಸ್ಥಾಪನೆಯಾಯಿತು. 2009ರಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಸಂಸ್ಥೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘ ಎಂಬ ಹೆಸರು ನೀಡಲಾಯಿತು. ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಬೆಳೆಸುವುದು ಸಂಘದ ಪ್ರಮುಖ ಧೈಯವಾಗಿದೆ.

ಪ್ರಸ್ತುತ ಸಂಘದ ಆಡಳಿತದಲ್ಲಿ 85ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಶಿಶುಮಂದಿರ, ಶಾಲೆಗಳಿಂದ ಪದವಿ, ಸ್ನಾತಕೋತ್ತರ, ತಾಂತ್ರಿಕ, ವೃತ್ತಿಪರ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳವರೆಗೆ ವ್ಯಾಪಕ ಶೈಕ್ಷಣಿಕ ಜಾಲವನ್ನು ಹೊಂದಿದೆ. 28ಕ್ಕೂ ಹೆಚ್ಚು ಕ್ಯಾಂಪಸ್‌ಗಳಲ್ಲಿ 21 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಮಾರು 1,400ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.ಸಂಘದ ಅಧ್ಯಕ್ಷ ಸ್ಥಾನವನ್ನು ಈ ಹಿಂದೆ ಮಾಜಿ ಶಾಸಕ ರಾಮ್ ಭಟ್, ಸಹಕಾರಿ ಕ್ಷೇತ್ರದ ಹಿರಿಯ ಮುಖಂಡ ಎಸ್.ಆರ್. ರಂಗಮೂರ್ತಿ, ಉದ್ಯಮಿ ಜಿ.ಎಲ್. ಆಚಾರ್ಯ ಸೇರಿದಂತೆ ಹಲವು ಗಣ್ಯರು ಅಲಂಕರಿಸಿದ್ದಾರೆ. ಜಿಲ್ಲೆಯ ಶೈಕ್ಷಣಿಕ ಹಾಗೂ ಸಾಮಾಜಿಕ ವಲಯದಲ್ಲಿ ಮಹತ್ವದ ಪ್ರಭಾವ ಹೊಂದಿರುವ ಈ ಹುದ್ದೆಯನ್ನು ಅತ್ಯಂತ ಪ್ರತಿಷ್ಠಿತ ಸ್ಥಾನವೆಂದು ಪರಿಗಣಿಸಲಾಗಿದೆ.

ಹೊಸ ಆಡಳಿತ ಮಂಡಳಿಯ ಅಧಿಕೃತ ಘೋಷಣೆ ಜುಲೈ ಅಂತ್ಯದೊಳಗೆ ಪ್ರಕಟವಾಗುವ ನಿರೀಕ್ಷೆ ಇದ್ದು, ಅದರ ಬಳಿಕ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!