ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲೆಗಳ ಶೈಕ್ಷಣಿಕ ವಾತಾವರಣ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಿಎಂ ವಿಜಯ್ ನೇತೃತ್ವದ ಸರ್ಕಾರವು ಅತ್ಯಂತ ಕ್ರಾಂತಿಕಾರಿ ಹಾಗೂ ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ.
ರೀಲ್ಸ್ ಗಿಮಿಕ್ ಬೇಡ!
ವಿಜಯ್ ಮತ್ತೊಮ್ಮೆ ಭ್ರಷ್ಟಾಚಾರದ ಬಗ್ಗೆ ಕಠಿಣ ನಿರ್ಧಾರಗಳನ್ನು ಮುನ್ನೆಲೆಗೆ ತಂದಿದ್ದಾರೆ. ಸರ್ಕಾರದ ಹಣ ದುರುಪಯೋಗ ಮತ್ತು ಯಾವುದೇ ಹಂತದಲ್ಲಿ ಭ್ರಷ್ಟಾಚಾರ ನಡೆದರೆ ಅಥವಾ ಆಗಿರುವ ಬಗ್ಗೆ ಮಾಹಿತಿ ಬಂದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ, ಸಾರ್ವಜನಿಕ ಕಾರ್ಯಕ್ರಮಗಳ ಹೆಸರಿನಲ್ಲಿ, ಸರ್ಕಾರಿ ಶಾಲೆಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದು ಕಣ್ಣಿಗೆ ಬಿದ್ದರೆ ಆ ವ್ಯಕ್ತಿಗಳನ್ನು ಕ್ಯಾಬಿನೆಟ್ ನಿಂದ ಹೊರಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕ ಸೇವೆಗಿಂತ ಸಾಮಾಜಿಕ ಮಾಧ್ಯಮ ಪ್ರಚಾರಗಳಿಗೆ ಆದ್ಯತೆ ನೀಡುವುದನ್ನು ಒಪ್ಪುವುದಿಲ್ಲ. ಇನ್ ಸ್ಟಾಗ್ರಾಮ್ ರೀಲ್ಸ್ ಅಥವಾ ಪ್ರಚಾರದ ವಿಡಿಯೊಗಳನ್ನು ಶಾಲೆಗಳಲ್ಲಿ ಮಾಡಬೇಡಿ. ಸರ್ಕಾರದ ವೆಚ್ಚದಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಕ್ಯಾಬಿನೆಟ್‌ನಲ್ಲಿ ಗುಡುಗಿದ್ದಾರೆ. ವಿಜಯ್ ಅವರ ಖಡಕ್ ನುಡಿಗೆ ತಮಿಳುನಾಡು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ವಿಜಯ್ ಅವರ ಇತ್ತೀಚಿನ ಕ್ರಮಗಳು ರಾಜ್ಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.
ವಿಜಯ್ ಸರ್ಕಾರದ ಭ್ರಷ್ಟಾಚಾರ ನಿಗ್ರಹದ ಭಾಗವಾಗಿ, ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಆರು ಅಧಿಕಾರಿಗಳನ್ನು ಇತ್ತೀಚೆಗೆ ಅಮಾನತುಗೊಳಿಸಲಾಯಿತು. ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಉದ್ಯೋಗದ ಹೆಸರಿನಲ್ಲಿ ಹಣ ವಸೂಲಿ, ಲಂಚ ಸ್ವೀಕರಿಸಿದ ಆರೋಪ ಅವರ ಮೇಲಿತ್ತು. ಸಸ್ಪೆಂಡ್ ಆದ ಅಧಿಕಾರಿಗಳಲ್ಲಿ ವಲಯ ಆರೋಗ್ಯ ಅಧಿಕಾರಿ, ಹಿರಿಯ ಕೀಟಶಾಸ್ತ್ರಜ್ಞ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಗುಮಾಸ್ತ ಮತ್ತು ಇತರರಿದ್ದರು. ಈ ಅಧಿಕಾರಿಗಳ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳು ಸಿಕ್ಕಿವೆ ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಆಯುಕ್ತ ಜಿ.ಎಸ್.ಸಮೀರನ್ ಹೇಳಿದ್ದಾರೆ. ಸದ್ಯ ಆಂತರಿಕ ತನಿಖೆ ನಡೆಯುತ್ತಿದ್ದು, ಆರೋಪಗಳು ಸಾಬೀತಾದರೆ ಅವರನ್ನು ಶಾಶ್ವತವಾಗಿ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಹೇಳಲಾಗಿದೆ.
ಟಿವಿಕೆ ನಾಯಕನಿಗೂ ಗೇಟ್‌ಪಾಸ್
ಭ್ರಷ್ಟಾಚಾರ ಆರೋಪಗಳು ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ ಪಕ್ಷವೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಲಕ್ಷ ಲಕ್ಷ ಲಂಚ ಸ್ವೀಕರಿಸಿದ ಆರೋಪದಡಿ ಪಕ್ಷದ ಚೆಂಗಲ್ಪಟ್ಟು ಪೂರ್ವ ಜಿಲ್ಲಾ ಜಂಟಿ ಕಾರ್ಯದರ್ಶಿ ವೀರಾಸಾಮಿ ಅವರನ್ನು ಪಾರ್ಟಿಯು ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ವೀರಾವೇಶದಿಂದ ವರ್ತಿಸಿದ ಹಿನ್ನೆಲೆ ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ಹೊರನೂಕಲಾಗಿದೆ.ವೀರಾಸಾಮಿ ನಗದು ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ವಿವಾದ ಬೆಳಕಿಗೆ ಬಂದಿತು. ಆದರೆ, ಆರೋಪಗಳನ್ನು ಸುತಾರಾಮ್ ನಿರಾಕರಿಸಿದರು. ವಿಡಿಯೋದಲ್ಲಿ ತನಗೆ ಹಣ ಕೊಟ್ಟ ವ್ಯಕ್ತಿ 25 ದಿನಗಳ ಹಿಂದೆ ತನ್ನಿಂದ 1.5 ಲಕ್ಷ ರೂ. ಸಾಲವನ್ನು ಪಡೆದಿದ್ದರು. ಅದೇ ಹಣವನ್ನು ಅವರು ಹಿಂದಿರುಗಿಸಿದ್ದಾರೆ ಅಷ್ಟೇ. ನನ್ನ ಮತ್ತು ಸಿಎಂ ವಿಜಯ್ ಮಧ್ಯೆ ತಂದಿಡಲು ಡಿಎಂಕೆ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು,











































