ಫಿಫಾ ವಿಶ್ವಕಪ್ ಫೈನಲ್ : ಮೆಸ್ಸಿ ಚಾಣಾಕ್ಷತೆಗೆ ತಲೆಬಾಗಿದ ಇಂಗ್ಲೆಂಡ್

Picture of Savistara

Savistara

Bureau Report

ಅಟ್ಲಾಂಟಾ (ಎಎಫ್‌ಪಿ): ‘ಹಾಲಿ ಚಾಂಪಿಯನ್’ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಫುಟ್‌ಬಾಲ್ ಪ್ರೇಮಿಗಳ ‘ಕಣ್ಮಣಿ’ ಲಯೊನೆಲ್ ಮೆಸ್ಸಿ ಅವರ ಅಮೋಘ ಆಟದಿಂದಾಗಿ ಅರ್ಜೆಂಟೀನಾ ತಂಡವು ಇಂಗ್ಲೆಂಡ್ ಸವಾಲನ್ನು ಮೀರಿ ನಿಂತಿತು.

ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 2-1ರಿಂದ ಹ್ಯಾರಿ ಕೇನ್ ಪಡೆಯನ್ನು ಸೋಲಿಸಿತು. 60 ವರ್ಷಗಳ ನಂತರ ವಿಶ್ವಕಪ್ ಜಯಿಸುವ ಇಂಗ್ಲೆಂಡ್ ಆಟಗಾರರ ಕನಸು ಕಮರಿತು. ಆದರೆ ಸತತ ಎರಡನೇ ಪ್ರಶಸ್ತಿ ಗೆದ್ದು ದಾಖಲೆ ಬರೆಯುವ ಅವಕಾಶ ಮೆಸ್ಸಿ ಪಡೆಗೆ ಒಲಿಯಿತು.ಎಂಜೊ ಫರ್ನಾಂಡೆಜ್ (85ನೇ ನಿಮಿಷ) ಮತ್ತು ಲಾಟೆರೊ ಮಾರ್ಟಿನೇಜ್ (90 + 2ನಿ) ಅವರು ಗೋಲು ಗಳಿಸಿದರು. ಎರಡೂ ಗೋಲುಗಳಿಗೂ ಮೆಸ್ಸಿ ಅವರು ನೀಡಿದ ಪಾಸ್‌ಗಳೇ ಕಾರಣವಾದವು. ಈ ಪಂದ್ಯದಲ್ಲಿ ಅವರು ಗೋಲು ಗಳಿಸಲಿಲ್ಲ.ಆದರೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಈ ಪಂದ್ಯವು ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಣ ಇರುವ ಫಾಕ್‌ಲ್ಯಾಂಡ್ ದ್ವೀಪ ವಿವಾದದ ಹಿನ್ನೆಲೆಯಲ್ಲಿಯೂ ಕುತೂಹಲ ಕೆರಳಿಸಿತ್ತು.

‘ಇದು ವಿಶೇಷವಾದದ್ದು. ಅದರಲ್ಲೂ ಇಂಗ್ಲೆಂಡ್ ಎದುರು ಆಡುವುದಕ್ಕೆ ಐತಿಹಾಸಿಕ ಪ್ರಸಂಗವೂ ಇದೆ’ ಎಂದು ಮೆಸ್ಸಿ ಅವರು ಫಾಕ್‌ಲ್ಯಾಂಡ್ ವಿವಾದದ ಕುರಿತು ಸೂಚ್ಯವಾಗಿ ಹೇಳಿದರು.’ಲಾಸ್ ಮಾಲ್ವಿನಸ್ ಸನ್ ಅರ್ಜೆಂಟೀನಾಸ್’ ಅಂದರೆ ‘ಫಾಕ್‌ಲ್ಯಾಂಡ್ಸ್ ಅರ್ಜೆಂಟೀನಾದ್ದು’ ಎಂಬ ಒಕ್ಕಣೆಯಿದ್ದ ಬ್ಯಾನ‌ರ್ ಪ್ರದರ್ಶಿಸಿದ ಅರ್ಜೆಂಟೀನಾದ ಕೆಲವು ಆಟಗಾರರು ಫಿಫಾ ನಿಯಮ ಉಲ್ಲಂಘನೆಯ ಬಿಸಿ ಎದುರಿಸುತ್ತಿದ್ದಾರೆ. ಆಟದಂಗಳದಲ್ಲಿ ಯಾವುದೇ ರಾಜಕೀಯ ಸಂಕೇತಗಳನ್ನು ಪ್ರದರ್ಶಿಸುವುದು ನಿಯಮದ ಪ್ರಕಾರ ನಿಷಿದ್ಧವಾಗಿದೆ.ಇಂಗ್ಲೆಂಡ್ ತಂಡದ ಅಂತೋಣಿ ಗೊರ್ಡಾನ್ ಅವರು 55ನೇ ನಿಮಿಷದಲ್ಲಿ ಗೋಲು ಗಳಿಸಿ, ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಅರ್ಜೆಂಟೀನಾ ತಿರುಗೇಟು ನೀಡಿತು. ಈ ಹಂತದಲ್ಲಿ ಇಂಗ್ಲೆಂಡ್ ಕೋಚ್ ಥಾಮಸ್ ಟಚೆಲ್‌ ಅವರು ಸಬ್‌ಸ್ಟಿಟ್ಯೂಟ್‌ ನಿಯೋಜನೆಯಲ್ಲಿ ತೋರಿದ ತಂತ್ರಗಾರಿಕೆಯ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಅದರಲ್ಲೂ 72ನೇ ನಿಮಿಷದಲ್ಲಿ ಅಂತೋಣಿ ಗೋರ್ಡಾನ್ ಅವರನ್ನು ಡಗ್‌ಔಟ್‌ಗೆ ಕರೆಸಿಕೊಂಡು ಬದಲೀ ಆಟಗಾರ ಡಿಫೆಂಡರ್ ಈಝಿ ಕೊನ್ನಾ ಅವರನ್ನು ನಿಯೋಜಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.’ಈ ತಂಡವು ನನಗೆ ಪದೇ ಪದೇ ಅಚ್ಚರಿಯ ಕೊಡುಗೆ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ನಾನು ಈಚೆಗಷ್ಟೇ ಹೇಳಿದ್ದೆ. ನಾನು ನಿಜವಾಗಲೂ ಹೇಳುತ್ತೇನೆ. ನಮ್ಮೆಲ್ಲ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿನಿಯೋಗಿಸಿ ಗೆಲ್ಲುವುದಕ್ಕೆ ಪ್ರಯತ್ನಿಸುತ್ತೇವೆ’ ಎಂದು ಅರ್ಜೆಂಟೀನಾ ಕೋಚ್ ಲಯೊನೆಲ್ ಸ್ನಲೊನಿ ಸಂತಸ ವ್ಯಕ್ತಪಡಿಸಿದ್ದಾರೆ.ಟೂರ್ನಿಯುದ್ದಕ್ಕೂ ಮಿಂಚಿದ್ದ ಇಂಗ್ಲೆಂಡ್ ತಂಡದ ತಾರಾ ಜೋಡಿ ಹ್ಯಾರಿ ಕೇನ್ ಮತ್ತು ಜೂಡ್ ಬೆಲಿಂಗಮ್ ಅವರು ಈ ಪಂದ್ಯದಲ್ಲಿ ಮಂಕಾದರು.

[t4b-ticker]
error: Content is protected !!