ಬಂಟ್ವಾಳ: ಬಿಸಿರೋಡ್‌ನಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಬಜರಂಗದಳ ಸಂಘಟನೆಯ ಬಗ್ಗೆ ಅಪಪ್ರಚಾರ ನಡೆಸಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡಲಾಗಿದೆ ಎಂಬ ಆರೋಪದಡಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಉಪಾಧ್ಯಕ್ಷ ಕೇಶವ ದೈಪಾಲ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 96/2026 ದಾಖಲಿಸಲಾಗಿದೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196 ಹಾಗೂ 353(2) ಅಡಿಯಲ್ಲಿ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ದೂರಿನ ಪ್ರಕಾರ, ಜುಲೈ 16ರಂದು ರಾತ್ರಿ 8ರಿಂದ 9 ಗಂಟೆಯ ನಡುವೆ ವಿವಿಧ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್ ಗುಂಪುಗಳಲ್ಲಿ ಹತ್ಯೆ ಪ್ರಕರಣದ ಆರೋಪಿಯ ಚಿತ್ರವನ್ನು ತಿರುಚಿ ಪ್ರಸಾರ ಮಾಡಲಾಗಿದೆ. ಈ ಮೂಲಕ ಬಜರಂಗದಳ ಸಂಘಟನೆಯನ್ನು ಘಟನೆಗೆ ಸಂಬಂಧಿಸಿದಂತೆ ಸುಳ್ಳಾಗಿ ಬಿಂಬಿಸಿ, ಸಾರ್ವಜನಿಕರಲ್ಲಿ ಗೊಂದಲ ಹಾಗೂ ಕೋಮು ವೈಮನಸ್ಸು ಉಂಟುಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.
ಎಫ್ಐಆರ್ ನಲ್ಲಿ ಇನ್ಸ್ಟಾಗ್ರಾಮ್ ಖಾತೆ troll_master._, Instagram “Yuva Belthangady’ ವಾಟ್ಸಾಪ್ ಗುಂಪು, ‘Padmaraj Pari’ ಹೆಸರಿನ ಎರಡು ವಾಟ್ಸಾಪ್ , ಗುಂಪು, ‘Yuva Congress Belthangady’ ವಾಟ್ಸಪ್ ಗ್ರೂಪ್ ‘Facts and Justice’ ವಾಟ್ಸಾಪ್ ಗುಂಪು ಸೇರಿದಂತೆ ಒಟ್ಟು ಆರು ಸಾಮಾಜಿಕ ಜಾಲತಾಣ ಖಾತೆ/ಗುಂಪುಗಳನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ.
ಆರೋಪಿತರು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹಾಗೂ ಪ್ರಚೋದನಾತ್ಮಕ ಮಾಹಿತಿ ಹರಡಿ, ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳ ಮೂಲ, ಅವುಗಳನ್ನು ಹಂಚಿಕೊಂಡವರ ವಿವರ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.ಅಧಿಕಾರಿಗಳು ಸಾರ್ವಜನಿಕರು ಪರಿಶೀಲಿಸದ ಮಾಹಿತಿ ಅಥವಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ











































