ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಜನ್ಮದಿನದ ಸ್ಮರಣೆ | ದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದ ಮಹಾನ್ ಚೇತನ

Picture of Savistara

Savistara

Bureau Report

ದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ 98ನೇ ಜನ್ಮದಿನದ (Birth Anniversary) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗೌರವ ನಮನ ಸಲ್ಲಿಸಿದರು. “ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಮಾತೆಯ ಮಹಾನ್ ಮಗ. ಭಾರತಕ್ಕೆ ಅವರ ಕೊಡುಗೆ ಅವಿಸ್ಮರಣೀಯವಾಗಿದೆ” ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ವಾಜಪೇಯಿ ಅವರು 90ರ ದಶಕದಲ್ಲಿ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದಿದ್ದರು ಮತ್ತು ಒಟ್ಟಾರೆಯಾಗಿ ಆರು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು.

ಅಟಲ್​ಜಿ ಅವರಿಗೆ ಅವರ ಜಯಂತಿಯಂದು ನಮನಗಳು. ಭಾರತಕ್ಕೆ ಅವರು ನೀಡಿದ ಕೊಡುಗೆ ಅಳಿಸಲಾಗದು. ಅವರ ನಾಯಕತ್ವ ಮತ್ತು ದೂರದೃಷ್ಟಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ”.

‘ದುನಿಯಾ ಕೆ ಸಾರೆ ಸುಖ್ ಫೀಚೆ, ಮೇರಾ ದೇಶ್ ಫೆಹಲೇ’, ಈ ಮಾತನ್ನು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತುಪಡಿಸಿ ಬೇರೆ ಯಾರ ಬಾಯಲ್ಲೂ ಇಷ್ಟು ಪ್ರಾಮಾಣಿಕವಾಗಿ ಹೇಳಲು ಸಾಧ್ಯವಿಲ್ಲ. ಕವಿಯಾಗಿ, ಪತ್ರಕರ್ತರಾಗಿ, ಹಾಗೂ ದೇಶದ ಚುಕ್ಕಾಣಿ ಹಿಡಿದು ಐದು ವರ್ಷಗಳ ಕಾಲ ಕಾಂಗ್ರೆಸೇತರ ಪ್ರಧಾನಿಯಾಗಿ ಪೂರ್ಣಾವಧಿ ಪೂರೈಸಿದ ಕೀರ್ತಿ ‘ಅಜಾತಶತ್ರು’ ವಾಜಪೇಯಿ ಅವರಿಗೆ ಸಲ್ಲುತ್ತದೆ. ವಾಜಪೇಯಿ ಎಂಬ ಪುಸ್ತಕದ ಪುಟ ತಿರುವಿದಂತೆ, ನಮಗೆ ವಿಭಿನ್ನ ರೀತಿಯ ರಾಜಕಾರಣ ತೆರೆದುಕೊಳ್ಳುತ್ತ ಹೋಗುತ್ತದೆ. ಅಲ್ಲೊಬ್ಬ ಅಟಲ್ ಸೇವಕನನ್ನು ನೋಡುತ್ತೇವೆ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಬಿಹಾರಿಯನ್ನು ಎದುರುಗೊಳ್ಳುತ್ತೇವೆ, ಸಾಮರಸ್ಯ ಮತ್ತು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ನಡೆದ ನೈತಿಕ ಪಯಣವನ್ನು ಕಾಣುತ್ತೇವೆ. ಈ ಉದಾರವಾದಿ, ಮೃದುಹೃದಯಿ ನಾಯಕ ಇಂದಿಗೂ ‘ಮೋರಲ್ ಪಾಲಿಟಿಕ್ಸ್’ ಎಂಬ ಗುರುತಿನ ಪ್ರತೀಕ. ಇಂದು ಅವರ ಜನ್ಮದಿನದ ಸಂದರ್ಭದಲ್ಲಿ, ವಾಜಪೇಯಿ ಅವರ ಕನಸಿನ ಭಾರತ ರೂಪುಗೊಳ್ಳುವ ಹಾದಿಯಲ್ಲಿದೆಯೇ ಎಂಬ ಪ್ರಶ್ನೆ ರಾಜಕೀಯ ಮನೆಯ ಹೃದಯವನ್ನು ಪದೇಪದೇ ತಟ್ಟುತ್ತದೆ. ಈ ನಿಟ್ಟಿನಲ್ಲಿ ಅವರ ಬದುಕಿನ ಪಯಣವನ್ನು ಒಂದೇ ಕಂತಿನಲ್ಲಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ.

ಗ್ವಾಲಿಯರ್ನಲ್ಲೊಬ್ಬ ಮಹತ್ವಾಕಾಂಕ್ಷಿಯ ಜನನ!

ಗ್ವಾಲಿಯರ್‌ನಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣಾದೇವಿ ದಂಪತಿಗಳಿಗೆ ಜನಿಸಿದ ಅಟಲ್ ಬಿಹಾರಿ ವಾಜಪೇಯಿ ಬಾಲ್ಯದಿಂದಲೇ ರಾಷ್ಟ್ರವಾದದ ಚಿಂತನೆ ಹೊತ್ತು ಬೆಳೆದವರು. ಸ್ಥಳೀಯವಾಗಿ ಪಿಯು ಹಂತದ ಶಿಕ್ಷಣ ಪೂರೈಸಿ, ಇಂದಿನ ರಾಣಿ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ವಿಕ್ಟೋರಿಯಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯುವಕನಾಗುತ್ತಿದ್ದಂತೆ ಸಂಘ ಪರಿವಾರದತ್ತ ಅವರ ಪಯಣ ಬೆಳೆಯಿತು. ಕ್ವಿಟ್ ಇಂಡಿಯಾ ಸೇರಿ ಹಲವು ಚಳವಳಿಗಳಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿದರು. ‘ರಾಷ್ಟ್ರಧರ್ಮ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕವಿತೆಗಳ ಮೂಲಕ ದೇಶಪ್ರೇಮವನ್ನು ಮೆರೆದು ಜನಾನುರಾಗಿಯಾಗಿ ಬೆಳೆದರು. ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಒಡನಾಟ ಮುಂದಿನ ಇತಿಹಾಸಕ್ಕೆ ದಾರಿ ಮಾಡಿಕೊಟ್ಟಿತು.

ದಯಾಳ್–ಮುಖರ್ಜಿ ಜತೆಗೂಡಿದ ಯುವಕವಿ!

ರಾಷ್ಟ್ರಧರ್ಮ’ ಪತ್ರಿಕೆ ಮೂಲಕ ಪರಿಚಿತರಾದ ವಾಜಪೇಯಿ, ದೀನ್ ದಯಾಳ್ ಉಪಾಧ್ಯಾಯರ ಬೆನ್ನಿಗೆ ನಿಂತರು. ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೂ ವಾಜಪೇಯಿಯ ವಿಚಾರಗಳು ಮೆಚ್ಚುಗೆಯಾದವು. ನಂತರ ಮುಖರ್ಜಿ ಅವರ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದುಬ ಇತಿಹಾಸ. ಕಾಶ್ಮೀರಕ್ಕೆ ನೀಡಿದ ಕಲಂ 370 ಕುರಿತು ಮುಖರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ಒಂದು ದೇಶ – ಒಂದು ಸಂವಿಧಾನ’ ಎಂಬ ನಿಲುವಿನಿಂದ 1950–51ರಲ್ಲಿ ಕಾಂಗ್ರೆಸ್ ತೊರೆದು ಜನಸಂಘ ಸ್ಥಾಪಿಸಿದರು. ಈ ಸಂದರ್ಭದಲ್ಲಿ ವಾಜಪೇಯಿ ಅವರ ಪ್ರಮುಖ ಸಹಾಯಕರಾಗಿದ್ದರು.

ಮುಖರ್ಜಿ ಸಾವಿಗೆ ಮಿಡಿದ ವಾಜಪೇಯಿ!

1953ರಲ್ಲಿ ಕಲಂ 370 ವಿರೋಧಿ ಹೋರಾಟದ ವೇಳೆ ಶ್ಯಾಮ ಪ್ರಸಾದ್ ಮುಖರ್ಜಿ ಬಂಧನಕ್ಕೊಳಗಾಗಿ ನಿಗೂಢವಾಗಿ ಸಾವನ್ನಪ್ಪಿದರು. ಆ ಸಂದರ್ಭದಲ್ಲಿ ವಾಜಪೇಯಿಯೂ ಅಲ್ಲಿದ್ದರು. ‘ನಿನ್ನ ಭವಿಷ್ಯ ದೊಡ್ಡದು, ನಾನು ಪರವಾನಿಗೆ ಇಲ್ಲದೆ ಕಾಶ್ಮೀರಕ್ಕೆ ಬಂದಿದ್ದೇನೆ, ಇದನ್ನು ಹೇಳುವುದಕ್ಕಾದರೂ ನೀನು ಹಿಂತಿರುಗು’ ಎಂದು ಮುಖರ್ಜಿ ಹೇಳಿದ್ದನ್ನು ವಾಜಪೇಯಿ ಹಲವು ಬಾರಿ ಸ್ಮರಿಸಿದ್ದಾರೆ. ನಂತರ ಜನಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ದೀನ ದಯಾಳ್ ಉಪಾಧ್ಯಯ, 11 ಫೆಬ್ರವರಿ 1968ರಂದು ಮೊಘಲ್ಸರಾಯಿ ರೈಲು ನಿಲ್ದಾಣದ ಬಳಿ ಶವವಾಗಿ ಪತ್ತೆಯಾದ ಘಟನೆಯಿಂದ ಮತ್ತಷ್ಟು ದುಃಖಿತರಾದರು. ಆದರೂ ಛಲ ಬಿಡದೆ ಜನಸಂಘದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದರು.

ಬಲರಾಮಪುರದಿಂದ ಮೊದಲ ಹೆಜ್ಜೆ!ಮುಖರ್ಜಿ ಅವರ ಸಾವಿನ ಆಘಾತದಿಂದ ರಾಜಕೀಯದಿಂದ ದೂರ ಉಳಿದು ಪತ್ರಕರ್ತರಾಗಿ ಮುಂದುವರಿಯಲು ಬಯಸಿದ್ದ ವಾಜಪೇಯಿ, ನಂತರ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟದ್ದು ವಿಧಿಯಾಟ ಎಂಬಂತಿದೆ. ಉತ್ತರ ಪ್ರದೇಶದ ಬಲರಾಮಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದರು. 1984ರಲ್ಲಿ ಸೋಲು, 1986ರಲ್ಲಿ ರಾಜ್ಯಸಭೆ, 1996ರಲ್ಲಿ 13 ದಿನಗಳ ಪ್ರಧಾನಮಂತ್ರಿ, ಹೀಗೆ ಏರಿಳಿತಗಳ ನಡುವೆ 1999–2004ರ ಅವಧಿಯಲ್ಲಿ ಐದು ವರ್ಷಗಳ ಪೂರ್ಣಾವಧಿ ಪ್ರಧಾನಿಯಾಗಿ ಭಾರತದ ಮೊದಲ ಕಾಂಗ್ರೆಸೇತರ ನಾಯಕರಾಗಿ ಇತಿಹಾಸ ನಿರ್ಮಿಸಿದರು.

ವಿದೇಶಾಂಗ ಸಚಿವರಾಗಿ ಜಾಗತಿಕ ವೇದಿಕೆ!ಜನತಾ ಪಕ್ಷ–ಜನಸಂಘ ವಿಲೀನದಿಂದ ರೂಪುಗೊಂಡ ಸರ್ಕಾರದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾದರು. ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅನೇಕ ಆಂತರಿಕ ಭಿನ್ನಾಭಿಪ್ರಾಯಗಳಿಂದ ಜನತಾ ಪಾರ್ಟಿಯಿಂದ ಹೊರ ಬಂದು, ಕೊನೆಗೆ ಭಾರತೀಯ ಜನತಾ ಪಕ್ಷ ಸ್ಥಾಪಿಸಿ ಪ್ರಧಾನಿಯ ಹಾದಿಯನ್ನು ಮುಟ್ಟಿದರು.ಸಿದ್ಧಾಂತ ಬೇರೆ, ಆಡಳಿತ ಬೇರೆ: ಅಟಲ್ ಧೋರಣೆ!ಸಿದ್ಧಾಂತವನ್ನು ಆಡಳಿತಕ್ಕೆ ಬಲವಂತವಾಗಿ ತುರುಕದೆ, ಸಮನ್ವಯದ ರಾಜಕಾರಣ ನಡೆಸಿದವರು ವಾಜಪೇಯಿ. ಸುಮಾರು 20 ಪಕ್ಷಗಳೊಂದಿಗೆ ಮೈತ್ರಿ ಸರ್ಕಾರ ರಚಿಸಿ ಹೊಸ ರಾಜಕೀಯ ಭಾಷ್ಯ ಬರೆದರು. ಮಂಡಲ್ ಆಯೋಗದ ಅನುಷ್ಠಾನವನ್ನು ಆರೋಗ್ಯಕರ ರೀತಿಯಲ್ಲಿ ಕೈಗೊಂಡರು. ರಾಮರಥಯಾತ್ರೆಯ ಅತಿರೇಕ ರಾಜಕೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿಂದುಳಿದವರತ್ತ ಅವರ ಕಾಳಜಿ ಅವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿತು.ಕರ್ನಾಟಕದೊಂದಿಗೆ ಅಜಾತಶತ್ರುವಿನ ಒಡನಾಟ!ಬೆಂಗಳೂರು ಮೆಟ್ರೋ ಉದ್ಘಾಟನೆ, ಮಹಾದಾಯಿ ಯೋಜನೆಗೆ ತಾತ್ವಿಕ ಅನುಮೋದನೆ, 1975ರ ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧನ, ಇವೆಲ್ಲವು ಕರ್ನಾಟಕದೊಂದಿಗೆ ವಾಜಪೇಯಿಯ ಆತ್ಮೀಯ ಸಂಬಂಧವನ್ನು ತೋರಿಸುತ್ತವೆ. ಎಂ.ಜಿ. ರಸ್ತೆಯ ಕಾಫಿ ಹೌಸ್‌ನಲ್ಲಿ ಮಸಾಲ ದೋಸೆ ಮತ್ತು ಕಾಫಿ ಅವರ ಮೆಚ್ಚಿನ ಆಹಾರ. ಶಿವಮೊಗ್ಗದ ಜೋಗವನ್ನು ನೋಡಿ ಹಿಂದಿಯಲ್ಲಿ ಕವಿತೆ ಬರೆದಿದ್ದರು. ಕರ್ನಾಟಕದ ಪರ ನಿಲುವುಗಳನ್ನು ಅವರು ಹಲವು ಬಾರಿ ತೋರಿಸಿದ್ದರು.ಅಜಾತಶತ್ರುವಿನ ಕಲ್ಯಾಣ ಕಾರ್ಯಕ್ರಮಗಳು!1999–2004ರ ಅವಧಿಯಲ್ಲಿ ವಾಜಪೇಯಿ ಸರ್ಕಾರವು ಸರ್ವತೋಮುಖ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿತು. ಅಂತ್ಯೋದಯ ಅನ್ನ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಾ ಅಭಿಯಾನ, ವಾಲ್ಮೀಕಿ–ಅಂಬೇಡ್ಕರ್ ಆವಾಸ್ ಯೋಜನೆ, ಸುವರ್ಣ ಚತುಷ್ಕೋನ ರಸ್ತೆ ಯೋಜನೆ ಮತ್ತು ನ್ಯೂ ಟೆಲಿಕಾಂ ಪಾಲಿಸಿ ಒಂದೇ ಎರಡೇ, ಇವೆಲ್ಲವು ಸಾಮಾನ್ಯ ಜನರ ಬದುಕಿನಲ್ಲಿ ನೈಜ ಬದಲಾವಣೆ ತಂದವು.

ವಿಜ್ಞಾನ ಕ್ಷೇತ್ರಕ್ಕೆ ಅಟಲ್ ಕೊಡುಗೆ!

1998ರ ಪೋಖ್ರಾನ್–2 ಅಣುಪರೀಕ್ಷೆಯ ಮೂಲಕ ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಘೋಷಿಸಿದ ಧೈರ್ಯ ವಾಜಪೇಯಿಯದು. ಅಂತರರಾಷ್ಟ್ರೀಯ ಒತ್ತಡಗಳ ನಡುವೆಯೂ ಅವರು ತೋರಿದ ದೃಢತೆ ಅಪರೂಪ. 2003ರಲ್ಲಿ ಚಂದ್ರಯಾನ–1 ಯೋಜನೆಗೆ ಅನುಮೋದನೆ ನೀಡಿ ಭಾರತದ ಬಾಹ್ಯಾಕಾಶ ಸಂಶೋಧನೆಗೆ ಹೊಸ ದಿಕ್ಕು ನೀಡಿದರು. ಅಟಲ್ ಬಿಹಾರಿ ವಾಜಪೇಯಿ ರಾಜಕಾರಣ ಎಂದರೆ ಕೇವಲ ಅಧಿಕಾರವಲ್ಲ, ಅದು ನೈತಿಕತೆ, ಸಂಯಮ ಮತ್ತು ಸಾಮರಸ್ಯದ ಅಭ್ಯಾಸ ಎಂದು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ರಾಷ್ಟ್ರಹಿತವನ್ನು ಮೊದಲಿಗಿಡುವ ಅವರ ಧೋರಣೆ ಇಂದಿನ ರಾಜಕಾರಣಕ್ಕೆ ದೀಪಸ್ತಂಭವಾಗಿದೆ. ‘ದೇಶ ಮೊದಲು’ ಎಂಬ ಮಂತ್ರವನ್ನು ಕಾರ್ಯರೂಪಕ್ಕೆ ತಂದ ಅವರ ಕನಸಿನ ಭಾರತ ಇನ್ನೂ ನಮ್ಮ ಮುಂದೆ ಗುರಿಯಾಗಿ ನಿಂತಿದೆ. ಆ ಗುರಿಯನ್ನು ಸಾಧಿಸುವುದೇ ವಾಜಪೇಯಿ ಅವರಿಗೆ ಸಲ್ಲಿಸುವ ನಿಜವಾದ ಗೌರವ.

[t4b-ticker]
error: Content is protected !!