ಚೆನ್ನೈ: ಮದುರೈನ ತಿರುಪರನ್ ಕುಂದ್ರಂ ಬೆಟ್ಟದ ಮೇಲಿನ ಕಲ್ಲಿನ ಕಂಬದ ಮೇಲೆ ಕಾರ್ತಿಕ ದೀಪ ಬೆಳಗಿಸಲು ಅದೇಶ ನೀಡಿರುವ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್ (ಮದುರೈ ಪೀಠ) ಮಂಗಳವಾರ (ಜ.06) ಎತ್ತಿ ಹಿಡಿಯುವ ಮೂಲಕ ಆಡಳಿತರೂಢ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದೆ.
ತಿರುಪರನ್ ಕುಂದ್ರಂ ಬೆಟ್ಟದ ತುದಿಯಲ್ಲಿರುವ ದರ್ಗಾದ ಬಳಿಯ ಕಲ್ಲಿನ ಕಂಬದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ತಮಿಳುನಾಡು ಸರ್ಕಾರದ ವಾದವನ್ನು ತಳ್ಳಿಹಾಕಿದೆ.ಹಜರತ್ ಸುಲ್ತಾನ್ ಸಿಕ್ಕಂದರ್ ಬಾದುಷಾ ಅವುಲಿಯಾ ದರ್ಗಾದ ಸಮೀಪದಲ್ಲಿರುವ ತಿರುಪರನ್ ಕುಂದ್ರಂ ಬೆಟ್ಟಗಳ ಮೇಲಿರುವ ಪುರಾತನ ಕಲ್ಲಿನ ದೀಪ ಸ್ತಂಭದಲ್ಲಿ ಕಾರ್ತಿಕ ಮಾಸದ ದೀಪವನ್ನು ಬೆಳಗಿಸಬಹುದೇ ಎಂಬ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ತಮಿಳುನಾಡು ಸರ್ಕಾರ ಮತ್ತು ಇತರ ಮೇಲ್ಮನವಿದಾರರು ಆಚರಣೆ, ಕಾನೂನು ಸುವ್ಯವಸ್ಥೆ ಕಾಳಜಿ ಹಾಗೂ ಸ್ಥಳದ ಮೇಲಿನ ಆಡಳಿತದ ಹಕ್ಕುಗಳನ್ನು ಉಲ್ಲೇಖಿಸಿ ಆಚರಣೆಯನ್ನು ವಿರೋಧಿಸಿದ್ದವು.
ಯಾವುದೇ ಆಗಮ ಶಾಸ್ತ್ರವು ದೀಪ ಬೆಳಗುವುದನ್ನು ನಿಷೇಧಿಸುತ್ತದೆ ಎಂಬುದನ್ನು ಸಾಬೀತುಪಡಿಸಲು ತಮಿಳುನಾಡು ಸರ್ಕಾರದ ಅಧಿಕಾರಿಗಳು ಮತ್ತು ದರ್ಗಾ ಸೇರಿದಂತೆ ಮೇಲ್ಮನವಿದಾರರು “ಅಗಾಮ ಪುರಾವೆಗಳನ್ನು” ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಪೀಠ ಹೇಳಿದೆ.ರಾಜ್ಯದ ವಾದಕ್ಕೆ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ ಪೀಠ, ದೇವಸ್ತಾನದ ಪ್ರತಿನಿಧಿಗಳು ವರ್ಷದಲ್ಲಿ ಒಂದು ನಿರ್ದಿಷ್ಟ ದಿನದಂದು ಕಲ್ಲಿನ ಕಂಬದ ಮೇಲೆ ದೀಪ ಹಚ್ಚಲು ಅವಕಾಶ ನೀಡುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ಹೇಳುವುದನ್ನು “ಹಾಸ್ಯಾಸ್ಪದ ಮತ್ತು ನಂಬಲು ಕಷ್ಟ” ಎಂದು ಅಭಿಪ್ರಾಯವ್ಯಕ್ತಪಡಿಸಿದೆ.













































