“ರಾಜ್ಯ ಸರ್ಕಾರ ಮಂಡಿಸಿರುವ ದ್ವೇಷ ಭಾಷಣ ವಿಧೇಯಕವು ನಮ್ಮ ಅಭಿವ್ಯಕ್ತಿಯನ್ನು ಹತ್ತಿಕ್ಕಲಾರದು. ನಾವು ಆಡುವ ಮಾತುಗಳು ದ್ವೇಷವಲ್ಲ, ಅವು ಇತಿಹಾಸದ ಕಟು ಸತ್ಯಗಳು,” ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತಿಪಾದಿಸಿದರು.
ಪಟ್ಟಣದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಸಮಾಜೋತ್ಸವ’ದಲ್ಲಿ ಪಾಲ್ಗೊಂಡು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು. “ಹಿಂದೂ ಧರ್ಮವು ಇಂದು ಶಿಸ್ತು. ಬದ್ಧತೆ ಹಾಗೂ ಲಯದೊಂದಿಗೆ ಪುನರುತ್ಥಾನಗೊಳ್ಳುತ್ತಿದೆ. ಇದನ್ನು ಸಹಿಸದ ಕೆಲವು ಮನಸ್ಥಿತಿಗಳು ಜಾತಿ ಮತ್ತು ಉಪಜಾತಿಗಳ ನಡುವೆ ವಿಷಬೀಜ ಬಿತ್ತಿ ಕಲಹ ಸೃಷ್ಟಿಸುವ ಮೂಲಕ ಧರ್ಮವನ್ನು ನಾಶಮಾಡಲು ಯತ್ನಿಸುತ್ತಿವೆ. ಇಂತಹ ವಿಚ್ಛಿದ್ರಕಾರಿ ಶಕ್ತಿಗಳಿಗೆ ಹಿಂದೂ ಸಮಾಜೋತ್ಸವಗಳು ನಡುಕ ಹುಟ್ಟಿಸಿವೆ.” ಎಂದರು.
ದೇಶದ ವಿಭಜನೆಯ ಕುರಿತು ಪ್ರಸ್ತಾಪಿಸಿದ ಅವರು. “ನಮ್ಮಿಂದ ಬೇರ್ಪಟ್ಟ ಭೂಭಾಗಗಳು ಇಂದಿಗೂ ನಮ್ಮದೇ. ಅಲ್ಲಿ ಹಿಂದೂ ಜನಸಂಖ್ಯೆ ಕ್ಷೀಣಿಸಿದ ಕಾರಣ ಅವು ಇಂದು ಅನ್ಯ ಧರ್ಮೀಯರ ವಶದಲ್ಲಿವೆ. ಆದರೆ, ಸಮಾಜೋತ್ಸವಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಕಳೆದುಕೊಂಡ ಆ ಭೂಭಾಗಗಳನ್ನು ಮರಳಿ ಪಡೆಯುತ್ತೇವೆ” ಎಂದು ತಿಳಿಸಿದರು.
“ಇತಿಹಾಸವನ್ನು ಮರೆಯುವ ತಲೆಮಾರುಗಳಿಂದ ದೇಶದ ಅವನತಿ ಆರಂಭವಾಗುತ್ತದೆ. ಹಿಂದೂಗಳ ಸಂಖ್ಯೆ ಕಡಿಮೆ ಇರುವಲ್ಲಿ ಯಾವುದೇ ರಾಜಕೀಯ ಪಕ್ಷದ ಹಿಂದೂ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಕಹಿ ಸತ್ಯ. ಈ ವಾಸ್ತವವನ್ನು ಅರಿತು ಸಮಾಜದ ಹಿತದೃಷ್ಟಿಯಿಂದ ಹಿಂದೂಗಳು ಒಗ್ಗೂಡಬೇಕು,” ಎಂದು ಅವರು ಕರೆ ನೀಡಿದರು.












































