ತಿಪಟೂರು(ತುಮಕೂರು): ದೇವರು ವರವನ್ನೂ ಕೊಡುವುದಿಲ್ಲ,ಶಾಪವನ್ನೂ ಕೊಡುವುದಿಲ್ಲ, ಅವಕಾಶವನ್ನು ಮಾತ್ರ ಕೊಡುತ್ತಾನೆ. ಶ್ರೀ ಗಂಗಾಧರ ಅಜ್ಜನವರ ಕ್ಷೇತ್ರ ಒಂದು ಶಕ್ತಿ ಪೀಠ. ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ ಮಹಾಶಿವರಾತ್ರಿ ನಂತರ ನಮಗೆ, ನಿಮಗೆ ಎಲ್ಲರಿಗೂ ಒಳ್ಳೆಯ ಕಾಲ ಬರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು.ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಶುಕ್ರವಾರ ಅಜ್ಜಯ್ಯನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದು, ನಾನು ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡು ಸಾವಿರ ದಿನಗಳಾಗಿರುವ ಶುಭದಿನ ನಾನು ಶ್ರೀಕ್ಷೇತ್ರಕ್ಕೆ ಬಂದಿರುವುದು ಪುಣ್ಯದ ಕೆಲಸ. ಅಜ್ಜಯ್ಯನ ಆಶೀರ್ವಾದವೇ ನನಗೆ ಯಾವಾಗಲೂ ಶ್ರೀರಕ್ಷೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಡ್ಯಾಂ ಸೇಫ್ಟಿ ಕಾರ್ಯಕ್ರಮ ನನ್ನ ನೇತೃತ್ವದಲ್ಲಿಯೇ ನಡೆಯುತ್ತಿದೆ. ಕಾರ್ಯಕ್ರಮದ ಒತ್ತಡದಿಂದ ಇಲ್ಲಿಗೆ ಬರಲು ಆಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಮಠದ ಶಕ್ತಿ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿದೆ ಎಂದ ಅವರು, ನನಗೂ ಅಜ್ಜಯ್ಯನಿಗೂ ಇರುವಂಥ ಸಂಬಂಧ, ನಂಬಿಕೆ ನಿಮಗೆಲ್ಲ ಗೊತ್ತಿದೆ. ನಾವು ಅವರ ಮಾರ್ಗದರ್ಶನದಲ್ಲಿ ಬದುಕುತ್ತಿದ್ದೇವೆ. ಅವರ ಶಕ್ತಿಯಿಂದಲೇ ಇಲ್ಲಿಯವರೆಗೂ ಬೆಳೆದುಬಂದಿದ್ದೇನೆ. ಇಲ್ಲದ್ದಿದ್ದರೆ ರಾಜ್ಯದಲ್ಲಿ ನಮ್ಮ ಸರ್ಕಾರ ಇಷ್ಟು ಶಕ್ತಿಯುತವಾಗಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರ ಕೂಡ ಜನರ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಮುಂದೆ ಏನಾಗುತ್ತದೆ ಎಂದು ನಾನೀಗ ಚರ್ಚೆ ಮಾಡಲು ಹೋಗುವುದಿಲ್ಲ ಎಂದು ನುಡಿದರು.
ದೆಹಲಿಯಿಂದ ಬರುತ್ತಿದ್ದಂತೆ ದೇವರ ಮೊರೆಹೋದ ಡಿಕೆಶಿ
ದೆಹಲಿಯಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿದ್ದರು. ತಮ್ಮ ಎಡಬಿಡದ ಕಾರ್ಯಕ್ರಮಗಳ ನಡುವೆಯೂ ಶುಕ್ರವಾರ ಮಧ್ಯಾಹ್ನ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಸೋಮೇಕಟ್ಟೆ ಕಾಡುಸಿದ್ದೇಶ್ವರ ಸಂಸ್ಥಾನದ ಅಜ್ಜಯ್ಯನ ದರ್ಶನ ಪಡೆದ ಶಿವಕುಮಾರ್, ಅಲ್ಲಿ ಧರ್ಮಸಭೆಯಲ್ಲಿ ಭಾಗವಹಿಸಿದರು.ಗುರುವಾರ ದೆಹಲಿಯಿಂದ ವಾಪಸಾದ ಡಿಸಿಎಂ, ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಶುಕ್ರವಾರ ಬೆಳಗ್ಗೆ ಐಐಎಸ್ಸಿಯಲ್ಲಿ ಹಮ್ಮಿಕೊಂಡಿದ್ದ ಅಣೆಕಟ್ಟೆ ಸುರಕ್ಷತೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡರು. ನಂತರ ಅಜ್ಜಯ್ಯನ ದರ್ಶನ ಪಡೆದರು. ಸಂಜೆ 6ರ ಸುಮಾರಿಗೆ ಬೆಂಗಳೂರಿಗೆ ವಾಪಸಾದರು.













































