ನೆಹರೂ ದಾಖಲೆ ಮುರಿದ ಮೋದಿ: ಭಿನ್ನ ಕಾಲಘಟ್ಟ, ವಿಭಿನ್ನ ಸವಾಲುಗಳು

Picture of Savistara

Savistara

Bureau Report

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಜೂನ್ 10ಕ್ಕೆ 4,399 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತದ ಮೊದಲ ಪ್ರಧಾನಿಯಾದ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಈ ಮೂಲಕ ಮೋದಿ ಮುರಿಯುತ್ತಿದ್ದಾರೆ.

ನೆಹರೂ ಅವರು 4,398 ದಿನಗಳವರೆಗೆ ದೇಶದ ಪ್ರಧಾನಿ ಹುದ್ದೆಯಲ್ಲಿದ್ದರು. ಶೂನ್ಯದಿಂದ ದೇಶವನ್ನು ಕಟ್ಟುವ, ಹಲವು ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಂದುಗೂಡಿಸುವ ಸವಾಲನ್ನು ನೆಹರೂ ಎದುರಿಸಿದ್ದರೆ, ಆಧುನಿಕ ಜಗತ್ತಿನಲ್ಲಿ ಭಾರತದ ಆರ್ಥಿಕ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಮರುರೂಪಿಸುವ, ರಾಜತಾಂತ್ರಿಕ ಸವಾಲುಗಳನ್ನು ಮೋದಿ ಎದುರಿಸುತ್ತಿದ್ದಾರೆ.ಶತಮಾನಗಳ ವಸಾಹತುಶಾಹಿ ಆಳ್ವಿಕೆಯ ನಂತರ ರಾಜಕೀಯ ಸ್ಥಿರತೆ, ನವ ಭಾರತದ ನಿರ್ಮಾಣ ಮತ್ತು ಬಡತನ ನಿರ್ಮೂಲನೆಯ ದೊಡ್ಡ ಸವಾಲನ್ನು ಹೊತ್ತು ಹೊಸದಾಗಿ ಸ್ವತಂತ್ರಗೊಂಡ ರಾಷ್ಟ್ರವನ್ನು ನೆಹರೂ ಮುನ್ನಡೆಸಿದರು.ಪ್ರಧಾನಿ ಮೋದಿ ಅವರು ಜಾಗತಿಕ ಆರ್ಥಿಕತೆಯೊಂದಿಗೆ ಹೆಚ್ಚು ಸಂಬಂಧ ಹೊಂದಿರುವ, ರಾಜಕೀಯವಾಗಿ, ಸ್ಪರ್ಧಾತ್ಮಕವಾಗಿ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಒಡ್ಡಿಕೊಂಡ ಭಾರತವನ್ನು ಆಳುತ್ತಿದ್ದಾರೆ.

ಹೀಗಾಗಿ ನರೇಂದ್ರ ಮೋದಿ ಮತ್ತು ನೆಹರೂ ಇಬ್ಬರೂ ಭಾರತದ ಇತಿಹಾಸದಲ್ಲಿ ಪರಿವರ್ತನೆಯ ಸಮಯದಲ್ಲಿ ಪ್ರಧಾನಿ ಹುದ್ದೆಗೇರಿದವರು. ಆದರೆ ಎದುರಿಸಿದ ಸವಾಲುಗಳು ಮಾತ್ರ ಭಿನ್ನ ಎಂಬುದು ಗಮನಾರ್ಹ.

ದೇಶ ವಿಭಜನೆ ಮತ್ತು ನಿರಾಶ್ರಿತರ ಸಮಸ್ಯೆ/ ಕೋವಿಡ್ ತಂದ ಸಂಕಷ್ಟ

ಭಾರತ-ಪಾಕಿಸ್ತಾನ ವಿಭಜನೆಯಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾದರು. ಕೋಮು ಗಲಭೆಗಳ ನಿಯಂತ್ರಣ, ನಿರಾಶ್ರಿತರಿಗೆ ವಸತಿ, ಆಹಾರ ಹಾಗೂ ಉದ್ಯೋಗ ನೀಡುವುದು ನೆಹರೂ ಅವರ ಮುಂದಿದ್ದ ಅತ್ಯಂತ ದೊಡ್ಡ ಸವಾಲಾಗಿತ್ತು.

ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಆರಂಭಿಕ ವರ್ಷಗಳಲ್ಲಿ ಎದುರಿಸಿದ ದೊಡ್ಡ ಸವಾಲು ಕೋವಿಡ್ ಸಾಂಕ್ರಾಮಿಕ. ಶತಮಾನಗಳ ಅವಧಿಯಲ್ಲಿ ದೇಶ ಎದುರಿಸಿದ ದೊಡ್ಡ ಬಿಕ್ಕಟ್ಟು. ದೇಶದಲ್ಲಿ ಲಾಕ್‌ಡೌನ್‌ ನಿರ್ವಹಣೆ, ಬಡವರಿಗೆ ಉಚಿತ ರೇಷನ್, ಆರೋಗ್ಯ ಮೂಲಸೌಕರ್ಯಗಳ ಕೊರತೆಯನ್ನು ನೀಗಿಸುವುದು, ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ನಡೆಸುವುದು ಒಂದು ಐತಿಹಾಸಿಕ ಸವಾಲಾಗಿತ್ತು.

ಪ್ರಜಾಪ್ರಭುತ್ವಕ್ಕೆ ಅಡಿಪಾಯ/ ಭ್ರಷ್ಟಾಚಾರ ನಿರ್ವಹಿಸುವ ಸವಾಲು

1951-52ರ ಸಮಯದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವುದು ಮತ್ತು ಸಂವಿಧಾನವನ್ನು ಜಾರಿಗೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಸುಲಭದ ಮಾತಾಗಿರಲಿಲ್ಲ.ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಭ್ರಷ್ಟಾಚಾರ, ಕಪ್ಪು ಹಣ ಪಿಡುಗಾಗಿ ಪರಿಣಮಿಸಿದೆ. ಇದನ್ನು ಮೂಲದಿಂದ ಕಿತ್ತೊಗೆಯುವ ಉದ್ದೇಶದಿಂದ 2016 ರಲ್ಲಿ ಜಾರಿಗೆ ತಂದ ನೋಟು ಅಮಾನೀಕರಣ ಮತ್ತು ದೇಶದ ತೆರಿಗೆ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರಲು ತಂದ ಜಿಎಸ್‌ಟಿ ವ್ಯವಸ್ಥೆಗಳ ಅನುಷ್ಠಾನದಿಂದಾಗಿ, ಆರಂಭದಲ್ಲಿ ಸರ್ಕಾರ ಆರ್ಥಿಕ ಮತ್ತು ಸಾರ್ವಜನಿಕ ಸವಾಲುಗಳನ್ನು ಎದುರಿಸಬೇಕಾಯಿತು.

ಜಾಗತಿಕ ಅನಿಶ್ಚಿತತೆ

ನೆಹರೂ ಕಾಲದಿಂದಲೂ ಅಂತರರಾಷ್ಟ್ರೀಯ ಗಡಿ ಸಮಸ್ಯೆ ಮುಂದುವರಿದುಕೊಂಡೇ ಬಂದಿದೆ. ಶೀತಲ ಸಮರದ ಆರಂಭಿಕ ಹಂತಗಳಲ್ಲಿ ನೆಹರೂ ಆಳ್ವಿಕೆ ನಡೆಸಿದ್ದರು. ಆಗ ಜಗತ್ತು ಎರಡು ಪ್ರಮುಖ ಶಕ್ತಿ ಬಣಗಳ ಸುತ್ತ ಹೆಚ್ಚಾಗಿ ಸಂಘಟಿತವಾಗಿತ್ತು.ಆದರೆ ಇಂದಿನ ಭೌಗೋಳಿಕ ರಾಜಕೀಯ ಪರಿಸರ ಅಸ್ಥಿರತೆಯಿಂದ ಕೂಡಿರುವುದು ಪ್ರಧಾನಿ ಮೋದಿಯವರಿಗೆ ಸವಾಲಾಗಿದೆ.ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಗೆ ಪ್ರತಿಯಾಗಿ ಉರಿ ಮತ್ತು ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟೈಕ್ ಹಾಗೂ ಬಾಲಾಕೋಟ್ ವೈಮಾನಿಕ ದಾಳಿಗಳನ್ನು ನಿರ್ವಹಿಸುವುದು ಭದ್ರತಾ ಸವಾಲಾಗಿತ್ತು. ಇನ್ನು 2020ರ ಗಲ್ವಾನ್ ಕಣಿವೆ ಸಂಘರ್ಷ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯನ್ನು ತೀವ್ರಗೊಳಿಸಿತ್ತು.ಇನ್ನೊಂದೆಡೆ ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಹಮಾಸ್ ಸಂಘರ್ಷ, ಅಮೆರಿಕ-ಇರಾನ್ ಸಂಘರ್ಷಗಳು ಇಂಧನ ಮಾರುಕಟ್ಟೆ, ಆಹಾರ ಭದ್ರತೆ, ವ್ಯಾಪಾರ ಮಾರ್ಗಗಳು ಮತ್ತು ಜಾಗತಿಕ ರಾಜತಾಂತ್ರಿಕತೆಯ ಮೇಲೆ ಪರಿಣಾಮ ಬೀರಿವೆ.

ವಿದೇಶಾಂಗ ನೀತಿ

ಜಾಗತಿಕವಾಗಿ ಶೀತಲ ಸಮರ ನಡೆಯುತ್ತಿದ್ದಾಗ ಭಾರತ ಯಾವುದೇ ಬಣಕ್ಕೆ ಸೇರದೆ ‘ಅಲಿಪ್ತ ನೀತಿ’ ಕಾಯ್ದುಕೊಳ್ಳಬೇಕಾಯಿತು. 1962 ರ ಭಾರತ-ಚೀನಾ ಯುದ್ಧ ನೆಹರೂ ಅವರ ವಿದೇಶಾಂಗ ನೀತಿ ಮತ್ತು ಗಡಿ ಭದ್ರತೆಗೆ ಎದುರಾದ ಅತಿ ದೊಡ್ಡ ಹಿನ್ನಡೆಯಾಗಿತ್ತು.ಆದರೆ ಇಂದಿನ ರಾಜತಾಂತ್ರಿಕತೆ ಸಂಪೂರ್ಣ ಭಿನ್ನವಾಗಿದೆ. ದೇಶಗಳು ಏಕಕಾಲದಲ್ಲಿ ಹಲವು ಜಾಗತಿಕ ಶಕ್ತಿ ಕೇಂದ್ರಗಳೊಂದಿಗೆ ಏಕಕಾಲಕ್ಕೆ ಸಂಬಂಧಗಳನ್ನು ಕಾಯ್ದುಕೊಳ್ಳುತ್ತಿವೆ.ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ತನ್ನ ವಿದೇಶಾಂಗ ನೀತಿಯನ್ನು ವಿಸ್ತರಿಸಿದೆ. ಭಾರತವು ಯಾವುದೇ ಒಂದು ಬಣಕ್ಕೆ ಸೀಮಿತವಾಗದೆ, ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಾಯ್ದುಕೊಂಡಿದೆ.

ಭದ್ರತಾ ಸವಾಲುಗಳು

ನೆಹರೂ ಅವರ ಅಧಿಕಾರಾವಧಿಯಲ್ಲಿ ಇಂಡೋ-ಪಾಕ್ ಯುದ್ಧ ಮತ್ತು 1962 ರ ಚೀನಾ-ಭಾರತೀಯ ಸಂಘರ್ಷವೂ ಸೇರಿತ್ತು. 1950 ಮತ್ತು 1960ರ ದಶಕಗಳಲ್ಲಿದ್ದ ರಾಷ್ಟ್ರದ ಭದ್ರತಾ ಸವಾಲು ಈಗ ಭಿನ್ನವಾಗಿದೆ.ಇಂದಿನ ರಕ್ಷಣಾ ವಾತಾವರಣವು ಕೇವಲ ಗಡಿಯಲ್ಲಿ ನಡೆಯುವ ಸಾಂಪ್ರದಾಯಿಕ ಯುದ್ಧಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಯೋತ್ಪಾದನೆ, ಸೈಬರ್ ದಾಳಿ, ಗಡಿ ಉದ್ವಿಗ್ನತೆ, ಸುಳ್ಳು ಸುದ್ದಿಗಳನ್ನು ಹರಡುವಿಕೆ ಮತ್ತು ಸುಧಾರಿತ ತಂತ್ರಜ್ಞಾನಗಳ ಕಾರಣದಿಂದಾಗಿ ಬಾಹ್ಯವಾಗಿ ಮಾತ್ರವಲ್ಲದೆ, ದೇಶದಲ್ಲಿ ಆಂತರಿಕವಾಗಿಯೂ ಆಪತ್ತು ಕಟ್ಟಿಟ್ಟ ಬುತ್ತಿಯಂತಾಗಿದೆ.

ಜನಸಂಖ್ಯೆಯ ಅಸಮತೋಲನ

ನೆಹರೂ ಪ್ರಧಾನಿಯಾದಾಗ ಭಾರತದ ಜನಸಂಖ್ಯೆ ಸುಮಾರು 34 ಕೋಟಿ ಇತ್ತು. ಇಂದು ದೇಶದಲ್ಲಿ 140 ಕೋಟಿಗೂ ಹೆಚ್ಚು ನಾಗರಿಕರಿದ್ದಾರೆ. ಮತದಾರರು, ಆರ್ಥಿಕತೆ, ಮಾಧ್ಯಮ ಪರಿಸರ ವ್ಯವಸ್ಥೆ ಎಲ್ಲವೂ ಅಗಾಧವಾಗಿ ಬೆಳೆದಿದೆ.ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸಾಧಿಸಿವೆ. ಬಿಕಟ್ಟಿನ ಸಮಯದಲ್ಲಿಯೂ ಜನರ ಆಶೋತ್ತರಗಳಿಗೆ ಕಿವಿಯಾಗಿ, ದೇಶದ ಆರ್ಥಿಕ ಸ್ಥಿತಿಯನ್ನೂ ಹೆಗಲಿಗೇರಿಸಿಕೊಂಡು ಸಾಗಬೇಕಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!