ಅಂಕೋಲಾ: ಸರಕಾರದಿಂದ ದೊರೆಯುವ ಪಿಂಚಣಿಯಿಂದಲೇ ಜೀವನ ನಡೆಸುತ್ತಿರುವ ಅನೇಕ ಫಲಾನುಭವಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಿಂಚಣಿ ಇಲ್ಲದೆ ದೈನಂದಿನ ಖರ್ಚು ನಿರ್ವಹಣೆ ಕಷ್ಟವಾಗಿದ್ದು, ಪಿಂಚಣಿ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಲು ತಹಸೀಲ್ದಾರ್ ಕಚೇರಿಗೆ ಅಲೆಯುತ್ತಿರುವ ಸನ್ನಿವೇಶ ಕಂಡು ಬಂದಿದೆ.ಕಳೆದರಡು ತಿಂಗಳಿನಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಬಾರದೆ ಅಸಾಹಯಕರು, ವಿಶೇಷಚೇತನರು, ವಿಧವೆಯರು ಪರದಾಡುವಂತಾಗಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಇಂದಿರಾಗಾಂಧಿ ವೃದ್ದಾಪ್ಯ ವೇತನ, ವಿಧವಾ ವೇತನ, ವಿಶೇಷಚೇತನರ ಪಿಂಚಣಿ, ಸಂಧ್ಯಾ ಸುರಕ್ಷಾ ಸೇರಿ ನಾನಾ ಯೋಜನೆಗಳಡಿ ತಾಲೂಕಿನಲ್ಲಿ 16194 ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ.
ತಿಂಗಳಿಗೆ ಸರಿಸಮಾರು 1 ಕೋಟಿ 14 ಲಕ್ಷದವರೆಗೆ ಅನುದಾನ ಬೇಕಾಗಿರುತ್ತದೆ. ಇದೀಗ ಕಳೆದ ಎರಡು ಮೂರು ತಿಂಗಳಿನಿಂದ ಕೆಲವೊಬ್ಬರಿಗೆ ಮಾಸಾಶನ ಮುಂಜೂರಾಗಿಲ್ಲ. ಈ ತಿಂಗಳು ಪೂರ್ಣಗೊಂಡರೆ ಮೂರು ತಿಂಗಳ ಬಾಕಿಗಾಗಿ ಫಲಾನುಭವಿಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಪ್ರತಿ ತಿಂಗಳು ಸರಕಾರದಿಂದ ದೊರೆಯುವ ಪಿಂಚಣಿಯಿಂದಲೇ ಜೀವನ ನಡೆಸುತ್ತಿರುವ ಅನೇಕ ಫಲಾನುಭವಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಒಂಟಿ ಮಹಿಳೆ, ವಿಶೇಷಚೇತನರು ಸರಕಾರದ ಇಂತಹ ಯೋಜನೆಗಳ ಮೇಲೆಯೇ ಅವಲಂಬಿತವಾಗಿದ್ದಾರೆ. ಪಿಂಚಣಿ ವಿಳಂಬವಾಗುತ್ತಿರುವುದರಿಂದ ನಿತ್ಯದ ಆಹಾರ, ಅಗತ್ಯತೆ ಹಾಗೂ ಔಷಧ ಪಡೆಯಲು ಸಾಧ್ಯವಾಗದೆ ಗೋಳಿಡುವಂತಾಗಿದೆ.ಫಲಾನುಭವಿಗಳಿಗೆ ಈ ಹಿಂದೆ ಪ್ರತಿ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿತ್ತು. ಆದರೆ ಈಗ ಮೂರು ತಿಂಗಳು ಹತ್ತಿರ ಬಂದರೂ ಜಮಾ ಆಗುತ್ತಿಲ್ಲ
ಪಿಂಚಣಿ ಹಣ ವಿಳಂಬದ ಕುರಿತು ಪ್ರತಿಕೆಯ ಮಾಧ್ಯಮ ಪ್ರತಿನಿಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ಸರಿಯಾದ ಸ್ಪಷ್ಟತೆ ನೀಡುತ್ತಿಲ್ಲ, ಸಮಸ್ಯೆ ಇದೆ ಎನ್ನುತ್ತಾರೆ.ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವ ಕಾರ್ಯ ಸರಕಾರ ಮಾಡುತ್ತಿರುವುದು ತಪ್ಪಲ್ಲ, ಆದರೆ ಅರ್ಹ ಫಲಾನುಭವಿಗಳಿಗೆ ಯೋಜನೆ ಫಲ ತಲುಪಿಸುವಲ್ಲಿ ವಿಳಂಬ ಮಾಡಬಾರದು. ಕೆಲವೆಡೆ ಯಾವುದೇ ಮಾಹಿತಿ ನೀಡದೆ ಮಾಸಾಶನ ಸ್ಥಗಿತಗೊಳಿಸಲಾಗಿದೆ. ಸರಕಾರದಿಂದ ದೊರೆಯುವ ಪಿಂಚಣಿ ಮೇಲೆಯೇ ಬದುಕು ಸಾಗಿಸುತ್ತಿರುವ ಅನೇಕರು ನಿತ್ಯದ ಸಾಮಗ್ರಿಗಳಿಗಾಗಿ ಸಾಲ ಮಾಡಿ ಜೀವನ ನಡೆಸುವ ಪರಿಸ್ಥಿತಿಗೆ ತಲುಪಿದ್ದಾರೆ.











































