ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ವಿವಿಧ ದೇಶಗಳ ಮೇಲೆ ರಷ್ಯಾ ತೈಲ ಖರೀದಿ ಮೇಲಿನ ನಿರ್ಬಂಧಗಳ ವಿನಾಯ್ತಿಯನ್ನು ಮತ್ತೆ 30 ದಿನಗಳವರೆಗೆ ವಿಸ್ತರಿಸಿರುವುದಾಗಿ ಅಮೆರಿಕ ಘೋಷಿಸಿದೆ.ಭಾರತ ಸೇರಿದಂತೆ ಇತರ ದೇಶಗಳ ಮೇಲೆ ರಷ್ಯಾ ಇಂಧನ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಖರೀದಿಗೆ ವಿಧಿಸಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ಸಡಿಲಿಸಿ ಮತ್ತೆ 30 ದಿನಗಳವರೆಗೆ ವ್ಯವಹಾರ ಮುಂದುವರಿಸಲು ಅನುವು ಮಾಡಿಕೊಟ್ಟಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವ ಆಡಳಿತ ಶನಿವಾರ (ಎ.18) ತಿಳಿಸಿದೆ.ತನ್ನ ವೆಬ್‌ಸೈಟ್‌ನಲ್ಲಿ, ಅಮೆರಿಕ ಖಜಾನೆ ಇಲಾಖೆಯು, ಏ.18ರಿಂದ ಮೇ 16 ರವರೆಗೆ ಹಡಗುಗಳಲ್ಲಿ ತುಂಬಿದ ರಷ್ಯಾದ ತೈಲವನ್ನು ಖರೀದಿಸಲು ದೇಶಗಳಿಗೆ ಅನುಮತಿ ನೀಡಿರುವುದಾಗಿ ತಿಳಿಸಿದೆ.
ಮಾರ್ಚ್‌ನಲ್ಲಿ ನೀಡಲಾದ ಎರಡು ಹಿಂದಿನ 30 ದಿನಗಳ ಪರವಾನಗಿಗಳನ್ನು ನವೀಕರಿಸುವುದಿಲ್ಲ ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ ಕೇವಲ ಎರಡು ದಿನಗಳ ನಂತರ ಈ ನಿರ್ಧಾರ ಘೋಷಿಸಲಾಗಿದೆ.












































