ಉರಿಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ಮಧ್ಯಾಹ್ನ ವೇಳೆಯಲ್ಲಿ ಏರುವ ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಮಧ್ಯಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಟ್ಟ ಏರಿಕೆಗೆ ನಿರ್ಬಂಧ ಹೇರಲಾಗಿದೆ.ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದಲ್ಲಿರುವ ಅಂಜನಾದ್ರಿ ಬೆಟ್ಟದ ಮೇಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರುಶನದ ವೇಳೆಯನ್ನೂ ಬದಲಾಯಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಆದೇಶ ಹೊರಡಿಸಿದ್ದಾರೆ.
ಹೊಸ ವೇಳಾಪಟ್ಟಿಯಂತೆ, ಭಕ್ತರಿಗೆ ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4ರಿಂದ 6 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ ಸಮಯದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುವುದು ಈ ನಿರ್ಧಾರದ ಪ್ರಮುಖ ಕಾರಣವಾಗಿದೆ.ಇತ್ತೀಚಿನ ತಿಂಗಳಲ್ಲಿ ಸಂಭವಿಸಿದ ದುರ್ಘಟನೆಗಳು ಕೂಡ ಈ ಕ್ರಮಕ್ಕೆ ಕಾರಣವಾಗಿವೆ. ಕಳೆದ ಎರಡು ತಿಂಗಳಲ್ಲಿ ಇಬ್ಬರು ಭಕ್ತರು ಬೆಟ್ಟ ಏರಿ ಮೇಲ್ಬಾಗ ತಲುಪಿದ ಬಳಿಕ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ಈ ತಾತ್ಕಾಲಿಕ ನಿಯಮ ಜಾರಿಗೆ ತಂದಿದ್ದು, ಬಿಸಿಲಿನ ತೀವ್ರತೆ ಕಡಿಮೆಯಾಗುವವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












































