ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗದೆ ವಿಫಲವಾದ ಬೆನ್ನಲ್ಲೇ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಂಪುಟದ ಸಭೆಯಲ್ಲಿ ವಿರೋಧ ಪಕ್ಷಗಳ ವಿರುದ್ದ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.ಸಂವಿಧಾನ ತಿದ್ದುಪಡಿ ಮಸೂದೆಯ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶ ಹೊಂದಿದ್ದ ಈ ಪ್ರಸ್ತಾವನೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ. ಚರ್ಚೆ ಬಳಿಕ ನಡೆದ ಮತದಾನದಲ್ಲಿ 298 ಸದಸ್ಯರು ಪರವಾಗಿ ಮತ ಚಲಾಯಿಸಿದರೆ, 230 ಮಂದಿ ವಿರೋಧ ವ್ಯಕ್ತಪಡಿಸಿದರು.ಈ ಕುರಿತು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಮಹಿಳಾ ಮೀಸಲಾತಿಗೆ ಬೆಂಬಲ ನೀಡದ ವಿರೋಧ ಪಕ್ಷಗಳು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ದೇಶದ ಮಹಿಳೆಯರಿಗೆ ಉತ್ತರ ನೀಡಬೇಕಾದ ಜವಾಬ್ದಾರಿ ಅವರ ಮೇಲಿದೆ ಎಂದು ಮೂಲಗಳು ತಿಳಿಸಿವೆ.
ವಿರೋಧ ಪಕ್ಷಗಳ ನಿಲುವಿನಿಂದ ಮಹಿಳೆಯರು ನಿರಾಸೆಗೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟ ಅವರು, ಈ ವಿಷಯವನ್ನು ದೇಶದ ಪ್ರತಿಯೊಂದು ಹಳ್ಳಿಗೂ ತಲುಪಿಸುವಂತೆ ತಮ್ಮ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ಬೆಂಬಲ ಸೂಚಿಸಿದ್ದರೂ, ಸರ್ಕಾರದ ವಿಧಾನ ರಾಜಕೀಯ ಉದ್ದೇಶಗಳಿಂದ ಕೂಡಿದೆ ಎಂಬ ಆರೋಪ ಮಾಡಿದ್ದವು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವ ಕುಗ್ಗುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದವು.ಈ ಆತಂಕಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ ನರೇಂದ್ರ ಮೋದಿ, ಲೋಕಸಭಾ ಸದಸ್ಯರ ಸಂಖ್ಯೆಯನ್ನು 543ರಿಂದ 816ಕ್ಕೆ ಹೆಚ್ಚಿಸಿದ ನಂತರ ಯಾವುದೇ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದಕ್ಷಿಣ ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದು ಸಂಸತ್ತಿಗೆ ತಿಳಿಸಿದ್ದಾರೆ.ಮಹಿಳೆಯರಿಗೆ ಮೀಸಲಾತಿ ನೀಡುವ ಈ ಅವಕಾಶವನ್ನು ರಾಜಕೀಯವಾಗಿ ನೋಡುವುದಕ್ಕಿಂತ ರಾಷ್ಟ್ರದ ಹಿತದೃಷ್ಟಿಯಿಂದ ನೋಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿರುವುದು ಗಮನಾರ್ಹವಾಗಿದೆ.












































