ಬುಧವಾರ ರಾಜ್ಯಪಾಲರ ಭೇಟಿ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೇಟ್ರಿ ಕಳಗಂ (ಟಿವಿಕೆ)ನ ಶಾಸಕಾಂಗ ಪಕ್ಷದ ನಾಯಕನಾಗಿ ಸಿ.ಜೋಸೆಫ್ ವಿಜಯ್ ಮಂಗಳವಾರ ಆಯ್ಕೆಯಾಗಿದ್ದಾರೆ. ನೂತನ ಟಿವಿಕೆ ಶಾಸಕರ ಸಭೆ ಚೆನ್ನೈ ಸಮೀಪದ ಪಾನೈಯೂರ್‌ನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ನಡೆಯಿತು. ಸಭೆಯಲ್ಲಿ ವಿಜಯ್ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತೆಂದು ಪಲ್ಲವರಂ ಕ್ಷೇತ್ರದಿಂದ ಚುನಾಯಿತರಾಗಿರುವ ಜೆ. ಕಾಮಾಕ್ಷಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಜಯ್ ಅವರು ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅವರನ್ನು ಬುಧವಾರ ಭೇಟಿಯಾಗಲಿದ್ದು, ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆಂದು ಟಿವಿಕೆ ಪಕ್ಷದ ಮೂಲಗಳು ತಿಳಿಸಿವೆ.ಸುಮಾರು ಮೂರು ತಾಸುಗಳ ಕಾಲ ಶಾಸಕಾಂಗ ಪಕ್ಷದ ಸಭೆ ನಡೆಯಿತು ಹಾಗೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಎರಡು ಮೂರು ದಿನಗಳ ಕಾಲ ಚೆನ್ನೈನಲ್ಲಿ ಉಳಿದುಕೊಳ್ಳುವಂತೆ ಪಕ್ಷದ ಎಲ್ಲಾ ಶಾಸಕರಿಗೆ ಸೂಚಿಸಲಾಗಿದೆ.ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆಗೆ ಸರಕಾರ ರಚನೆಗೆ ಇನ್ನೂ 10 ಸ್ಥಾನಗಳ ಅಗತ್ಯವಿದೆ.
ಟಿವಿಕೆ ಕೇಂದ್ರ ಕಚೇರಿಗೆ ಆಗಮಿಸಿದ ವಿಜಯ್‌ಗೆ ಅವರಂತೆ ಮೊದಲ ಬಾರಿಗೆ ಆಯ್ಕೆಯಾದ ಹಲವಾರು ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತವನ್ನು ನೀಡಿದರು.ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತು ವಿಧಾನಸಭೆಯಲ್ಲಿ ಶಾಸಕರ ನಡೆನುಡಿಗಳ ಕುರಿತು ಚರ್ಚೆಗಳು ನಡೆದವು ಎಂದು ಶಾಸಕರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.ಸಭೆಗೂ ಮುನ್ನ ವಿಜಯ್ ಪಕ್ಷದ ಸೈದ್ದಾಂತಿಕ ನಾಯಕರಾದ ಪೆರಿಯಾರ್ ಇ.ವಿ.ರಾಮಸ್ವಾಮಿ,ಬಿ.ಆರ್.ಅಂಬೇಡ್ಕರ್, ಕೆ.ಕಾಮರಾಜ,ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರ ಪ್ರತಿಮೆಗಳಿಗೆ ಪುಷ್ಪ ನಮನಗಳನ್ನು ಸಲ್ಲಿಸಿದರು
ಸಭೆಯಲ್ಲಿ ಶಾಸಕರು ತಮ್ಮ ಗೆಲುವಿನ ಪ್ರಮಾಣಪತ್ರಗಳನ್ನು ವಿಜಯ್ ಅವರಿಗೆ ಸಲ್ಲಿಸುವ ಜೊತೆಗೆ ಸರಕಾರ ರಚನೆಗೆ ಕಾರ್ಯತಂತ್ರಗಳನ್ನು ಚರ್ಚಿಸಿದರು ಎಂದು ಟಿವಿಕೆ ನಾಯಕ ನಂಜಿಲ್ ಸಂಪತ್ ತಿಳಿಸಿದರು.ಟಿವಿಕೆಗೆ 10 ಸ್ಥಾನಗಳ ಕೊರತೆಯಿದ್ದುಸರಳ ಬಹುಮತವನ್ನು ಹೇಗೆ ಪಡೆಯಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸಂಪತ್,’ಅದನ್ನು ಪಕ್ಷದ ನಾಯಕರು ಸಾಧಿಸಲಿದ್ದಾರೆ. ಸಕಾರಾತ್ಮಕ ಫಲಿತಾಂಶದ ಬಗ್ಗೆ ನನಗೆ ವಿಶ್ವಾಸವಿದೆ. ನೀವು ಶೀಘ್ರವೇ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು ‘ ಎಂದು ಉತ್ತರಿಸಿದರು.ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದ ವಿಜಯ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗಳಿಸಿದ್ದರೆ,ಡಿಎಂಕೆ ಮತ್ತು ಎಡಿಎಂಕೆ ಅನುಕ್ರಮವಾಗಿ 59 ಮತ್ತು 47 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿವೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರಕಾರ ರಚನೆಗೆ 118 ಮಂದಿ ಶಾಸಕರ ಬೆಂಬಲದ ಅಗತ್ಯವಿದೆ.













































