ತಿರುವನಂತಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ಕುಲಪತಿಗಳ ವಿರುದ್ಧ ಕೇರಳಂ ಮುಖ್ಯಮಂತ್ರಿ ವಿ.ಡಿ ಸತೀಶನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು.ಭಾನುವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ, ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಮೂವರು ಕುಲಪತಿಗಳು ರಾಜ್ಯದ ಜನರ ಬಳಿ ಕ್ಷಮೆಯಾಚಿಸಬೇಕು’ ಎಂದಿದ್ದಾರೆ.ತಿರುವನಂತಪುರದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇರಳ ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ವಿಶ್ವ ವಿದ್ಯಾಲಯ, ಮಲಯಾಳ ವಿಶ್ವವಿದ್ಯಾಲಯದ ಕುಲಪತಿಗಳು ಪಾಲ್ಗೊಂಡಿದ್ದರು.
‘ಆರ್‌ಎಸ್‌ಎಸ್‌ನ ಕಾರ್ಯಕ್ರಮದಲ್ಲಿ ಕುಲಪತಿಗಳು ಭಾಗವಹಿಸಿದ್ದು ಕೇರಳದ ಶೈಕ್ಷಣಿಕ ಸಂಪ್ರದಾಯಕ್ಕೆ ವಿರುದ್ಧವಾದುದು ಮತ್ತು ಅವರ ಹುದ್ದೆಯ ಘನತೆಗೆ ತಕ್ಕುದಲ್ಲ’ ಎಂದು ಅವರು ಹೇಳಿದ್ದಾರೆ.“ಕೋಮುವಾದವನ್ನು ತೀವ್ರವಾಗಿ ಪ್ರಚೋದಿಸುವ ಭಾಗವತ್ ಅವರು ಭಾಷಣ ಮಾಡಿದ್ದ ಕಾರ್ಯಕ್ರಮದಲ್ಲಿ ಕುಲಪತಿಗಳು ಪಾಲ್ಗೊಂಡಿದ್ದನ್ನು ಅತ್ಯಂತ ಗಂಭೀರವಾಗಿ ನೋಡಲಾಗುತ್ತಿದೆ. ಅವರು ಗಂಭೀರವಾದ ತಪ್ಪೆಸಗಿದ್ದಾರೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
‘ತೀವ್ರ ಕೋಮುವಾದವನ್ನು ಪ್ರೇರೇಪಿಸುವ ಪ್ರಯತ್ನವನ್ನು ಯಾರೇ ಮಾಡಿದರೂ ಸಹಿಸಲಾಗದು’ ಎಂದು ಇದೇ ವೇಳೆ ಅವರು ಎಚ್ಚರಿಸಿದ್ದಾರೆ.
ಯುಡಿಎಫ್ ಸರ್ಕಾರ ಸಂಘಪರಿವಾರಕ್ಕೆ ಶರಣಾಗಿದೆಯೇ?:ಪಿಣರಾಯಿ
“ಆರ್‌ಎಸ್‌ಎಸ್ ಮುಖ್ಯಸ್ಥರಿದ್ದ ಕಾರ್ಯಕ್ರಮದಲ್ಲಿ ಕುಲಪತಿಗಳು ಭಾಗಿ ಆಗಿರುವುದನ್ನು ತೀವ್ರವಾಗಿ ಖಂಡಿಸಿರುವ ಕೇರಳಂ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಸಂಘಪರಿವಾರಕ್ಕೆ ಸರ್ಕಾರ ಶರಣಾದಂತಿದೆ’ ಎಂದು ಹರಿಹಾಯ್ದಿದ್ದಾರೆ.
‘ರಾಜ್ಯದ ಉನ್ನತ ಶಿಕ್ಷಣದಲ್ಲಿ ಸಂಘಪರಿವಾರದ ಪ್ರಭಾವವನ್ನು ವಿಸ್ತರಿಸುವ ಪ್ರಯತ್ನ ಇದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.’ಜಾತ್ಯತೀತ ಕೇರಳಂನಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ಅತ್ಯಂತ ಗಂಭೀರ ಮತ್ತು ಆತಂಕಕಾರಿ. ಸಂಘಪರಿವಾರದ ಕಾರ್ಯಸೂಚಿಗಳನ್ನು ವಿಶ್ವವಿದ್ಯಾಲಯಗಳಲ್ಲಿ ಹೇರುವ ಪ್ರಯತ್ನ ಇದು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ’ ಎಂದಿದ್ದಾರೆ.’ಉನ್ನತ ಶಿಕ್ಷಣ ಕ್ಷೇತ್ರದ ಮೇಲೆ ಆರ್‌ಎಸ್‌ಎಸ್ ತನ್ನ ಹಿಡಿತವನ್ನು ವಿಸ್ತರಿಸುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಯುಡಿಎಫ್ ಸರ್ಕಾರದ ಮುಖ್ಯಮಂತ್ರಿ ಮಂತ್ರಿ ಅಥವಾ ಕಾಂಗ್ರೆಸ್ ಸೇರಿದಂತೆ ಆಡಳಿತಾರೂಢ ಮೈತ್ರಿ ಕೂಟದ ಯಾವ ನಾಯಕರೂ ಇದನ್ನು ಖಂಡಿಸಿಲ್ಲ’ ಎಂದರು.’ಸಂಘಪರಿವಾರ ಮತ್ತು ಬಿಜೆಪಿಯನ್ನು ವಿರೋಧಿಸಲು ಯುಡಿಎಫ್ ನಾಯಕತ್ವ ಮತ್ತು ರಾಜ್ಯ ಸರ್ಕಾರ ಏಕೆ ಹಿಂಜರಿಯುತ್ತಿದೆ. ಜಾತ್ಯತೀತ ಮನಃಸ್ಥಿತಿಯ ಕೇರಳಂ ಜನರಿಗೆ ಇದು ಆತಂಕ ತಂದಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸರ್ಕಾರ ಸಂಘಪರಿವಾರಕ್ಕೆ ಶರಣಾದಂತಿದೆ’ ಎಂದು ಪಿಣರಾಯಿ ಟೀಕಿಸಿದರು.











































