ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾಚುನಾವಣೆಯ ಸೋಲಿನ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸುತ್ತಿರುವ ಮಮತಾ ಬ್ಯಾನರ್ಜಿ ನಡೆ ಈಗ ತೀವ್ರ ಕಾನೂನು ಮತ್ತು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ದೀದಿಯ ಈ ನಡವಳಿಕೆಯು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ(Mahesh Jethmalani) ಕಿಡಿಕಾರಿದ್ದಾರೆ.
ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಜೇಲ್ಮಲಾನಿ, ಚುನಾವಣಾ ಆಯೋಗವು ಫಲಿತಾಂಶವನ್ನು ಪ್ರಮಾಣೀಕರಿಸಿದ ಕ್ಷಣದಿಂದಲೇ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಮತ್ತು ಅವರು ಸದ್ಯ ಮುಖ್ಯಮಂತ್ರಿ ಕಚೇರಿಯನ್ನು ಅತಿಕ್ರಮಿಸಿದ್ದಾರೆ ಎಂದರು. ದೀದಿ ವಿನಮ್ರವಾಗಿ ರಾಜೀನಾಮೆ ನೀಡುವ ಬದಲು ಹಠಕ್ಕೆ ಬಿದ್ದು ಕುರ್ಚಿಗೆ ಅಂಟಿಕೊಳ್ಳುತ್ತಿರುವುದು ಸ್ವತಃ ತಮಗೆ ತಾವೇ ಮಾಡಿಕೊಳ್ಳುತ್ತಿರುವ ಅವಮಾನವಾಗಿದ್ದು, ರಾಜ್ಯಪಾಲರು ಯಾವುದೇ ಮುಲಾಜಿಲ್ಲದೆ ತಕ್ಷಣವೇ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಮಮತಾ ಬ್ಯಾನರ್ಜಿ ಕಚೇರಿಯನ್ನು ಖಾಲಿ ಮಾಡಲು ನಿರಾಕರಿಸಿದರೆ, ರಾಜ್ಯಪಾಲರು ಪೊಲೀಸರನ್ನು ಕಳುಹಿಸಿ ಅವರನ್ನು ಹೊರಹಾಕುವ ಅಧಿಕಾರ ಹೊಂದಿದ್ದಾರೆ ಎಂದು ಜೇಲ್ಮಲಾನಿ ವಿವರಿಸಿದ್ದು, ಯಾವುದೇ ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ರಾಜ್ಯಪಾಲರ ಇಚ್ಛೆಯ ಮೇರೆಗೆ ಅಧಿಕಾರದಲ್ಲಿರುತ್ತದೆ ಎಂಬ ಸಾಂವಿಧಾನಿಕ ನಿಯಮವನ್ನು ಅವರು ನೆನಪಿಸಿದ್ದಾರೆ. ಮೇ 7 ರಂದು ಬಂಗಾಳ ವಿಧಾನಸಭೆಯ ಅವಧಿ ಕೊನೆಗೊಳ್ಳಲಿದ್ದು, ಈ ಹಂತದಲ್ಲಿ ಮಮತಾ ಅವರ ಹಠಮಾರಿತನವು ಅವರನ್ನು ಸಾಂವಿಧಾನಿಕವಾಗಿ ವಜಾಗೊಳಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.ಚುನಾವಣೆಯಲ್ಲಿ ಬಿಜೆಪಿ ತನ್ನಿಂದ 100 ಸ್ಥಾನಗಳನ್ನು ಕದ್ದಿದೆ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಜೇಠಲಾನಿ, ನಿಮಗೆ ನಿಜಕ್ಕೂ ಪುರಾವೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಿ ಅರ್ಜಿ ಸಲ್ಲಿಸಿ, ಅಲ್ಲಿ ಈಗಾಗಲೇ ನಿಮಗೆ ಎರಡು ಬಾರಿ ಛೀಮಾರಿ ಹಾಕಲಾಗಿದೆ, ಮತ್ತೊಮ್ಮೆ ನಗೆಪಾಟಲಿಗೀಡಾಗಲು ಬಯಸುವುದಾದರೆ ನಿಮ್ಮ ಸಾಂವಿಧಾನಿಕ ಹಕ್ಕನ್ನು ಬಳಸಿ ಎಂದು ಕುಟುಕಿದ್ದಾರೆ.
ಕೂಡಲೇ ವಜಾಗೊಳಿಸಿ ಎಂದ ಹಿಮಂತ ಶರ್ಮಾ…ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಮಮತಾ ಬ್ಯಾನರ್ಜಿ ನಿಲುವನ್ನು ತೀವ್ರವಾಗಿ ಖಂಡಿಸಿದ್ದು, ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇಶವು ಯಾರ ವೈಯಕ್ತಿಕ ಇಚ್ಛೆಯಂತೆ ನಡೆಯುವುದಿಲ್ಲ ಮತ್ತು ರಾಜ್ಯಪಾಲರು ಒಂದು ನಿರ್ದಿಷ್ಟ ಸಮಯದವರೆಗೆ ಕಾಯ್ದು ನಂತರ ಅವರನ್ನು ವಜಾಗೊಳಿಸುವುದು ಅನಿವಾರ್ಯ ಎಂದು ಶರ್ಮಾ ಹೇಳಿದ್ದಾರೆ..
ಗಡಿಯಲ್ಲಿ ಬೇಲಿ ಹಾಕಲು ಬಿಡದ ಮತ್ತು ಕೇಂದ್ರದ ಯೋಜನೆಗಳಿಗೆ ಅಡ್ಡಿಪಡಿಸಿದ ಮಮತಾ ಬ್ಯಾನರ್ಜಿಗೆ ಈ ಫಲಿತಾಂಶವು ಬಹಳ ಹಿಂದೆಯೇ ಬರಬೇಕಿತ್ತು, ಬಂಗಾಳದ ಜನರು ದೀದಿಗೆ ದೀರ್ಘಕಾಲ ಅವಕಾಶ ನೀಡಿದ್ದರು, ಆದರೆ ಈಗ ಅವರು ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಿದ್ದಾರೆ, ಇದನ್ನು ಗೌರವಿಸಿ ಅಧಿಕಾರ ಬಿಟ್ಟು ತೆರಳುವುದು ಅವರಿಗೆ ಗೌರವ ತರುತ್ತದೆ ಎಂದು ಹಿಮಂತ ಬಿಸ್ವಾ ಶರ್ಮಾ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಬ್ಯಾನರ್ಜಿ ಭಬಾನಿಪುರ ಕ್ಷೇತ್ರದಲ್ಲಿ ಸೋತ ನಂತರವೂ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಮಾಡಿರುವ ಆರೋಪಗಳು ಅವರ ಹತಾಶೆಯನ್ನು ತೋರಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ರಾಜೀನಾಮೆ ನೀಡಲ್ಲ ಎಂದಿದ್ದ ದೀದಿ..ಈ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ನಿಕಟಪೂರ್ವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚುನಾವಣಾ ಆಯೋಗದ ಮೂಲಕ ಬಿಜೆಪಿ ನಮ್ಮನ್ನು ಅಧಿಕೃತವಾಗಿ ಸೋಲಿಸಿರಬಹುದು, ಆದರೆ ನೈತಿಕವಾಗಿ ನಾವೇ ಗೆದ್ದಿದ್ದೇವೆ ಎಂದು ವಾದಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೀದಿ, ತಾವು ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ತಮಗೆ ಯಾವುದೇ ಅಧಿಕಾರದ ಕುರ್ಚಿ ಇಲ್ಲದಿದ್ದರೂ ಸಾಮಾನ್ಯ ವ್ಯಕ್ತಿಯಾಗಿ ಹೋರಾಟ ಮುಂದುವರಿಸುವುದಾಗಿ ಮತ್ತು ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದಾಗಿ ತಿಳಿಸಿದ್ದಾರೆ. ದೀದಿಯ ಈ ನಿಲುವು ರಾಜ್ಯದಲ್ಲಿ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ













































