ಹಸ್ತಲಾಘವ ಮಾಡಿದ ‘ಕೈ’ ಬೆನ್ನಿಗೆ ಇರಿದಾಗ…: ಕಾಂಗ್ರೆಸ್ ನಿರ್ಧಾರಕ್ಕೆ DMK ಬೇಸರ

Picture of Savistara

Savistara

Bureau Report

ಚೆನ್ನೈ: ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ನಿರ್ಧಾರಕ್ಕೆ ಡಿಎಂಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನ್ನ ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಡಲಿದೆ ಎಂದು ಹೇಳಿದೆ.

ಟಿವಿಕೆ-ಕಾಂಗ್ರೆಸ್ ಮೈತ್ರಿ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ, ಹಸ್ತಲಾಘವ ಮಾಡಿದ ಕೈಯೇ ಇರಿದಾಗ ನಂಬಿಕೆಯು ಚೂರುಚೂರಾಗುತ್ತದೆ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷವು ಪಕ್ಷಾಂತರ ಮಾಡಿ ಟಿವಿಕೆಯನ್ನು ಬೆಂಬಲಿಸಲು ನಿರ್ಧರಿಸಿದೆ. ಇದಕ್ಕೆ ಅವರು ಕೊಡುವ ಕಾರಣ ನಮಗೆ ಸರಿಗಾಣುತ್ತಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ದೂರವಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಈ ನಿರ್ಧಾರವು ದೇಶದಾದ್ಯಂತ ಇತರ ಮೈತ್ರಿ ಪಾಲುದಾರರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.’ಫಲಿತಾಂಶ ಬಂದ ಕೇವಲ ಒಂದು ದಿನದೊಳಗೆ ಕಾಂಗ್ರೆಸ್ ಈ ಮಟ್ಟಿಗೆ ನಂಬಿಕೆದ್ರೋಹ ಎಸಗಿ ಬಹಿರಂಗವಾಗಿ ಜನಾದೇಶದ ವಿರುದ್ಧ ಹೋಗುವುದಾದರೆ, ಇದು ಅಖಿಲೇಶ್ ಯಾದವ್‌, ತೇಜಸ್ವಿ ಯಾದವ್, ಉದ್ಧವ್ ಠಾಕ್ರೆ ಮತ್ತು ಇತರರ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಬಹುದು?’ ಎಂದು ಪ್ರಶ್ನಿಸಿದ್ದಾರೆ.

‘ಟಿವಿಕೆಗೆ ಬಹುಮತದ ಗಡಿ ದಾಟಲು 10 ಸ್ಥಾನಗಳ ಅಗತ್ಯವಿದೆ. 47 ಸ್ಥಾನಗಳನ್ನು ಹೊಂದಿರುವ ಎಐಎಡಿಎಂಕೆ ಬೇಷರತ್‌ ಬೆಂಬಲ ನೀಡಲು ಸಿದ್ಧವಾಗಿದೆ. ನೀವು ವಿಜಯ್ ಅವರ ಸ್ಥಾನದಲ್ಲಿದ್ದರೆ ಯಾರ ಮಾತನ್ನು ಕೇಳುತ್ತೀರಿ? ಐದು ಸ್ಥಾನ ಹೊಂದಿರುವವರನ್ನೋ ಅಥವಾ 47 ಸ್ಥಾನ ಹೊಂದಿರುವವರನ್ನೋ? ಕಾಂಗ್ರೆಸ್ ಅತ್ಯಂತ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ’ ಎಂದು ತಿಳಿಸಿದ್ದಾರೆ.

ಇಂಡಿಯಾ ಒಕ್ಕೂಟಕ್ಕೆ ಡಿಎಂಕೆ ಇನ್ನೂ ಬೆಂಬಲ ನೀಡುತ್ತದೆಯೇ? ಎಂಬ ಪ್ರಶ್ನೆಗೆ, ‘ಅದೊಂದು ದೊಡ್ಡ ಪ್ರಶ್ನೆ ಮತ್ತು ಅದಕ್ಕೆ ಪಕ್ಷದ ನಾಯಕತ್ವವೇ ಉತ್ತರಿಸಲಿದೆ’ ಎಂದು ಹೇಳಿದ್ದಾರೆ.ಸೋಮವಾರ ಪ್ರಕಟವಾದ ತಮಿಳುನಾಡು ವಿಧಾನಸಭಾ ಫಲಿತಾಂಶದಲ್ಲಿ 108 ಸ್ಥಾನಗಳನ್ನು ಗೆದ್ದು ಟಿವಿಕೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 5, ಡಿಎಂಕೆ 59, ಎಐಎಡಿಎಂಕೆ 47, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಐ(ಎಂ) 2 ಹಾಗೂ ವಿಸಿಕೆ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಪಕ್ಷಗಳು ತಲಾ 1 ಸ್ಥಾನ ಪಡೆದುಕೊಂಡಿವೆ.

ಬಹುಮತಕ್ಕೆ ಟಿವಿಕೆಗೆ 10 ಸ್ಥಾನಗಳ ಕೊರತೆ ಕಂಡು ಬಂದಿದ್ದು, ಕಾಂಗ್ರೆಸ್ ಸೇರಿ ಇತರ ಪಕ್ಷಗಳ ಬೆಂಬಲವನ್ನು ಕೋರಿತ್ತು.ಟಿವಿಕೆ ಮನವಿಗೆ ಕಾಂಗ್ರೆಸ್ ಸ್ಪಂದಿಸಿದ್ದು, ಮೈತ್ರಿ ಒಪ್ಪಿಗೆ ಸೂಚಿಸಿರುವುದಾಗಿ ಬುಧವಾರ ಘೋಷಿಸಿದೆ.

[t4b-ticker]
error: Content is protected !!