ಬೆಂಗಳೂರು: “ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮುಂದೆ ಪಕ್ಷ ತೀರ್ಮಾನ ಮಾಡಲಿದೆ. ವಿಜಯೇಂದ್ರ ಯುವಕರಿದ್ದಾರೆ, ಈಗ ಅವರ ಜೊತೆಯಲ್ಲಿ ಪಕ್ಷ ಸಂಘಟನೆ ನಡೆಯುತ್ತಿದೆ” ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಈಗ ಕೆಲಸ ಮಾಡುತ್ತಿದ್ದೇವೆ. ಮುಂದೆ ಪಕ್ಷ ತೀರ್ಮಾನ ಮಾಡುತ್ತದೆ. ಇದು ಪಕ್ಷದ ಆಂತರಿಕ ವಿಚಾರ” ಎಂದರು.
“ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನಾನು ನಿಯುಕ್ತಿಗೊಂಡಿದ್ದೇನೆ. ಅಧ್ಯಕ್ಷರ ಜೊತೆ ಪದಾಧಿಕಾರಿಗಳ ಸಭೆ ಮಾಡಿದ್ದೇವೆ. ಸಂಘಟನೆ ಬಗ್ಗೆ ಚರ್ಚಿಸಿದ್ದೇವೆ. ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಒಳ್ಳೆಯ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಯಡಿಯೂರಪ್ಪರ ಮಾರ್ಗದರ್ಶನ ಸಿಕ್ಕಿದೆ” ಎಂದು ತಿಳಿಸಿದರು.”ಕಾಂಗ್ರೆಸ್ ದುರಾಡಳಿತದಿಂದ ರಾಜ್ಯಕ್ಕೆ ಮುಕ್ತಿ ಸಿಗಬೇಕಿದೆ. ಕಳೆದ ಮೂರ್ನಾಲ್ಕು ವರ್ಷದಿಂದಲೂ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನಸಾಮಾನ್ಯರ ಬದುಕನ್ನು ಸರ್ಕಾರ ನೋಡುತ್ತಿಲ್ಲ. ಸರ್ಕಾರ ಕೇವಲ ಲೂಟಿಯಲ್ಲಿ ತೊಡಗಿದೆ. ಈಗ ದೊಡ್ಡ ಪ್ರಮಾಣದಲ್ಲಿ ಹಾಲಿನ ದರ ಏರಿಸಿದೆ. ಬಡವರ ಹಿತದ ಬಗ್ಗೆ ಕಾಳಜಿ ಇಲ್ಲ. ಕೇವಲ ತಮ್ಮ ನಾಯಕರ ಹಿತ, ಗಾಂಧಿ ಪರಿವಾರದ ಬಗ್ಗೆ ಅವರಿಗೆ ಚಿಂತೆ. ನಾವು ಜನಪರ ವಿಚಾರ ಇಟ್ಕೊಂಡು ಜನರ ಮುಂದೆ ಹೋಗುತ್ತೇವೆ. 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶ ಇಟ್ಟುಕೊಂಡು ಕೆಲಸ ಮಾಡುತ್ತೇವೆ” ಎಂದರು.
पार्टी के वरिष्ठ नेता एवं कर्नाटक के पूर्व मुख्यमंत्री माननीय श्री बी.एस. येदियुरप्पा जी से उनके आवास पर शिष्टाचार भेंट की तथा प्रदेश से जुड़े विभिन्न सामाजिक एवं राजनीतिक विषयों पर उनका मार्गदर्शन प्राप्त किया।
— Harish Dwivedi (@HarishD_BJP) November 3, 2026
इस अवसर पर कर्नाटक भाजपा के प्रदेश अध्यक्ष श्री बी.वाई. विजयेंद्र… pic.twitter.com/F3ommNImIK
ಎಸ್ಐಆರ್ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿ, “ಎಸ್ಐಆರ್ ಮೋದಿ ಕಾಲದಲ್ಲಿ ಮಾತ್ರ ಆಗಿಲ್ಲ, ನೆಹರೂ, ಇಂದಿರಾ ಗಾಂಧಿ ಕಾಲದಿಂದಲೂ ನಡೆದಿದೆ. ಮೃತಪಟ್ಟವರು, ಡಬಲ್ ಐಡಿ ಎಲ್ಲವನ್ನೂ ಸರಿ ಮಾಡಲು ಎಸ್ಐಆರ್ ಮಾಡಲಾಗುತ್ತಿದೆ. ಕಾಂಗ್ರೆಸ್ ಸೋತಾಗ ತಮ್ಮ ತಪ್ಪಿನ ಕಾರಣ ಹುಡುಕಬೇಕು. ಆದರೆ ಕಾಂಗ್ರೆಸ್ ಯಾವಾಗಲೂ ಬಿಜೆಪಿ, ಎಲೆಕ್ಷನ್, ಇವಿಎಂ, ಸುಪ್ರಿಂ ಕೋರ್ಟ್ ಎಲ್ಲದರ ವಿರುದ್ಧ ಮಾತನಾಡುತ್ತದೆ. ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲ್ಲ. ಕಾಂಗ್ರೆಸ್ಗೆ ಗಾಂಧಿ ಪರಿವಾರವೇ ಸಂವಿಧಾನ, ಸುಪ್ರಿಂ ಕೋರ್ಟ್ ಎಲ್ಲವೂ ಆಗಿದೆ. ದೇಶದ ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಅಸ್ಸಾಂ, ತ್ರಿಪುರಾ, ಕರ್ನಾಟಕದ ಎಂಎಲ್ಸಿ ಚುನಾವಣೆಯಲ್ಲಿ ಎನ್‌ಡಿಎಗೆ ಗೆಲುವಾಗಿದೆ. ಇದೇ ಸಂದೇಶ ಇಟ್ಕೊಂಡು ನಾವು ಮುಂದುವರೆಯುತ್ತೇವೆ. ಕಾಂಗ್ರೆಸ್ ದುರಾಡಳಿತವನ್ನು ಜನರ ಮುಂದಿಡುತ್ತೇವೆ. ರೈತ, ಬಡವರ ಬದುಕಿನ ಮೇಲೆ ಕಾಂಗ್ರೆಸ್ ಅನಾಚಾರ ಮಾಡಿದೆ” ಎಂದು ಟೀಕಿಸಿದರು.ಈಗಂತೂ ಮೈತ್ರಿ ನಡೆಯುತ್ತಿದೆ, ಮುಂದಿನದು ಪಕ್ಷದ ತೀರ್ಮಾನ: ರಾಜ್ಯದಲ್ಲಿ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡುತ್ತಾ, “ಜೆಡಿಎಸ್ ಮೈತ್ರಿ ಇದೆ. ಮುಂದೆಯೂ ನಡೆಯುತ್ತದೆ. ಮೈತ್ರಿ ಬಗ್ಗೆ ನಾನು ಮಾತಾಡಲು ಸೂಕ್ತ ವ್ಯಕ್ತಿ ಅಲ್ಲ. ಪಕ್ಷ ತೀರ್ಮಾನ ಮಾಡುತ್ತದೆ. ಮೈತ್ರಿ ಕುರಿತು ಹೈಕಮಾಂಡ್ ನಿರ್ಧರಿಸುತ್ತೆ. ಈಗಂತೂ ಮೈತ್ರಿ ನಡೆಯುತ್ತಿದೆ” ಎಂದರು.


































