‘ಸ್ಟಿಂಗ್‌’ಗೆ ಎಚ್‌ಡಿಕೆ ಮನೆ ಬಳಕೆ, ಆರೋಪಿಗಳಿಂದ ಮಾಹಿತಿ: ಸೀಮಾಂತ್ ಕುಮಾರ್

Picture of Savistara

Savistara

Bureau Report

ಬೆಂಗಳೂರು: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯವಿರುದ್ಧ ನಡೆದ ‘ಸ್ಟಿಂಗ್’ ಕಾರ್ಯಾಚರಣೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ‘ಸ್ಟಿಂಗ್’ ವಿಡಿಯೊ ಅಪ್‌ಲೋಡ್ ಮಾಡಲು ಬಳಸಿದ ಮೊಬೈಲ್ ಫೋನ್ ಅನ್ನು ನವದೆಹಲಿಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲೇ ಆರೋಪಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಈ ಸಂಬಂಧ ಅಕ್ಟೋಬರ್ 24ರಂದು ಸಿಸಿಬಿ ಪೊಲೀಸರು ನವದೆಹಲಿಯಲ್ಲಿ ಆರೋಪಿ ರಿತೇಶ್ ಪಾಂಡೆ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಈ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ.’ಪ್ರಕರಣದಲ್ಲಿ ರಿತೇಶ್‌ ಪಾಂಡೆ ಮಾತ್ರವಲ್ಲದೆ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಎಂಬವರು ಭಾಗಿಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ವಿನೋದ್ ಶರ್ಮಾ ಮತ್ತು ರಿತೇಶ್ ಪಾಂಡೆ ನವದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ಮೊಬೈಲ್ ಫೋನ್‌ಗಳನ್ನು ಖರೀದಿ ಮಾಡಿದ್ದರು. ಖರೀದಿಸಿದ ಫೋನ್‌ಗಳನ್ನು ತಂದು ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲೇ ಪ್ರಜ್ವಲ್ ಪ್ರಸಾದ್‌ಗೆ ಹಸ್ತಾಂತರಿಸಲಾಗಿತ್ತು ಎಂಬುದನ್ನು ವಿಚಾರಣೆ ವೇಳೆ ರಿತೇಶ್ ಪಾಂಡೆ ತಿಳಿಸಿದ್ದಾರೆ’ ಎಂದು ಸಿಂಗ್ ಮಾಹಿತಿ ನೀಡಿದರು.ಹಣಕಾಸು ವಹಿವಾಟು: ‘ಪ್ರಕರಣದ ಮುಂದಿನ ತನಿಖೆಗಾಗಿ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.

ಆದರೆ ಅವರಿಬ್ಬರೂ ತಲೆಮರೆಸಿ ಕೊಂಡಿದ್ದು, ಬಂಧನದಿಂದ ಪಾರಾಗಲು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವುದು ಗೊತ್ತಾಗಿದೆ’ ಎಂದರು.

‘ರಿತೇಶ್ ಪಾಂಡೆ ಹಾಗೂ ತಲೆಮರೆಸಿಕೊಂಡಿರುವ ಪ್ರಜ್ವಲ್ ಪ್ರಸಾದ್ ನಡುವೆ ಹಲವು ಬಾರಿ ಹಣಕಾಸು ವಹಿವಾಟು ನಡೆದಿರುವುದನ್ನು ಸಹ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಮೂವರು ಯಾರ ಸೂಚನೆಯ ಮೇರೆಗೆ ಈ ಕೃತ್ಯ ಎಸಗಿದ್ದಾರೆ ಮತ್ತು ಹಿಂದಿರುವ ಪ್ರಭಾವಿ ಕೈಗಳು ಯಾರದ್ದು ಎಂಬ ನಿಟ್ಟಿನಲ್ಲಿ ವಿಚಾರಣೆ ಮುಂದುವರಿದಿದೆ’ ಎಂದು ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.’ಈಮೂವರೂ ಕುಮಾರಸ್ವಾಮಿ ಅವರ ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಸಂಪರ್ಕ ಹೊಂದಿದ್ದರು. ಪ್ರಜ್ವಲ್ ಪ್ರಸಾದ್‌ ಮಾಧ್ಯಮ ಸಲಹೆಗಾರರಾಗಿದ್ದು, ಬೆಂಗಳೂರಿನಲ್ಲಿ ಹಲವು ವರ್ಷ ಖಾಸಗಿ ವಾಹಿನಿಯಲ್ಲಿ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಹಿನ್ನೆಲೆ: ದೆಹಲಿಯಲ್ಲೇ ಕುಳಿತು ರಿತೀಶ್ ಪಾಂಡೆ ‘ಸ್ಟಿಂಗ್’ ವಿಡಿಯೊ ಅಪ್‌ಲೋಡ್ ಮಾಡಿದ್ದರು. ತಮಗೆ ತಲುಪಿದ್ದ ಪೆನ್‌ಡ್ರೈವ್ ಅನ್ನು ಒಟಿಜಿ ಅಡಾಪ್ಟರ್ ಮೂಲಕ ಮೊಬೈಲ್‌ಗೆ ಜೋಡಿಸಿ, ಅದರಲ್ಲಿದ್ದ ‘ಸ್ಟಿಂಗ್’ ವಿಡಿಯೊವನ್ನು ವೀಕ್ಷಿಸಿದ್ದರು. ಬಳಿಕ, ಅದೇ ಮೊಬೈಲ್‌ಗೆ ವೈ-ಫೈ ಮೂಲಕ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿ, ‘ಕರ್ನಾಟಕ ಹನಿಟ್ರ್ಯಾಪ್’ ಹೆಸರಿನಲ್ಲಿ ಯೂಟ್ಯೂಬ್ ಖಾತೆ ತೆರೆದಿದ್ದರು.ಆ ಖಾತೆಯ ಮೂಲಕವೇ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಕಾರ್ಯಾಚರಣೆ ವಿಡಿಯೊ ಅಪ್‌ಲೋಡ್ ಮಾಡಿದ್ದರು. ಇದಕ್ಕಾಗಿ ₹50 ಸಾವಿರ ಹಣ ಪಡೆದಿರುವುದು ತನಿಖೆಯಿಂದ ದೃಢಪಟ್ಟಿತ್ತು. ಸದ್ಯ ರಿತೇಶ್ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.ಅವಹೇಳನಕಾರಿ ಹಾಗೂ ಮಾನಹಾನಿಕರ ವಿಡಿಯೊವೊಂದನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅವರು ಅಕ್ಟೋಬ‌ರ್ 6ರಂದು ನಗರದ ಸೈಬ‌ರ್ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ ತನಿಖೆ ನಡೆಯುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ‘ಸ್ಟಿಂಗ್’ ಕಾರ್ಯಾಚರಣೆ ಎನ್ನಲಾದ ವಿಡಿಯೊದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಕಟ್ಟುಕಥೆಯ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ವಿಡಿಯೊ ಸೃಷ್ಟಿಸಲಾಗಿದೆ’ ಎಂದು ಸಿಸಿಬಿ ಮೂರು ದಿನಗಳ ಹಿಂದೆ ಹೇಳಿಕೆ ನೀಡಿತ್ತು.

ಹಲವರ ವಿಚಾರಣೆ, ಹೇಳಿಕೆ ದಾಖಲು: ಪ್ರಕರಣ ಸಂಬಂಧ ತನಿಖೆನಡೆಸುತ್ತಿರುವ ನಗರದ ಕೇಂದ್ರ ಸೈಬರ್ ಅಪರಾಧ ವಿಭಾಗದ ಪೊಲೀಸರು, ಕಾಂಗ್ರೆಸ್ ನಾಯಕಿ ಕೃಪಾ ಆಳ್ವ, ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ, ಜೆಡಿಎಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಮೋಹನ್ ಗೌಡ ಮತ್ತು ಚಂದನ್ ಸೇರಿ ಹಲವರ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ.

News Updates

ಸುಳ್ಯ : ಮುರುಳ್ಯ ರಕ್ತೇಶ್ವರಿ ದೇಗುಲ ವಿವಾದಕ್ಕೆ ಬಿಗ್ ಟ್ವಿಸ್ಟ್ – ವಕ್ಫ್ ಆದೇಶ ವಿರುದ್ಧ ಸಿಡಿದೆದ್ದ ಹಿಂದೂ ಸಮಾಜ | ಮುರುಳ್ಯದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ | ದ.ಕ. ಸಂಸದ ಕ್ಯಾ. ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿ

[t4b-ticker]
error: Content is protected !!