ಬೆಂಗಳೂರು: ಬೈಂದೂರು ಕ್ಷೇತ್ರದ ಸಾಗುವಳಿ ಭೂಮಿ ಮಂಜೂರಾತಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ್ ಪೂಜಾರಿ ಅಧ್ಯಕ್ಷತೆಯಲ್ಲಿ ‘ಹೆಚ್ಚುವರಿ ಸಮಿತಿ’ ರಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ಪೀಠ, ಈ ತೀರ್ಪು ನೀಡಿದೆ.
“ಸಾರ್ವಜನಿಕ ಅಧಿಕಾರವನ್ನು ಜನರಿಗೆ ಸೇವೆ ಸಲ್ಲಿಸಲು ನೀಡಲಾಗಿರುತ್ತದೆಯೇ ಹೊರತು ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಆಶ್ರಯ ನೀಡಲು ಅಲ್ಲ ಮತ್ತು ಅಧಿಕಾರ ಬುಟ್ಟಿಕೊಡಲು ಯಾವುದೇ ವ್ಯಕ್ತಿಯೊಬ್ಬರ ಬಯಕೆ, ಸಾರ್ವಜನಿಕ ಅರ್ಹತೆಯ ಗತಿಯನ್ನು ನಿರ್ಧರಿಸಲು ಅವಕಾಶ ನೀಡಬಾರದು” ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ಭೂ ಕಂದಾಯ ನಿಯಮ 108-ಇ(1)(ಎ)ರಡಿ ಬರುವ ‘ಹೆಚ್ಚುವರಿ ಸಮಿತಿ’ಯ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸಬೇಕು. ಮಾರ್ಗಸೂಚಿ ರಚಿಸುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.ಸೂಕ್ತ ಕಾನೂನು ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ, ಸಂಬಂಧಿತ ಅನುಭವ, ಪ್ರಾಮಾಣಿಕತೆ, ಗೌಪ್ಯತೆ ಕಾಪಾಡುವ ಗುಣ ಮತ್ತು ದೋಷರಹಿತ ನಡವಳಿಕೆ ಮುಂತಾದ ಅಂಶಗಳು ಸೇರಿರಬೇಕು ಎಂದು ತಿಳಿಸಿದೆ.







































