ಪುತ್ತೂರು, ನ. 2: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತದ ಬಗ್ಗೆ ಪ್ರಶ್ನಿಸಿದ್ದ ಸಂರಕ್ಷಣಾ ವೇದಿಕೆಯ ವಿರುದ್ಧ ಶಾಸಕರು ನೀಡಿರುವ ಹೇಳಿಕೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ನೇರ ಪ್ರಶ್ನೆಗಳನ್ನು ಎತ್ತಿದೆ.ಮಾಧ್ಯಮಗಳ ಮುಂದೆ ದಾಖಲೆಗಳಿಲ್ಲದೆ ಮಾತನಾಡುವವರಿಗೆ ಅವಕಾಶ ನೀಡಬಾರದು ಎಂದು ಶಾಸಕರು ಹೇಳಿದ್ದಾರೆ. ಆದರೆ ನಾವು ಈ ಹಿಂದೆಯೇ ಹಲವು ವಿಚಾರಗಳನ್ನು ಸೂಕ್ತ ದಾಖಲೆಗಳ ಸಮೇತವೇ ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿದ್ದೇವೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ನಮ್ಮನ್ನೇ ಗುರಿಯಾಗಿಸಿಕೊಂಡು ಮಾತನಾಡುವುದು ಎಷ್ಟು ಸಮಂಜಸ ಎಂದು ವೇದಿಕೆ ಪ್ರಶ್ನಿಸಿದೆ.
ದೇವಸ್ಥಾನದ ಆಡಳಿತದಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಎಂಬ ವಿಶ್ವಾಸವಿದ್ದರೆ, ದೇವಸ್ಥಾನಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳು, ಟೆಂಡರ್ ದಾಖಲೆಗಳು, ವೋಚರ್‌ಗಳು, ಖರ್ಚು-ವೆಚ್ಚಗಳ ವಿವರಗಳು ಹಾಗೂ ಅನುಮತಿ ಪತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಆಗ ತಮ್ಮ ಪ್ರಾಮಾಣಿಕತೆ ಮತ್ತು ಆಡಳಿತದ ಪಾರದರ್ಶಕತೆ ಭಕ್ತಾದಿಗಳಿಗೆ ತಾನಾಗಿಯೇ ತಿಳಿಯುತ್ತದೆ ಎಂದು ವೇದಿಕೆ ಆಗ್ರಹಿಸಿದೆ.
ಸಂರಕ್ಷಣಾ ವೇದಿಕೆಯವರು ಯಾರು, ಪ್ರಶ್ನೆ ಮಾಡಲು ಇವರಿಗೇನು ಅಧಿಕಾರವಿದೆ ಎಂದು ಶಾಸಕರು ಪ್ರಶ್ನಿಸಿರುವುದು ಆಶ್ಚರ್ಯಕರ. ದೇವಸ್ಥಾನವು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ, ಅದು ಸಾವಿರಾರು ಭಕ್ತರ ಶ್ರದ್ಧೆ, ನಂಬಿಕೆ ಮತ್ತು ಭಕ್ತಿಯ ಕೇಂದ್ರ. ದೇವಸ್ಥಾನದ ಆಸ್ತಿ, ಆಡಳಿತ, ಧಾರ್ಮಿಕ ಪರಂಪರೆ ಹಾಗೂ ಭಕ್ತರ ಹಿತಾಸಕ್ತಿಯ ಬಗ್ಗೆ ಪ್ರಶ್ನಿಸುವುದು ಪ್ರತಿಯೊಬ್ಬ ಭಕ್ತನಿಗೂ ಇರುವ ನೈತಿಕ ಹಕ್ಕು. ಅದಕ್ಕಾಗಿ ವಿಶೇಷ ಅಧಿಕಾರ ಪತ್ರದ ಅಗತ್ಯವಿಲ್ಲ ಎಂದು ವೇದಿಕೆ ಸ್ಪಷ್ಟಪಡಿಸಿದೆ.ದೇವಸ್ಥಾನಕ್ಕೆ ಶಾಲು ಹಾಕಿಕೊಂಡು ಬಂದು ಊಟ ಮಾಡಿ ಹೋಗುವವರನ್ನು ಸಮಿತಿಗೆ ಸೇರಿಸಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಶಾಸಕರು ನೀಡಿರುವ ಹೇಳಿಕೆಯಲ್ಲಿ ಸಂರಕ್ಷಣಾ ವೇದಿಕೆಯನ್ನು ಪರೋಕ್ಷವಾಗಿ ಗುರಿಯಾಗಿಸಿರುವುದು ವಿಷಾದನೀಯ ಎಂದು ವೇದಿಕೆ ತಿಳಿಸಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿತಿಂಗಳು ನಡೆಯುವ ಅನ್ನದಾಸೋಹಕ್ಕೆ ಅಗತ್ಯವಿರುವ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳನ್ನು ಭಕ್ತಾದಿಗಳಿಂದ ಸಂಗ್ರಹಿಸಿ ದೇವಸ್ಥಾನಕ್ಕೆ ತಲುಪಿಸುವ ಕಾರ್ಯವನ್ನು ತಮ್ಮ ಸದಸ್ಯರು ನಿರಂತರವಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ದೇವರ ಸೇವೆ ಎಂಬ ಭಾವನೆಯಿಂದ ಮಾಡುತ್ತಿದ್ದಾರೆ ಎಂದು ವೇದಿಕೆ ತಿಳಿಸಿದೆ.ದೇವಸ್ಥಾನದ ಅಭಿವೃದ್ಧಿಯನ್ನು ತಾವು ವಿರೋಧಿಸುತ್ತಿಲ್ಲ, ಅಭಿವೃದ್ಧಿ ಪಾರದರ್ಶಕವಾಗಿರಬೇಕು, ಧಾರ್ಮಿಕ ಪರಂಪರೆ ಉಳಿಯಬೇಕು, ಆಸ್ತಿ ಸಂರಕ್ಷಿಸಲ್ಪಡಬೇಕು ಮತ್ತು ಭಕ್ತರ ಭಾವನೆಗಳಿಗೆ ಗೌರವ ಸಿಗಬೇಕು ಎಂಬುದಷ್ಟೇ ತಮ್ಮ ನಿಲುವು ಎಂದು ವೇದಿಕೆ ಹೇಳಿದೆ.
ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ಅದು ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಹಿತಾಸಕ್ತಿ, ಆಸ್ತಿ ಸಂರಕ್ಷಣೆ, ಧಾರ್ಮಿಕ ಪರಂಪರೆ ಮತ್ತು ಭಕ್ತರ ಹಕ್ಕುಗಳಿಗಾಗಿ. ಭಕ್ತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಪ್ರಶ್ನೆಗಳಿಗೆ ಉತ್ತರಿಸುವುದು ಜವಾಬ್ದಾರಿಯೇ ಹೊರತು ಪ್ರಶ್ನಿಸುವವರನ್ನು ಅವಮಾನಿಸುವುದಲ್ಲ ಎಂದು ವೇದಿಕೆ ಹೇಳಿಕೆಯಲ್ಲಿ ತಿಳಿಸಿದೆ.







































