ಸೇನಾ ತರಬೇತಿಗೂ ಧರ್ಮದ ಮುದ್ರೆ ಒತ್ತಿದ ಕಾಂಗ್ರೆಸ್ ಸರ್ಕಾರ : ಕ್ಯಾ. ಬ್ರಿಜೇಶ್ ಚೌಟ ಕಿಡಿ- ದೇಶಭಕ್ತಿ, ಶಿಸ್ತು ಮತ್ತು ಸೇನಾ ತರಬೇತಿಗೂ ಧರ್ಮದ ಅರ್ಹತೆ ನಿಗದಿಪಡಿಸುವುದು ಅಕ್ಷಮ್ಯ ಎಂದ ಸಂಸದ

Picture of Savistara

Savistara

Bureau Report

ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿ ದೇಶದ ರಕ್ಷಣೆಗೆ ಸಂಬಂಧಿಸಿದ ಸೇನಾ ತರಬೇತಿಗೂ ವ್ಯಾಪಿಸಿರುವುದು ದುರಂತ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಕಿಡಿಕಾರಿದ್ದಾರೆ.ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ 60 ದಿನಗಳ ಸೇನಾ ತರಬೇತಿ ನೀಡಲು ಟೆಂಡರ್ ಆಹ್ವಾನಿಸಿರುವುದು ರಾಜ್ಯ ಸರ್ಕಾರದ ತಾರತಮ್ಯದ ನೀತಿಗೆ ಮತ್ತೊಂದು ನಿದರ್ಶನ. ಸೇನಾ ತರಬೇತಿ ಎನ್ನುವುದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಸೌಲಭ್ಯವಲ್ಲ. ಅದು ಶಿಸ್ತು, ದೇಶಭಕ್ತಿ, ದೈಹಿಕ ಸಾಮರ್ಥ್ಯ, ರಾಷ್ಟ್ರೀಯ ಕರ್ತವ್ಯಪ್ರಜ್ಞೆ ಮತ್ತು ರಾಷ್ಟ್ರದ ಭದ್ರತೆಯ ಬಗ್ಗೆ ಗೌರವ ಬೆಳೆಸುವ ಪ್ರಕ್ರಿಯೆ. ಭಾರತೀಯ ಸೇನೆಗೆ ಸೇರುವ ಕನಸು ಕಾಣುವ ಯುವಕರಿಗೆ ಧರ್ಮದ ಆಧಾರದಲ್ಲಿ ಅರ್ಹತೆ ನಿಗದಿಪಡಿಸುವ ಮನಸ್ಥಿತಿ ಸರ್ಕಾರಕ್ಕೆ ಹೇಗೆ ಬಂತು? ಹಾಗಾದರೆ ದೇಶಕ್ಕಾಗಿ ಸೇವೆ ಸಲ್ಲಿಸುವ ಆಸೆ ಹೊಂದಿರುವ ಇತರ ಧರ್ಮಗಳ ಯುವಕರಿಗೆ ಈ ಸರ್ಕಾರದ ಮುಂದೆ ಯಾವ ಸ್ಥಾನವಿದೆ ಎಂದು ಕ್ಯಾ. ಚೌಟ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರದಲ್ಲಿ ದೇಶಭಕ್ತಿಗೂ ಧರ್ಮದ ಬಣ್ಣವಿದೆಯೇ? ಸೇನಾ ಸಮವಸ್ತ್ರ ಧರಿಸುವ ಕನಸಿಗೂ ಧಾರ್ಮಿಕ ಅರ್ಹತೆ ಬೇಕೇ? ರಾಷ್ಟ್ರದ ಏಕತೆ, ಅಖಂಡತೆ ಮತ್ತು ಭದ್ರತೆಯ ವಿಚಾರದಲ್ಲಿ ಜಾತಿ, ಧರ್ಮ ನೋಡದ ಭಾರತೀಯ ಸೇನೆಯ ಹೆಸರಿನಲ್ಲಿ ನಡೆಯುವ ತರಬೇತಿಗೆ ಮಾತ್ರ ಧಾರ್ಮಿಕ ಗೋಡೆ ಕಟ್ಟುವುದು ಯಾವ ರೀತಿಯ ಜಾತ್ಯತೀತತೆ‌ ಎಂದವರು ಅಸಮಾಧಾನ ಹೊರಹಾಕಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಯಾವುದೇ ತರಬೇತಿ ಕಾರ್ಯಕ್ರಮ ನಡೆಸುವುದಾದರೆ, ಅರ್ಹತೆ ಹೊಂದಿರುವ ಎಲ್ಲ ವಿದ್ಯಾರ್ಥಿಗಳಿಗೂ ಧರ್ಮದ ಭೇದವಿಲ್ಲದೆ ಅವಕಾಶ ಕಲ್ಪಿಸಬೇಕು. ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದೇ ಸರ್ಕಾರದ ಉದ್ದೇಶವಾಗಿದ್ದರೆ, ಇತರ ಸಮುದಾಯಗಳ ಅರ್ಹ ಯುವಕರಿಗೆ ಅದೇ ರೀತಿಯ ಅವಕಾಶ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕ ಹಣದ ಬಳಕೆಯಲ್ಲಿ ತಾರತಮ್ಯ ಮಾಡಿದಂತಾಗುವುದಿಲ್ಲವೇ? ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ರಾಷ್ಟ್ರದ ಭದ್ರತೆ, ಸೇನಾ ಸೇವೆ ಮತ್ತು ದೇಶಭಕ್ತಿಯಂತಹ ವಿಚಾರಗಳನ್ನೂ ಧಾರ್ಮಿಕ ರಾಜಕಾರಣದ ಚೌಕಟ್ಟಿನಲ್ಲಿ ನೋಡುವುದು ಖಂಡನೀಯ ಎಂದು ಸಂಸದ ಕ್ಯಾ. ಚೌಟ ಆಕ್ರೋಶ ಹೊರಹಾಕಿದ್ದಾರೆ.

ಈ ಯೋಜನೆಯ ಟೆಂಡರ್‌ನ ಸಂಪೂರ್ಣ ವಿವರ, ವೆಚ್ಚ, ಅರ್ಹತಾ ಮಾನದಂಡ ಮತ್ತು ಸಾರ್ವಜನಿಕ ಹಣದ ಬಳಕೆಯ ಕುರಿತು ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕು. ಕರ್ನಾಟಕದ ಪ್ರತಿಯೊಬ್ಬ ತೆರಿಗೆದಾರನಿಗೂ ಈ ಪ್ರಶ್ನೆ ಕೇಳುವ ಹಕ್ಕಿದೆ. ಜಾತ್ಯತೀತತೆಯ ಹೆಸರಿನಲ್ಲಿ ಅಧಿಕಾರ ನಡೆಸುವ ಸರ್ಕಾರ ಮೊದಲು ಸಂವಿಧಾನದ ಸಮಾನತೆಯ ಆಶಯವನ್ನು ಪಾಲಿಸಲಿ. ತುಷ್ಟೀಕರಣದ ರಾಜಕಾರಣವನ್ನು ಬದಿಗಿಟ್ಟು, ದೇಶದ ಯುವಶಕ್ತಿಯನ್ನು ಒಗ್ಗೂಡಿಸುವ ಕೆಲಸ ಮಾಡಲಿ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!