ಉಜ್ಜಯಿನಿ (ಮಧ್ಯಪ್ರದೇಶ): ಸಾಮಾನ್ಯವಾಗಿ ಧರ್ಮ ಎಂಬುದುಕೇವಲ ವಯಸ್ಸಾದವರಿಗೆ ಸಂಬಂಧಿಸಿದ್ದು ಎಂದು ಭಾವಿಸುವ ಈ ಕಾಲಘಟ್ಟದಲ್ಲಿ, ಇಂದಿನ ಯುವ ಪೀಳಿಗೆಯು (ಜೆನ್-ಝಿ) ಅದರ ಬಗ್ಗೆ ಚರ್ಚಿಸುತ್ತಿರುವುದನ್ನು ಕಂಡು ನನಗೆ ಸಂತಸವಾಗಿದೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ‘ರಾಷ್ಟ್ರೀಯ ಯುವ ಧರ್ಮ ಸಂಸದ್’ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ‘ಧರ್ಮ ಎನ್ನುವುದು ಕೇವಲ ಆಚರಣೆಯಲ್ಲ, ಅದು ನಮ್ಮ ನಡವಳಿಕೆ ಹಾಗೂ ಡಿಎನ್‌ಎಯಲ್ಲೇ ಇದೆ. ಅಲ್ಲದೇ ಅದು ನಮ್ಮ ಕ್ರಿಯೆಗಳಿಗೆ ಮಾರ್ಗದರ್ಶನ ನೀಡುತ್ತದೆ’ ಎಂದಿದ್ದಾರೆ.ಈ ಕಾರ್ಯಕ್ರಮದಲ್ಲಿ ಸುಮಾರು 1,700 ಯುವ ವಿದ್ಯಾರ್ಥಿಗಳು ಭಾಗಿಯಾಗಿದ್ದರು.ಧರ್ಮದ ನಿಜವಾದ ಸಾರವನ್ನು ಅರ್ಥಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬ ಯುವಕನೂ ತನ್ನ ಮನಸ್ಸಿನಲ್ಲಿರುವ ಪೂರ್ವಗ್ರಹ ಪೀಡಿತ ಕಲ್ಪನೆಗಳನ್ನು ತೊರೆದು ಮುಕ್ತ ಮನಸ್ಸಿನಿಂದ ಆಲೋಚಿಸಬೇಕು ಎಂದೂ ಅವರು ಕರೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 300ಕ್ಕೂ ಹೆಚ್ಚು ವಿದ್ವಾಂಸರು, ಸಂಶೋಧಕರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
















































